ಚಿಕ್ಕಮಗಳೂರು

ಬೀಳುವ ಭಯದಲ್ಲಿ ಮಿನಿ ವಿಧಾನಸೌಧ

Published On :

ಕಪ್ರ ವಾರ್ತೆ   ತರೀಕೆರೆ   ಜೂ.27
ರಸ್ತೆ ಹಾಳಾಗಿದ್ದರೆ ಮತ್ತೆ  ದುರಸ್ತಿ ಮಾಡಿಸಬಹುದು. ದೇವಸ್ಥಾನ ಶಿಥಿಲವಾಗಿದ್ದರೆ ಕಷ್ಟಪಟ್ಟು ಜೀರ್ಣೋದ್ಧಾರ ಮಾಡಬಹುದು ಆದರೆ ಬಹು ದೊಡ್ಡದಾದ, ಅಷ್ಟೇ ವಿಶಾಲವಾದ ಅಧಿಕಾರದ  ಕೇಂದ್ರವಾಗಿರುವ ಕಟ್ಟಡವೊಂದು ಅಡಿಯಿಂದ ಮುಡಿತನಕ ಅಂದರೆ, ತಳಪಾಯದಿಂದ ಚಾವಣಿ ತನಕ ದುರಸ್ತಿಗೆ ಬಾರದಷ್ಟು ಹಾಳಾಗಿದ್ದರೆ ಅಂತಹ ಕಟ್ಟಡವನ್ನು ಸಂಪೂರ್ಣ ಕೆಡವಿ ಪುನರ್ ನಿರ್ಮಾಣ ಮಾಡುವುದೊಂದೇ  ಏಕೈಕ ಪರಿಹಾರ.
 ತರೀಕೆರೆ ಕಂದಾಯ ಉಪವಿಭಾಗದ ಲಕ್ಷಾಂತರ ಸಾರ್ವಜನಿಕರ ಆಶಾಸೌಧ, ಸರ್ಕಾರದ ಬಹು ದೊಡ್ಡ  ಆಡಳಿತ ಕೇಂದ್ರವಾಗಿರುವ ತರೀಕೆರೆ ಮಿನಿವಿಧಾನಸೌಧ ದುರಸ್ತಿಗೆ ಬಾರದಷ್ಟು ಹಾಳಾಗಿದೆ. ಅಕ್ಕಪಕ್ಕದ ಬೇರೆ ಊರುಗಳಲ್ಲಿ ನೂತನವಾಗಿ ಮಿನಿ ವಿಧಾನಸೌಧ ಉದ್ಘಾಟನೆಯಾಗುತ್ತಿದ್ದರೆ, ತರೀಕೆರೆ ಮಿನಿವಿಧಾನಸೌಧವನ್ನು ಸಂಪೂರ್ಣ ಉರುಳಿಸಲೇಕು ಎನ್ನುವ ಸ್ಥಿತಿಗೆ ತಲುಪಿದೆ.
ರಿಸ್ಕ್ ಬೇಡವೇ ಬೇಡ: ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿದ ತರೀಕೆರೆ ಹಳೇ ತಾಲೂಕು ಆಫೀಸ್, ಜೈಲು ಕಟ್ಟಡ ಬಲಿಷ್ಠವಾಗಿ ಇಂದಿಗೂ ಅಚ್ಚಳಿಯದೇ ನಿಂತಿದೆ.  ಆದರೆ ಸ್ವಾತಂತ್ರ್ಯಾನಂತರ ನಿರ್ಮಾಣವಾದ  ಈ ಮಿನಿವಿಧಾನ ಸೌಧ ಹೆಸರಿನ ಕಟ್ಟಡವನ್ನು ಕೆಡವಲು ಸರ್ಕಾರ ರಿಸ್ಕ್ ತೆಗೆದುಕೊಳ್ಳುವುದೇ ಬೇಡ, ಇಂತದೇ ವಾತಾವರಣ ಮುಂದುವರಿದರೆ ಯಾವಾಗ ಬೇಕಾದರೂ ಇಡೀ ಕಟ್ಟಡ ತನಗೆ ತಾನೆ ಕಳಚಿ ಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇದು ಜ್ಯೋತಿಷಿಗಳ ಭವಿಷ್ಯವಲ್ಲ,  ಎಂಜಿನಿಯರರ ಊಹೆಯೂ ಅಲ್ಲ,  ಜನಸಾಮಾನ್ಯರು ಯಾರು ಬೇಕಾದರೂ ಕಟ್ಟಡವನ್ನು ನೋಡಿದರೆ ತಕ್ಷಣವೇ ಅವರಿಗೆ ಈ ಭಾವನೆ ಬಂದರೆ ಆಶ್ಟರ್ಯ ಪಡಬೇಕಾಗಿಲ್ಲ.
ಭಯದಿಂದ ಕರ್ತವ್ಯ: ಸರ್ಕಾರದ ವಿವಿಧ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಒಂದು ಕಚೇರಿಯಿಂದ ಮತ್ತೊಂದಕ್ಕೆ ಅಲೆದಾಡುವುದನ್ನು ತಪ್ಪಿಸುವ ಮಹದುದ್ದೇಶದಿಂದ ನಿರ್ಮಾಣವಾಗಿರುವ ಮಿನಿ ವಿಧಾನಸೌಧದ ವಿಶಾಲವಾದ ಕಟ್ಟಡದಲ್ಲಿ ಎ.ಸಿ. ತಹಸೀಲ್ದಾರ್, ಉಪ ತಹಸೀಲ್ದಾರ್,  ಆಹಾರ ಇಲಾಖೆ,  ಸರ್ವೇ ಇಲಾಖೆ, ತೂಕ ಮತ್ತು ಅಳತೆ ಇಲಾಖೆ, ಸಬ್ ರಿಜಿಸ್ಟ್ರಾರ್,  ಉಪಖಜಾನೆ ಇತ್ಯಾದಿ ಹಲವಾರು ಕಚೇರಿ ಈ ಕಟ್ಟಡದಲ್ಲೇ ಇದ್ದು ಬಹುತೇಕ ಎಲ್ಲ ನೌಕರರು ಭಯದಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಳೆಯಿಂದ ಸೋರಿ ಎತ್ತರದ ಗೋಡೆಗಳೆಲ್ಲಾ ಪಾಚಿಕಟ್ಟಿ ಬಿರುಕು ಬಿಟ್ಟಿದ್ದು, ಯಾವಾಗ ಬೇಕಾದರೂ ತಲೆ  ಮೇಲೆ ಕಳಚಿ ಬೀಳಬಹುದು.
ಕೆರೆಯೋ ಕಾರಿಡಾರೋ: ಸಣ್ಣಗೆ ಸೋನೆ ಮಳೆ ಬಂದರೂ ಸಾಕು, ಚಾವಣಿಯಿಂದಲೇ ಸೋರಿ ಮಿನಿ ವಿಧಾನಸೌಧ  ಕಟ್ಟಡದ ಒಳ ಭಾಗದ ಕಾರಿಡಾರ್ನಲ್ಲಿ ಕೆರೆಯಂತೆ ನೀರು ನಿಂತು ಬಿಡುತ್ತದೆ. ಮಹಡಿಯ ಮೆಟ್ಟಿಲುಗಳೆಲ್ಲೆಲ್ಲಾ ನೀರೋ ನೀರು, ವಯಸ್ಸಾದವರ ಮಾತು ಹಾಗಿರಲಿ, ಸದೃಢರು ಈ ಮೆಟ್ಟಿಲುಗಳನ್ನು ಹತ್ತುವುದಕ್ಕೆ ಕ್ಷಣ ಕಾಲ ಯೋಚಿಸಬೇಕು.
ಮೇಲಾಗಿ ನಯವಾದ ಗಾರೆ ನೆಲ ಬೇರೆ. ಜೋರಾಗಿ ಮಳೆ ಬಂದರಂತೂ ಮೇಲಿನಿಂದ ನೀರು ಜಿನುಗುವುದರಿಂದ ಕಚೇರಿಯ ಒಳಭಾಗದಲ್ಲೂ ಕೊಡೆ  ಹಿಡಿದೇ ಕೆಲಸ ಮಾಡಬೇಕಾಗುತ್ತದೆ. ಸೋರುವ ನೀರಿಗೆ ಸರ್ಕಾರಿ ದಾಖಲೆಯಾದರೇನು, ಕಂಪ್ಯೂಟರ್ ಮೇಲಾದರೇನು, ಮಳೆ ನಿಂತರೂ ಮಿನಿ ವಿಧಾನ ಸೌಧದಲ್ಲಿ ಮಾತ್ರ ಹನಿ ಬೀಳುತ್ತಲೇ ಇರುತ್ತದೆ. ಇಡೀ ಕಟ್ಟಡದ ಗೋಡೆ, ಚಾವಣಿ ನೀರಿನಿಂದ ತೊಯ್ದು ಥಂಡಿಯೋ ಥಂಡಿ.
ಹಣದ ಕೊರತೆ: ಮಿನಿ ವಿಧಾನಸೌಧದ ತಿಂಗಳ ವಿದ್ಯುತ್ ಬಿಲ್ ಕಟ್ಟಲು ಮಾತ್ರ ಅವಕಾಶ ಇದೆ. ಮಿಕ್ಕಂತೆ ಕಟ್ಟಡ ವಾರ್ಷಿಕ ದುರಸ್ತಿ ಕಾರ್ಯ, ಸುಣ್ಣ ಬಣ್ಣ ಇತ್ಯಾದಿಗಳಿಗೆ ನಯಾ ಪೈಸೆಯೂ ಇಲ್ಲ.
ಕಟ್ಟಡದ ದಯನೀಯ ಸ್ಥಿತಿ ಮತ್ತು ಹಾಳಾಗುತ್ತಿರುವ ಕುರಿತು, ಎಸ್ಟಿಮೇಟ್ ತಯಾರಿಸಿ, ದುರಸ್ಥಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ, ಉನ್ನತ ಅಧಿಕಾರಿಗಳಿಗೆ  ಪತ್ರ ಬರೆಯಲಾಗಿದೆ ಎಂದು ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್  ತಿಳಿಸಿದ್ದಾರೆ. ಆದರೆ ಪರಿಣಾಮ ಮಾತ್ರ ಶೂನ್ಯ.
ಸರ್ಕಾರ  ಬದಲಾಯಿತು: ಕಟ್ಟಡ ನಿರ್ಮಾಣವಾದ ಮೇಲೆ ಅನೇಕ ಸರ್ಕಾರಗಳು ಬದಲಾಯಿತು, ಸಚಿವರು, ಶಾಸಕರು  ಬದಲಾದರು, ಆದರೆ ಸಾರ್ವಜನಿಕರಿಗೆ, ಸರ್ಕಾರಕ್ಕೆ ಅತಿ ಅವಶ್ಯಕವಾದ, ಸದ್ಯ ಹಾಳಾಗಿರುವ ಈ ಮಿನಿ ವಿಧಾನ ಸೌಧದ ಕಟ್ಟಡದ ಕಡೆಗೆ ಯಾರೂ ಗಮನ ಹರಿಸುತ್ತಿಲ್ಲದಿರುವುದು ಶೋಚನೀಯ.
ರಾಜ್ಯದಲ್ಲಿ ಇದೀಗ ಮತ್ತೆ ಹೊಸ ಸರ್ಕಾರ ಬಂದಿದೆ. ಹೊಸ ಕಟ್ಟಡ ನಿರ್ಮಾಣದ ಮಾತು ಹಾಗಿರಲಿ ಇರುವ ಕಟ್ಟಡವನ್ನಾದರೂ ಜನರ ಸುರಕ್ಷತೆ ದೃಷ್ಟಿಯಿಂದ ದುರಸ್ತಿಗೆ ಮನಸ್ಸು ಮಾಡಲಿ ಎಂಬುದೇ ಸಾರ್ವಜನಿಕರ ಅಭಿಪ್ರಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.