ಚಿಕ್ಕಮಗಳೂರು

ತಿರುಪತಿ ಯಾತ್ರೆಗೆ ಶುಭ ಹಾರೈಕೆ

Published On :

ಕ.ಪ್ರ.ವಾರ್ತೆ, ಕಡೂರು, ಮಾ.4
ಇಲ್ಲಿನ ರೈಲು ನಿಲ್ದಾಣದಿಂದ ಜೆಡಿಎಸ್ ಆಯೋಜಿಸಿದ್ದ ವಿಶೇಷ ರೈಲಿನಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಹಲವಾರು ಗ್ರಾಮಗಳಿಂದ ತಿರುಪತಿ ಯಾತ್ರೆಗೆ ಹೊರಟಿದ್ದ ಸಾವಿರಾರು ಭಕ್ತರಿಗೆ ವಿಪ ಮಾಜಿ ಸದಸ್ಯ ವೈ.ಎಸ್.ವಿ. ದತ್ತ ಶುಭ ಕೋರಿದರು.    
ಕ್ಷೇತ್ರದ ದೊಡ್ಡಪಟ್ಟಣಗೆರೆಯ ಪಂಚೆಹೊಸಳ್ಳಿ, ಎರೇಹಳ್ಳಿ, ಜೀಗಣೇಹಳ್ಳಿ ಮೊದಲಾದ ಭಾಗದ ಸಾವಿರಾರು ಭಕ್ತರು ತಿರುಪತಿ ಯಾತ್ರೆ ಹೊರಟ ಹಿನ್ನೆಲೆಯಲ್ಲಿ ಪಂಚೆಹೊಸಳ್ಳಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈ.ಎಸ್.ವಿ.ದತ್ತರವರು ಕಡೂರು ರೇಲ್ವೇ ನಿಲ್ದಾಣದಲ್ಲಿ ತಿರುಪತಿ ಯಾತ್ರೆಗೆ ವಿಶೇಷ ರೈಲಿನಲ್ಲಿ ತೆರಳುತ್ತಿದ್ದ ಸುಮಾರು 1500ಕ್ಕೂ ಹೆಚ್ಚಿನ ಭಕ್ತರನ್ನು ಭೇಟಿ ಮಾಡಿ ಶುಭ ಹಾರೈಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಉತ್ತಮ ಸಂಪ್ರದಾಯ: ರಾಜ್ಯದಲ್ಲಿಯೇ ಅಲ್ಪಸಂಖ್ಯಾತ ಸಮುದಾಯವಾಗಿರುವ ತೆಲುಗು ಗೌಡ ಸಮುದಾಯವು ಕಡೂರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಸಮುದಾಯ ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದೆ. ಆದರೆ ಧರ್ಮ ಮತ್ತು ಸಂಪ್ರದಾಯದ ಆಚರಣೆಯಲ್ಲಿ ಯಾರಿಗೂ ಕಡಿಮೆಯಿಲ್ಲದಂತೆ ನೂರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಇಡೀ ಪರಿವಾರವೇ ಒಟ್ಟಿಗೆ ಸೇರಿಕೊಂಡು ತಿರುಪತಿ ಯಾತ್ರೆಗೆ ತೆರಳುವ ಕನಸು ಇಂದು ನನಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾವು ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಚರ್ಚಿಸಿ ದೇವೇಗೌಡರ ಪ್ರಯತ್ನದಿಂದ ಹಾಸನ ಮೈಸೂರು ವಿಭಾಗೀಯ ಅಧಿಕಾರಿಗಳನ್ನು ಸಂಪರ್ಕಿಸಿ ಕಡೂರು ತಿರುಪತಿ ವಿಶೇಷ ರೈಲು ಬಿಡಿಸುವ ಏರ್ಪಾಡು ಮಾಡಿ ರು. 5.25 ಲಕ್ಷವನ್ನು ರೇಲ್ವೇ ಇಲಾಖೆಗೆ ಕಟ್ಟಿ 18 ಬೋಗಿಗಳಿರುವ ರೈಲಿನಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಿಕೊಡಲಾಗಿದೆ ಎಂದರು.  
ಈ ಜನರ ಬಹುದಿನದ ಬೇಡಿಕೆ ಈಡೇರುವ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನ ಮಾಡುವ ಭಾಗ್ಯ ಈ ಜನರಿಗೆ ಒಲಿದು ಬಂದಿದೆ. ಜೆಡಿಎಸ್‌ನಿಂದ ಈ ಏರ್ಪಾಡು ಮಾಡಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ತಮ್ಮ ಹರಕೆಯನ್ನು ತೀರಿಸಿಕೊಂಡು ಬರಲು ಅನುಕೂಲ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಾವು ಜನರಿಗೆ ಸುರಕ್ಷಿತವಾಗಿ ಹೋಗಿ ಬರುವಂತೆ ಶುಭ ಕೋರುತ್ತಿರುವುದಾಗಿ ಹೇಳಿದರು.
ಜೆಡಿಎಸ್ ಮುಖಂಡ ಎನ್. ಇಮಾಮ್, ಮಂಜುನಾಥ ಪ್ರಸನ್ನ, ಡಿ. ಪ್ರಶಾಂತ್, ಜಿಗಣೇಹಳ್ಳಿ ನೀಲಕಂಠಪ್ಪ, ಶಿವರತನ್, ಸೀಗೇಹಡ್ಲು ಹರೀಶ್, ತಮ್ಮಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.