ಚಿಕ್ಕಮಗಳೂರು

ಸಂಘಟನೆ ಮೂಲಕ ಸಮಸ್ಯೆ ಎದುರಿಸಿ

Published On :

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 5
ಜೀವನದಲ್ಲಿ ಮಹಿಳೆ ಸ್ವಾವಲಂಬಿಯಾಗಿ ಬದುಕುವುದರ ಜೊತೆಗೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದು ದೆಹಲಿಯ ನೆಹರು ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯ ಪ್ರೊ.ಡಾ.ಎ.ಆರ್. ವಾಸವಿ ಹೇಳಿದ್ದಾರೆ.
ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಮಹಿಳಾ ಒಕ್ಕಲಿಗರ ಸಂಘ ಮಂಗಳವಾರ ಏರ್ಪಡಿಸಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಧ್ಯಮಗಳ ಮೂಲಕ  ಒಳ್ಳೆಯ ಕಾರ್ಯಕ್ರಮಗಳನ್ನು ವೀಕ್ಷಿಸಿ ಪ್ರಸ್ತುತ ಸಮಾಜದ ಸಮಸ್ಯೆಯನ್ನು ಸಂಘಟನೆಯ ಮೂಲಕ  ಮಹಿಳೆಯರು ಧೈರ್ಯವಾಗಿ ಎದುರಿಸುವಂತೆ ಕಿವಿಮಾತು ಹೇಳಿದರು.
ಸಂಸ್ಕೃತಿ ಗೌರವಿಸಿ: ಆಧುನಿಕತೆಯ ಭರಾಟೆಯಲ್ಲಿ ದೇಶದ ಸಂಸ್ಕೃತಿ ಮರೆಯದೆ ಗೌರವಿಸಬೇಕು. ಶತ ಶತಮಾನಗಳಿಂದ ಮಹಿಳೆಯರನ್ನು ಗೌರವದಿಂದ ಕಂಡ ನಮ್ಮ ಸಂಸ್ಕೃತಿ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಡಿಮೆಯಾಗಿ ದೌರ್ಜನ್ಯಗಳು ಹೆಚ್ಚುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.
ಮಹಿಳೆಯರಿಗೆ ಇರುವ ಕಾನೂನು ಮತ್ತು ಹಕ್ಕುಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಉಪಯೋಗ ಪಡೆಯಬೇಕು. ಇವುಗಳನ್ನು ಪಡೆಯಲು ಅಡ್ಡಿಯುಂಟಾದಲ್ಲಿ ಸಂಘ ಸಂಸ್ಥೆಗಳ ಮೂಲಕ ಹೋರಾಟ ನಡೆಸಬೇಕೆಂದರು.
ಬೆಂಗಳೂರಿನ ನೃತ್ಯ ಪ್ರವೀಣೆ ಸಚ್ಚಿದೇವಿ ಸುಧಾಕರ್ ಮಾತನಾಡಿ, ಭಾರತೀಯ ಕಲೆ, ಸಂಸ್ಕೃತಿ, ನೃತ್ಯಗಳನ್ನು  ಹೆಚ್ಚು ಹೆಚ್ಚು ಆಯೋಜನೆ ಮಾಡುವುದರ ಮೂಲಕ ದೇಶದ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು. ಇದರಲ್ಲಿ ಮಹಿಳೆಯರ ಪಾತ್ರ ಅತಿ ಮುಖ್ಯ. ಪುರುಷರಿಗೆ ಸರಿಸಮನಾಗಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ದುಡಿದು ವಿವಿಧ ಪ್ರಶಸ್ತಿಗಳನ್ನು ಗಳಿಸಿದ್ದಾರೆ ಎಂದರು.
ಮಹಿಳೆಯನ್ನು ಗೌರವಿಸಿ: ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಬಿ.ಎಲ್. ರಾಜೇಶ್ವರಿ ಮಾತನಾಡಿ, ಮಹಿಳೆಯರನ್ನು  ಮಹಿಳೆಯರು ಗೌರವಿಸಿದಾಗ ಮಾತ್ರ ನಿಜವಾದ ಮಹಿಳಾ ಸ್ವಾತಂತ್ರ್ಯ ಲಭಿಸುತ್ತದೆ. ಇಂದು ಮಹಿಳೆ ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿದ್ದು, ಹಿಂದೆ ಅನೇಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆ ಸಮಾಜಕ್ಕೆ ಅನಿವಾರ್ಯವಾಗುವಷ್ಟರ ಮಟ್ಟಿಗೆ ಬೆಳೆದಿದ್ದಾಳೆ ಎಂದು ಹೇಳಿದರು.
ಡಾ.ಎ.ಆರ್. ವಾಸವಿ, ಸಚ್ಚಿದೇವಿ ಸುಧಾಕರ್, ಪ್ರಗತಿಪರ ಕೃಷಿಕರಾದ ಕೊಪ್ಪದ ಉಮಾ ಸತ್ಯನಾರಾಯಣ್, ಕವಯತ್ರಿ ಲಾವಣ್ಯ ಅವರನ್ನು ಸನ್ಮಾನಿಸಲಾಯಿತು. ಇದರ ಜತೆಗೆ ವಿವಿಧ ಕ್ರೀಡೆಯಲ್ಲಿ ವಿಜೇತರಾದವರಿಗೆ  ಬಹುಮಾನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷೆ ಪೂರ್ಣಿಮಾ ಉಮೇಶ್, ಕಾರ್ಯದರ್ಶಿ ಆರತಿ ನಾರಾಯಣ್, ಒಕ್ಕಲಿಗರ ಸಂಘದ ಉಪಾಧ್ಯಕ್ಷೆ ಕನಕ ವೀರೇಶ್, ಗಾಯಿತ್ರಿ ಗೋವಿಂದಸ್ವಾಮಿ, ಲೀಲಾ ನಾಗರಾಜ್, ರಾಗಿಣಿ ರಾಮೇಗೌಡ, ಸಾವಿತ್ರಿ ಸೋಮಶೇಖರ್, ಸ್ಮಿತಾ ಸುನಿಲ್, ಜಾಹ್ನವಿ ಜಯರಾಮ್, ನಿರ್ದೇಶಕರಾದ ಪೂರ್ಣಿಮಾ, ದೇವಕಿ, ಕಲ್ಪನಾ,  ಜಮುನಾ, ಸ್ವಪ್ನ, ಹೇಮಾ ಪ್ರವೀಣ ಉಪಸ್ಥಿತರಿದ್ದರು. ಕಮಲಮ್ಮ ರಘು ಸ್ವಾಗತಿಸಿ, ಪೂರ್ಣಿಮಾ ಗಿರೀಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.