ಕಾನೂರು ಸೇತುವೆ ಮೃತ್ಯುಕೂಪ
ಕ.ಪ್ರ ವಾರ್ತೆ, ನರಸಿಂಹರಾಜಪುರ, ಮಾ.14
ಕಿರಿದಾದ ಸೇತುವೆ, ತಿರುವಿನಿಂದ ಕೂಡಿದ ರಸ್ತೆಯಿಂದಾಗಿ ಅತಿ ವೇಗವಾಗಿ ಬರುವ ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿವೆ ತಾಲೂಕಿನ ಗಡಿ ಭಾಗದ ಕುದುರೆಗುಂಡಿಯ ಕಾನೂರು ಸೇತುವೆ ಹಾಗೂ ಸಮೀಪದ ತಿರುವಿನಿಂದ ಕೂಡಿದ ರಸ್ತೆಗಳು.
ಗುಣಮಟ್ಟದ ರಸ್ತೆಗಳು ವಾಹನ ಸವಾರರಿಗೆ ವರವಾಗಬೇಕಾಗಿತ್ತು. ದುರದೃಷ್ಟವಂದರೆ ಉತ್ತಮ ರಸ್ತೆಗಳೇ ಈಗ ವಾಹನ ಚಾಲಕರಿಗೆ ಸವಾಲಾಗಿವೆ. ನರಸಿಂಹರಾಜಪುರದಿಂದ ಕೊಪ್ಪಕ್ಕೆ ಬರುವ ರಾ.ಹೆ. ಸಂಖ್ಯೆ 65ರ ರಸ್ತೆಯು ಈಗ ಯಾವುದೇ ಹೊಂಡ, ಗುಂಡಿಗಳಿಲ್ಲದೆ ಅತ್ಯುತ್ತಮ ರಸ್ತೆಯಾಗಿದೆ. ಆದರೆ ರಸ್ತೆ ಚೆನ್ನಾಗಿದೆ ಎಂದು ಅತಿ ವೇಗದಿಂದ ಬರುವ ವಾಹನಗಳಿಂದಾಗಿ ಕುದುರೆಗುಂಡಿ ಮುಖ್ಯ ರಸ್ತೆಯ ಕಾನೂರು ಸೇತುವೆ ಸಮೀಪದಲ್ಲಿ ಪ್ರತಿ ನಿತ್ಯ ಒಂದಲ್ಲಾ ಒಂದು ಅಪಘಾತಗಳು ನಡೆಯುತ್ತಲೇ ಇರುತ್ತವೆ.
ಅಪಾಯಕಾರಿ ತಿರುವು: ಗುಡ್ಡೇಹಳ್ಳದಿಂದ ಅಪಾಯಕಾರಿಯಾದ ತಿರುವುಗಳು ಪ್ರಾರಂಭವಾಗಲಿದ್ದು, ಎದುರಿನಿಂದ ಬರುವ ವಾಹನಗಳು ಹತ್ತಿರ ಬಂದಾಗ ಮಾತ್ರ ವಾಹನ ಚಾಲಕರ ಅರಿವಿಗೆ ಬರುತ್ತದೆ. ಶೇಕಡವಾರು ಬಸ್ಸು ನಿಲ್ದಾಣ ದಾಟಿದ ನಂತರ ಆರ್ಡಕ್ ಎಸ್ಟೇಟ್ ಬಸ್ಸು ನಿಲ್ದಾಣ ಸಮೀಪದ ತಿರುವು ಮತ್ತಷ್ಟು ಅಪಾಯಕಾರಿಯಾಗಿದೆ.
ಆ ತಿರುವಿನಲ್ಲಿ ಎದರಿನಿಂದ ಬರುವ ವಾಹನಗಳು ಕಾಣಿಸುವುದೇ ಇಲ್ಲ.ತಿರುವು ದಾಟುತ್ತಿದ್ದಂತೆ ದುತ್ತೆಂದು ಕಾನೂರು ರಸ್ತೆಯಿಂದ ಮುಖ್ಯರಸ್ತೆಗೆ ವಾಹನಗಳು ಬರುತ್ತವೆ. ಕಾನೂರು ರಸ್ತೆಯ ಪಕ್ಕದಲ್ಲೇ ಸೇತುವೆ ಇದ್ದು ಆ ಸೇತುವೆ ಅತಿ ಕಿರಿದಾಗಿದೆ. ಒಂದು ದೊಡ್ಡ ವಾಹನ ಸೇತುವೆ ಮೇಲೆ ಹೋದರೆ ಮತ್ತೊಂದು ವಾಹನ ಹೋಗಲು ಸಾಧ್ಯವಿಲ್ಲ. ಮೂರೂ ದಿಕ್ಕುಗಳಿಂದ ಏಕ ಕಾಲದಲ್ಲಿ ವಾಹನಗಳು ಬಂದು ವಾಹನ ಸಂಚಾರರು ಇಕ್ಕಟ್ಟಿನಲ್ಲಿ ಸಿಕ್ಕಿಕೊಳ್ಳುವ ಸನ್ನಿವೇಶ ಉಂಟಾಗುತ್ತದೆ.
ಅಪಘಾತ ವಲಯ: ಸೇತುವೆಯ ಮತ್ತೊಂದು ಪಕ್ಕದಲ್ಲಿ ಒಂದು ಕಡೆ ಅಡಿಕೆ ತೋಟ ಹಾಗೂ ಮತ್ತೊಂದು ಭಾಗದಲ್ಲಿ ಬತ್ತದ ಗದ್ದೆಗಳಿವೆ. ಕುದುರೆಗುಂಡಿ ಭಾಗದಿಂದ ವೇಗವಾಗಿ ಬರುವ ವಾಹನಗಳಿಗೆ ರಸ್ತೆಯ ತಿರುವು ಹಾಗೂ ಕಿರಿದಾದ ಸೇತುವೆ ದಿಢೀರ್ ಕಾಣುವುದರಿಂದ ಬ್ರೇಕ್ ಹಾಕಿದ ಸಂದರ್ಭದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಈ ಜಾಗದಲ್ಲಿ ವಾಹನಗಳ ಅಪಘಾತ ಸರ್ವೆ ಸಾಮಾನ್ಯವಾಗಿದೆ. ಕೆಲವು ವಾಹನಗಳು ಸೇತುವೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ನಿದರ್ಶನಗಳಿವೆ. ಹೆಚ್ಚಾಗಿ ರಾತ್ರಿ ಸಮಯದಲ್ಲಿ ಅಪಘಾತವಾದ ಉದಾಹರಣೆಗಳೇ ಜಾಸ್ತಿ. ಲೋಕೋಪಯೋಗಿ ಇಲಾಖೆಯ ಮೂಲಗಳ ಪ್ರಕಾರ ರಾಜ್ಯ ಹೆದ್ದಾರಿಯಲ್ಲಿ ಬರುವ ಎಲ್ಲಾ ಸೇತುವೆಗಳಿಗೂ ರೇಡಿಯಂ ಇರುವ ಸ್ಟಿಕ್ಕರ್ಗಳನ್ನು ಹಾಕಲಾಗಿತ್ತು. ಆದರೆ, ದುಷ್ಕರ್ಮಿಗಳು ಆ ಸ್ಟಿಕ್ಕರ್ಗಳನ್ನು ಕಿತ್ತು ಹಾಕಿದ್ದಾರೆ ಎಂದು ಆರೋಪಿಸುತ್ತಾರೆ.
ಎಚ್ಚರಿಕೆ ಫಲಕ ಹಾಕಿ: ರಾತ್ರಿ ಬೇರೆ ಊರಿನಿಂದ ಬರುವ ವಾಹನ ಚಾಲಕರಿಗೆ ವೇಗವನ್ನು ಕಡಿಮೆಗಳಿಸುವ ಬಗ್ಗೆ ರೇಡಿಯಂ ಸ್ಟಿಕ್ಕರ್ ಮೂಲಕ ಅಪಾಯಕಾರಿ ವಲಯ ಎಂಬ ಎಚ್ಚರಿಕೆಯ ನಾಮಫಲಕವನ್ನು ಅರ್ಧ ಕಿ.ಮೀ ಹಿಂದೆ ಹಾಕಬೇಕು ಎಂದು ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಸ್ಥಳೀಯರಾದ ರಾಧಾಕೃಷ್ಣ ಅವರ ಸಲಹೆಯಾಗಿದೆ.
ಅಲ್ಲದೆ ಆರ್ಡಕ್ ಎಸ್ಟೇಟ್ ಬಸ್ಸು ನಿಲ್ದಾಣದ ಎದುರು ಬದಿರುಗಳನ್ನು ಸಂಪೂರ್ಣ ತೆಗೆದು ರಸ್ತೆಯನ್ನು ನೇರಗೊಳಿಸಬೇಕು. ಸೇತುವೆಯನ್ನು ಸಾಧ್ಯವಾದರೆ ಮತ್ತಷ್ಟು ಅಗಲಗೊಳಿಸಬೇಕು. ಸೇತುವೆಯಿಂದ ಕುದುರೆಗುಂಡಿ ಕಡೆಗೆ ಕನಿಷ್ಠ 100 ಮೀಟರ್ವರೆಗೆ ರಸ್ತೆಯನ್ನು ಅಗಲಗೊಳಿಸಬೇಕು. ಸೇತುವೆಯಿಂದ 200 ಮೀಟರ್ ದೂರದ ಎರಡೂ ಬದಿಯಲ್ಲಿ ರೇಡಿಯಂ ಸ್ಟಿಕ್ಕರ್ ಹಂಪ್ ಹಾಕಿ ವಾಹನಗಳ ವೇಗವನ್ನು ಕಡಿತ ಮಾಡಿದರೆ ಅಪಘಾತ ಕಡಿಮೆಗೊಳಿಸಬಹುದು ಎಂದು ಸ್ಥಳೀಯರ ಅಭಿಪ್ರಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

