ಚಿಕ್ಕಮಗಳೂರು

ನೀರಿಗೆ ಬರ: ಕಂಗೆಟ್ಟ ಕಡೂರು

Published On :

ಕ.ಪ್ರ.ವಾರ್ತ್ಣೆಕಡೂರ್ಣು ಮಾ.21: ಯಾವುದೇ ಶಾಶ್ವತ ನೀರಾವರಿ ಇಲ್ಲದೆ, ಮಳೆಯಿಲ್ಲದೆ ಅಂತರ್ಜಲ ಬತ್ತಿ ಬಯಲು ಪ್ರದೇಶದ ರೈತರ ಕಲ್ಪವೃಕ್ಷ ತೆಂಗು ಹಾಗು ಅಡಿಕೆ ತೋಟಗಳು ಒಣಗುತ್ತಿವೆ. ಮಳೆ ಬಾರದೆ ಕುಡಿಯುವ ನೀರು ಸಿಗದ ಸ್ಥಿತಿ ಎದುರಿಸುತ್ತಿರುವ ಕಡೂರು ತಾಲೂಕಿನ ಜನ ಹಾಗು ರೈತರು ಪ್ರತಿ ದಿನ ಮೋಡ ನೋಡುತ್ತಲೇ ಕಂಗೆಡುವ ಮೂಲಕ ಕೈಚೆಲ್ಲಿ ಕುಳಿತಿದ್ದಾರೆ.                     
 ಈ ತಾಲೂಕಿಗೆ ಸತತ ಮೂರು ವರ್ಷದಿಂದ ತೀವ್ರ ಬರಗಾಲ ಆವರಿಸಿ ರೈತರು, ಜನ, ಜಾನುವಾರುಗಳು ಮಳೆಬಾರದೆ ಕುಡಿಯಲು ನೀರಿಲ್ಲದೆ ಸಂಕಷ್ಟ ಎದುರಿಸುತ್ತಿದ್ದರೆ, ಕಾರ್ಮಿಕರು ಕೆಲಸವಿಲ್ಲದೆ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಜನರ ನಿರೀಕ್ಷೆ ದಿನದಿನಕ್ಕೂ ಹುಸಿಯಾಗುತ್ತ ಮಳೆ ಬರಬಹುದೆಂದು ಪ್ರತಿದಿನ ಆಗಸದತ್ತ ನೋಡುತ್ತಾ ಆಸೆಯಿಂದಲೇ ದಿನಿದೂಡುತ್ತಿದಾರೆ.
ಕುಡಿಯಲು ನೀರಿಲ್ಲ: ಗ್ರಾಮೀಣ ಭಾಗದಲ್ಲಿ ಕುಡಿಯಲು ನೀರಿನ ತತ್ವಾರ ಹೆಚ್ಚಾಗುತ್ತಿದ್ದು ಗಡಸು ಹಾಗು ಪ್ಲೋರೈಡ್‌ಯುಕ್ತ ನೀರನ್ನೇ ಕುಡಿಯುತ್ತಿದ್ದ ಪ್ರತೀ ಗ್ರಾಮಗಳಲ್ಲಿ ಇದ್ದ ಕೊಳವೆಬಾವಿಗಳಲ್ಲಿ ನೀರು ಬರಿದಾಗುತ್ತಿದೆ.  ಕೇವಲ 180-300 ಅಡಿಗೆ ಸಿಗುತ್ತಿದ್ದ ನೀರು ಈಗ 500- 750 ಅಡಿ ಕೊರೆದರೂ ನೀರು ಸಿಗದೆ ಹೊಸ ಕೊಳವೆಬಾವಿಗಳು ವಿಫಲವಾಗುತ್ತಾ ನೀರಿನ ಸಮಸ್ಯೆ ಗಂಭೀರ ಸ್ಥಿತಿಗೆ ಹೋಗಿದೆ.
 ಶಾಶ್ವತ ನೀರಾವರಿ ಹಾಗು ನೀರಿನ ಸೆಲೆ ಇಲ್ಲದಿರುವುದು ಕಡೂರು ತಾಲೂಕು ಸಂಕಷ್ಟಕ್ಕೆ ಸಿಲುಕಿ ತೋಟ ಜಮೀನು ಹಾಳಾಗಲು ಕಾರಣವಾಗಿದೆ. ಹಾಗೋ ಹೀಗೋ ಕೊಳವೆಬಾವಿ ನೀರಿನಿಂದ ಹಸಿರಾಗಿದ್ದ ಅಡಿಕೆ ತೋಟಗಳು ನೀರಿಲ್ಲದೆ ಒಣಗಿ ನಿಂತಿರುವ ದೃಶ್ಯವನ್ನು ಎಲ್ಲೆಡೆ ಕಾಣಬಹುದು.
  ಬಿಸಿಲಿಗೆ ಅಡಿಕೆ ಕಾಯಿ ಉದುರುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕಡೂರು ತಾಲೂಕಿನ ಜೀವಜಲವಾದ ಮದಗದಕೆರೆ ಹಾಗು ಅಯ್ಯನಕೆರೆ ಮಳೆಯಿಲ್ಲದೆ ನೀರಿನ ಸಂಗ್ರಹ ಕಡಿಮೆಯಾಗಿ ತಳಕಾಣುವ ಹಂತ ತಲುಪಿವೆ.                                                                   
ತೆಂಗು ಬೆಳೆಗೆ ರೋಗ: ಎರಡು ವರ್ಷ ನೀರಿಲ್ಲದಿದ್ದರೂ ಸಹ ರೈತರಿಗೆ ಅನ್ನ ಕೊಡುತ್ತಿದ್ದ ಕಲ್ಪವೃಕ್ಷ ತೆಂಗೂ ಕೂಡ ಒಣಗುತ್ತಿವೆ. ಮೊದಲೇ ಗರಿರೋಗ, ನುಸಿಪೀಡೆ ಮತ್ತು ಕಪ್ಪುತಲೆ ರೋಗದಿಂದ ಬಳಲುತ್ತಿದ್ದ ತೆಂಗಿನ ಮರಗಳು ಹೆಚ್ಚುತ್ತಿರುವ ಸುಡು ಬಿಸಿಲಿನ ಜಳಕ್ಕೆ ಒಣಗುತ್ತಾ ಮರಗಳ ಗರಿಗಳು ಒಣಗಿ ಸುಳಿಗಳು ಬೀಳುತ್ತಿವೆ. ಮಳೆಯಿಲ್ಲದೆ ಯಾವ ಬೆಳೆ ಮಾಡದ ಸ್ಥಿತಿಗೆ ತಲುಪಿರುವ ರೈತರಿಗೆ ಕೆಲಸವಿಲ್ಲದಂತಾಗಿದೆ.
 ಸರ್ಕಾರ ಕಡೂರು ತಾಲೂಕು ಅತೀ ಹಿಂದುಳಿದ ತಾಲೂಕೆಂದು ಘೋಷಿಸಿ ಕಾರ್ಮಿಕರ ವಲಸೆ ತಪ್ಪಿಸಲು ಉದ್ಯೋಗ ಸೃಷ್ಟಿ ಮಾಡಿ ಗ್ರಾ.ಪ.ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿ ಕೆಲಸಕ್ಕೆ ಕಾರ್ಮಿಕರನ್ನು ಕರೆದರೆ ಸರ್ಕಾರ ನೀಡುವ ಕೂಲಿ ಸಾಕಾಗುವುದಿಲ್ಲವೆಂದು ಕೆಲಸಕ್ಕೆ ಹೋಗದಿರುವುದರಿಂದ ಜೆಸಿಬಿಗಳು ಕಾರ್ಮಿಕರ ಕೆಲಸ ಆಕ್ರಮಿಸುತ್ತಿವೆ.                                                         
ಮೇವಿನ ಕೊರತೆ: ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು ನೀಡುವ ಸದುದ್ದೇಶದಿಂದ ಹಲವೆಡೆ ಗೋಶಾಲೆಗಳನ್ನು ತೆರೆಯಲಾಗಿತ್ತು. ಕೆಲ ದಿನಗಳ ನಂತರ ಮೇವಿನ ಕೊರತೆಯಿಂದ ಸರ್ಕಾರ ಗೋಶಾಲೆ ಮುಚ್ಚಿರುವುದರಿಂದ ಜಾನುವಾರುಗಳಿಗೆ ನೀರು ಹಾಗು ಮೇವಿನ ಕೊರತೆ ಉಂಟಾಗಿದೆ. ದುರಂತವೆಂದರೆ ಕಳೆದ ಕೆಲ ದಿನಗಳ ಹಿಂದೆ ಪಕ್ಕದ ಹೂಸದುರ್ಗ, ತರೀಕೆರೆ, ಚಿಕ್ಕಮಗಳೂರು ಕಡೆ ಅಲ್ಲಲ್ಲಿ ಮಳೆಯಾಗಿದ್ದರೂ ವರುಣನು ಈ ಭಾಗದಲ್ಲಿ ಮುನಿಸಿಕೊಂಡಿದ್ದಾನೆ.
-ಕಡೂರು ಕೃಷ್ಣಮೂರ್ತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.