ಚಿಕ್ಕಮಗಳೂರು

ವೋಟ್ ಖರೀದಿಗೆ ಬ್ರೇಕ್

Published On :

 ಆರ್. ತಾರಾನಾಥ್
ಕ..ಪ್ರ.ವಾರ್ತೆ,  ಚಿಕ್ಕಮಗಳೂರು
ನೋಟು ಕೊಟ್ಟು ವೋಟ್ ಪಡೆಯುವವರಿಗೆ ಈ ಬಾರಿ ಚುನಾವಣಾ ಆಯೋಗ ಬ್ರೇಕ್ ಹಾಕಲು ಹೊಸ  ನಿಯಮ ಅಳವಡಿಸಿಕೊಂಡಿದೆ. ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಕೆಯಿಂದ ಮತದಾನ ನಡೆಯುವ ದಿನದವರೆಗೆ ಬ್ಯಾಂಕಿನ ಮೂಲಕವೇ ವ್ಯವಹಾರ ನಡೆಸಬೇಕು.
 ಅಂದರೆ, ಚುನಾವಣೆಗೆ ಸ್ಪರ್ಧೆ ಮಾಡುವವರು ಇದಕ್ಕಾಗಿಯೇ ಬ್ಯಾಂಕ್‌ನಲ್ಲಿ ಅಕೌಂಟ್ ಮಾಡಿಸಬೇಕು. ಅಲ್ಲಿ ರು. 16 ಲಕ್ಷ ಠೇವಣಿ ಇಡಬೇಕು. ಬಳಿಕ ಆ ಹಣವನ್ನು ಚುನಾವಣೆಗೆ ಬೇಕಾದ ಸಂದರ್ಭದಲ್ಲಿ ಡ್ರಾ ಮಾಡಿಸುತ್ತಾ ಹೋಗಬೇಕು. ರು. 10,000 ಕ್ಕಿಂತ ಹೆಚ್ಚು ಹಣ ಅದೇ ಅಕೌಂಟ್‌ನಿಂದ ತೆಗೆಯಬೇಕಾದರೆ, ಅದು ಚೆಕ್ ಮೂಲಕ  ಪಡೆಯಬೇಕು. ಅಂದರೆ ಅಭ್ಯರ್ಥಿಗಳು ನೀಡುವ ಬ್ಯಾಂಕಿನ ಅಕೌಂಟನ್ನು ಚುನಾವಣೆಯ ಖರ್ಚು ವೆಚ್ಚದ ಅಧಿಕಾರಿಗಳು ಪ್ರತಿದಿನ ಪರಿಶೀಲಿಸಲಿದ್ದಾರೆ.
 ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವವರು ರು. 5 ಲಕ್ಷದವರೆಗೆ ಖರ್ಚು ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಕಳೆದ ಎರಡು ವರ್ಷದ ಹಿಂದೆ ಈ ವೆಚ್ಚವನ್ನು ರು. 16 ಲಕ್ಷಕ್ಕೆ ಏರಿಸಲಾಗಿದೆ. ಈ ಹಣವನ್ನು ನಾಮಪತ್ರ ಸಲ್ಲಿಕೆಯ ಮೊದಲೇ ಅಕೌಂಟ್‌ಗೆ ಜಮಾ ಮಾಡಬೇಕು.
ಕೋಟ್ಯಂತರ ರು. ಖರ್ಚು: ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವವರು ಮತದಾರರಿಗೆ ಹಣ ಮತ್ತು ಹೆಂಡವನ್ನು ಹಂಚಲು ಕೋಟ್ಯಾಂತರ ರು. ಖರ್ಟು ಮಾಡುತ್ತಾರೆ. ಇದು, ಬಹಿರಂಗ ಸತ್ಯ.
  ತೀವ್ರ ಸ್ಪರ್ಧೆ ಇರುವ ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಯುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗ ಈ ಹೊಸ ನಿಯಮ ಅಳವಡಿಸಿಕೊಂಡಿದ್ದು, ಈ ಸಂಬಂಧ ಜಿಲ್ಲಾ ಮಟ್ಟದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆಯನ್ನು ಕರೆದು ಮಾಹಿತಿಯನ್ನು ನೀಡಲಾಗಿದೆ.
 ಈ ಹೊಸ ನಿಯಮದ ಪ್ರಕಾರ ಅಭ್ಯರ್ಥಿಗಳು ರು. 16 ಲಕ್ಷಕ್ಕಿಂತ ಹೆಚ್ಚು ಹಣವನ್ನು ಚುನಾವಣೆಗೆ ಖರ್ಚು ಮಾಡುತ್ತಿಲ್ಲ. ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಬೇರೆಯವರ ಖಾತೆಗೆ ಹಣ ಜಮಾ ಮಾಡಿ ಅಲ್ಲಿಂದ ಮತದಾರರಿಗೆ ಹಣ ತಲುಪಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ಕೂಡ ಗಮನದಲ್ಲಿಟ್ಟುಕೊಂಡಿರುವ ಚುನಾವಣಾ ಆಯೋಗ ಬ್ಯಾಂಕಿನಲ್ಲಿ ಅಕೌಂಟ್ ಮಾಡಿಸಿ ವ್ಯವಹಾರ ನಡೆಸದೆ ಇರುವ ಖಾತೆಯ ಮೇಲೆ ಕಣ್ಣಿಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದೆ.
 ಅಂದರೆ, ದಿಢೀರ್ ಲಕ್ಷಾಂತರ ರುಪಾಯಿ ಅವರ ಖಾತೆಗೆ ಬಂದರೆ, ಈ ಹಣ ಎಲ್ಲಿಂದ ಬಂತೆಂದು ಪ್ರಶ್ನೆ ಮಾಡುವ, ಅದನ್ನು ಪತ್ತೆ ಹಚ್ಚುವಂತೆ ಸೂಚಿಸಲಾಗಿದೆ.
ಪ್ರತಿದಿನ ವರದಿ: ಈ ಹಿಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳೇ ತಮ್ಮ ಚುನಾವಣಾ ವೆಚ್ಚದ ಮಾಹಿತಿಯನ್ನು ಪ್ರತಿದಿನ ನೀಡುತ್ತಿದ್ದರು. ಈ ಮಾಹಿತಿ ಚುನಾವಣಾ ಆಯೋಗ ನಿಗದಿಪಡಿಸಿದ ವೆಚ್ಚದೊಳಗೆ ಬರುವಂತೆ ನೋಡಿಕೊಳ್ಳಲಾಗುತ್ತಿತ್ತು. ಅಂದರೆ ರು. 100 ಖರ್ಚು ಮಾಡಿ ರು. 1ಲೆಕ್ಕ ನೀಡುತ್ತಿದ್ದರು. ತೆರೆಯ ಮರೆಯಲ್ಲಿ ವೆಚ್ಚ ಮಾಡುತ್ತಿದ್ದ ಹಣದ ಲೆಕ್ಕವನ್ನು ಮರೆ ಮಾಚುತ್ತಿದ್ದರು.
  ಆದರೆ, ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವ  ಅಭ್ಯರ್ಥಿಗಳು ಎಲೆಕ್ಷನ್‌ಗಾಗಿ ಮಾಡಿಸಿರುವ ಬ್ಯಾಂಕಿನ ಅಕೌಂಟ್‌ನಿಂದಲೇ ಹಣ ಪಡೆಯಬೇಕು ಹೀಗೆ ಮಾಡುವುದರಿಂದ ಪ್ರತಿದಿನ ಅದರ ವರದಿ ಪಡೆಯಲು  ಅನುಕೂಲವಾಗಲಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.