ಚಿಕ್ಕಮಗಳೂರು

ಸಚಿವ ರೇಣು ಉಚ್ಚಾಟಿಸಲು ಒತ್ತಾಯ

Published On :

ಕ.ಪ್ರ.ವಾರ್ತೆ ಟಿ ಶಿವಮೊಗ್ಗ  ಟಿ  ಮಾ.26
ಬೆಳಿಗ್ಗೆ ಒಂದು ರೀತಿ, ಸಂಜೆ ಮತ್ತೊಂದು ರೀತಿ ಮಾತನಾಡುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರದು ಸ್ವಾರ್ಥದ ಗೋಸುಂಬೆ ರಾಜಕಾರಣ. ರೇಣುಕಾಚಾರ್ಯ ಬಿಜೆಪಿ ಬಿಟ್ಟು ಬೇರೆ ವೃತ್ತಿ ಮಾಡಲಿ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಿರೀಶ್ ಪಟೇಲ್ ಕಿಡಿಕಾರಿದ್ದಾರೆ. ಎಂ.ಪಿ. ರೇಣುಕಾಚಾರ್ಯ ಅವರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಟೀಕಿಸಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ಕೂಡಲೇ ಪಕ್ಷದ ವರಿಷ್ಠರು ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಮುಖ್ಯಮಂತ್ರಿ ಶೆಟ್ಟರ್ ಅವರು ಸಂಪುಟದಿಂದ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ರೇಣುಕಾಚಾರ್ಯ ವಿರುದ್ಧ ಕಟುಟೀಕೆ ಮಾಡಿದ್ದು, ಇನ್ನೊಂದು ಬಣ್ಣದ ಅಂಗಿ ತೊಟ್ಟುಕೊಳ್ಳಲು ಹೊರಟಿರುವ ರೇಣುಕಾಚಾರ್ಯ ಅವರಿಗೆ ಬಿಜೆಪಿ ನಾಯಕರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದರು.
ರಾಜಕೀಯ ದುರುದ್ದೇಶ: ರೇಣುಕಾಚಾರ್ಯ ಏನೆಂದು ರಾಜ್ಯದ ಜನತೆಗೆ ಗೊತ್ತಿದೆ. ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ನಾಯಕತ್ವವನ್ನು ಒಪ್ಪಿಕೊಳ್ಳದ ರೀತಿಯಲ್ಲಿ ರೇಣುಕಾಚಾರ್ಯ ನಡುವಳಿಕೆ ಇತ್ತು.
2- 3 ವರ್ಷಗಳ ನಂತರ ಡೀವಿ ಸದಾನಂದಗೌಡ ಅವರ ವಿರುದ್ಧ ಈಗ ಆರೋಪ ಮಾಡುವುದರ ಹಿಂದಿನ ರಾಜಕೀಯ ದುರುದ್ದೇಶ ಏನೆಂದು ಎಲ್ಲರಿಗೂ ಗೊತ್ತಾಗಿದೆ ಎಂದರು. ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್‌ಜಿ ಅವರು ತಮ್ಮ ಜೀವನವನ್ನು ಸಾಮಾಜಿಕ ಕಾರ್ಯಕ್ಕೆಂದೇ ಮೀಸಲಿಟ್ಟವರು. ಇವತ್ತಿಗೂ ಸಹ ಸರಳ ಜೀವನವನ್ನು ನಡೆಸುತ್ತಿದ್ದಾರೆ. ಅವರ ವಿರುದ್ಧ ಆರೋಪ ಮಾಡುವುದು ನೀಚತನ ಎಂದು ಹೇಳಿದರು.
ಭಿನ್ನಮತಕ್ಕೆ ಅವರೇ ಕಾರಣ: ಬಿಜೆಪಿ ಪಕ್ಷದಿಂದಲೇ ಅವರು ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿ, ಸಚಿವರಾಗಿ ಅಧಿಕಾರ ಅನುಭವಿಸಿದರು. ಇವರೇ ಪಕ್ಷದಲ್ಲಿ ಭಿನ್ನಮತ ಹುಟ್ಟಲು ಕಾರಣರಾದರು. ಹೈದ್ರಾಬಾದ್, ಗೋವಾ ರೆಸಾರ್ಟ್ ರಾಜಕಾರಣ ಮಾಡಿದರು. ಚುನಾವಣೆ ಬಂದಾಗ ಅವರು ಉತ್ತರ ಕೊಡಬೇಕಾಗುತ್ತದೆ ಎಂದು ಗಿರೀಶ್ ಪಟೇಲ್ ಹೇಳಿದರು.
ಹಿಂದೆ ಅವರು ಯಾರ ವಿರುದ್ಧ ಭಿನ್ನಮತ ಮಾಡಿದ್ದರೋ ಅವರ (ಯಡಿಯೂರಪ್ಪ) ಮೇಲೆ ಈಗ ಪ್ರೀತಿ ತೋರಿಸುತ್ತಿದ್ದಾರೆ.
ತಮ್ಮ ಬಗ್ಗೆ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷ ಜವಾಬ್ದಾರಿ ಕೊಟ್ಟಿದ್ದರಿಂದಲೇ ಹೊನ್ನಾಳಿ ಸೇರಿದಂತೆ ಹಲವಡೆ ಹೋಗಿ ಸಭೆ ನಡೆಸಿದ್ದೇನೆ. ಪಕ್ಷವು ಜಿಲ್ಲಾ ಉಪಾಧ್ಯಕ್ಷ ಎ.ಬಿ. ಹನುಮಂತಪ್ಪ ಅವರ ಮೂಲಕ ಪಟ್ಟಣ ಪಂಚಾಯ್ತಿ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲು ನಿರ್ಧರಿಸಿತ್ತು. ಅದರಂತೆ ನೀಡಲಾಗಿದೆ ಎಂದರು. ಹಿಂದೆಯೂ ಅವರು ಪಕ್ಷದ ವಿರುದ್ಧ ಸಾಕಷ್ಟು ಮಾತನಾಡಿದ್ದರು. ಈಗ ಎಲ್ಲೆ ಮೀರಿದ್ದಾರೆ. ಹಾಗಾಗಿ ಪಕ್ಷ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದರು.ಪಕ್ಷದ ಮುಖಂಡ ಅಣ್ಣಪ್ಪ ಮತ್ತಿತರರು ಗೋಷ್ಠಿಯಲ್ಲಿದ್ದರು.
ಬಿಎಸ್‌ವೈಗೆ 200 ಕೋಟಿ:  ಬಿಜೆಪಿ ದಾವಣಗೆರೆ ಜಿಲ್ಲಾ ಉಪಾಧ್ಯಕ್ಷ ಎ.ಬಿ. ಹನುಮಂತಪ್ಪ ಅವರು ಇದೇ ಸಂದರ್ಭದಲ್ಲಿ ಹೊಸ ಬಾಂಬ್ ಸಿಡಿಸಿದರು. ಈ ಹಿಂದೆ ರೇಣುಕಾಚಾರ್ಯ ಅವರು ಹೈದ್ರಾಬಾದ್ ರೆಸಾರ್ಟ್‌ಗೆ ಹೋಗಿದ್ದಾಗ ನಾವೆಲ್ಲರೂ (ಹೊನ್ನಾಳಿ ಕಾರ್ಯಕರ್ತರು) ಹೀಗೇಕೆ ಮಾಡಿದಿರಿ ಎಂದು ಕೇಳಿದೆವು. ಆಗ ಅವರು ಬಳ್ಳಾರಿಯ ಜನಾರ್ಧನ ರೆಡ್ಡಿ ಅವರಿಂದ ಯಡಿಯೂರಪ್ಪ ಅವರು 200 ಕೋಟಿ ಹಣ ತೆಗೆದುಕೊಂಡಿದ್ದಾರೆ. ಈ ಹಣ ನಮಗಾಗಲಿ, ಪಕ್ಷಕ್ಕಾಗಲಿ ಸಿಗಲಿಲ್ಲ. ಆದ್ದರಿಂದ ಹೈದ್ರಾಬಾದ್‌ಗೆ ಹೋದೆ ಎಂದಿದ್ದರು. ಇದು ಸುಳ್ಳು ಎನ್ನುವುದಾದರೆ ಯಾವುದೇ ಪವಿತ್ರ ಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ. ನಾವೂ ಬರುತ್ತೇವೆ ಎಂದು ಎ.ಬಿ. ಹನುಮಂತಪ್ಪ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.