ಚಿಕ್ಕಮಗಳೂರು

ಕಿರಿದಾಗುತ್ತಿದೆ ಕ್ರೀಡಾಂಗಣ...

Published On :

ಕಡೂರು ಕೃಷ್ಣಮೂರ್ತಿ
ಕ.ಪ್ರ.ವಾರ್ತೆ ಟಿ ಕಡೂರು ಟಿ  ಮಾ.26
ಒಂದು ಕಾಲದಲ್ಲಿ ಇಂದಿರಾಗಾಂಧಿ ಸ್ಟೇಜ್ ಎಂದು ಕರೆಯಲಾಗುತ್ತಿದ್ದ ಕಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿರುವ ತಾಲೂಕು ಕ್ರೀಡಾಂಗಣ ಇದೀಗ ಯಾವುದೇ ಸವಲತ್ತು ಹೊಂದದೆ  ಕ್ರೀಡಾ ಇಲಾಖೆಯ ನಿರ್ಲಕ್ಷ್ಯದಿಂದ ಹೆಸರಿಗೆ ಮಾತ್ರ ತಾಲೂಕು ಕ್ರೀಡಾಂಗಣ ಎಂದು ಕರೆಸಿಕೊಳ್ಳುತ್ತಿದೆ.     
ಸುಮಾರು 5 ದಶಕದ ಹಿಂದೆ ಬೆಂಗಳೂರು ಹೊನ್ನಾವರ ಹೆದ್ದಾರಿ ರಸ್ತೆ ಹಾದು ಹೋಗುವ ಕಡೂರಿನಲ್ಲಿ ಆರಂಭಗೊಂಡ ಸರ್ಕಾರಿ ಫ್ರೌಢಶಾಲೆ ಪಕ್ಕದಲ್ಲಿದ ಮೈದಾನ ವಿದ್ಯಾರ್ಥಿಗಳ ಕ್ರೀಡಾಭ್ಯಾಸಕ್ಕೆ ಉಪಯೋಗವಾಗುತ್ತಿತ್ತು.
ಕಿರಿದಾದ ಮೈದಾನ: ವಿಸ್ತಾರವಾಗಿದ್ದ ಈ ಮೈದಾನದ ಪಕ್ಕದಲ್ಲಿ ಕಾಲೇಜು ಅರಂಭವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ್ದರಿಂದ ಹೆಚ್ಚುವರಿ ಕಟ್ಟಡಗಳ ನಿರ್ಮಾಣದಿಂದಾಗಿ ವಿಸ್ತಾರವಾಗಿದ್ದ ಮೈದಾನ ಕಿರಿದಾಗುತ್ತಾ ಬಂದಿತು.  
1980ರ ದಶಕದಲ್ಲಿ ಈ ಮೈದಾನದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಈ ಮೈದಾನದಲ್ಲಿ ಸಿಮೆಂಟು ಮತ್ತು ಕಬ್ಬಿಣದ ಪೈಪುಗಳಿಂದ ನಿರ್ಮಿಸಲಾಗಿದ್ದ ವೇದಿಕೆಯಿಂದ ಭಾಷಣ ಮಾಡಿದ್ದರಿಂದ ಈ ಮೈದಾನಕ್ಕೆ ಇಂದಿರಾಗಾಂಧಿ ಸ್ಟೇಜ್ ಎಂದೇ ಕರೆಯಲ್ಪಡುವ ಮೂಲಕ ಆ ಸ್ಟೇಜು ಹಲವು ವರ್ಷಗಳ ತನಕ ಇದೇ ಮೈದಾನದಲ್ಲಿದ್ದು, ನಂತರದಲ್ಲಿ ಅದನ್ನು ತೆಗೆಯಲಾಯಿತು.      
ಆನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಪ್ರತಿಯೊಂದು ತಾಲೂಕು ಕೇಂದ್ರದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸಬೇಕೆನ್ನುವ ಸರ್ಕಾರದ ಇರಾದೆಗೆ ತಕ್ಕಂತೆ ಕೋಟ್ಯಂತರ ರು. ವೆಚ್ಚದಲ್ಲಿ ಈ ಸರ್ಕಾರಿ ಕಾಲೇಜಿನ ಮೈದಾನವನ್ನೇ ತಾಲೂಕು ಕ್ರೀಡಾಂಗಣ ಎಂದು ಕರೆಯುವ ಮೂಲಕ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾದವು.
ಮೂಲ ಸೌಕರ್ಯವಿಲ್ಲ: ಆದರೆ ಇಲ್ಲಿ ಸರ್ಕಾರದ ಕಲ್ಪನೆಯಂತೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಯಾವುದೇ ಮೂಲ  ಸವಲತ್ತುಗಳು ಇಲ್ಲದಿರುವುದನ್ನು ಕಾಣಬಹುದು. ಮೊದಲನೆಯದಾಗಿ ಮೈದಾನವನ್ನು ಸಮತಟ್ಟು ಮಾಡದಿರುವುದು. ಹೊಸ ಮೈದಾನವನ್ನು ಅಭಿವೃದ್ಧಿಪಡಿಸದೇ 25 ವರ್ಷದ ಹಿಂದೆ ಹೇಗಿತ್ತೋ ಹಾಗೆಯೇ ಈ ಮೈದಾನ ಇಂದಿಗೂ ಇದೆ. ಅಧಿಕಾರಿಗಳ ಕಲ್ಪನೆಯಂತೆ ಕ್ರೀಡಾಂಗಣವೆಂದರೆ ಮೈದಾನದ ಮುಖ್ಯ ಭಾಗದಲ್ಲಿ ಎತ್ತರದಲ್ಲಿ ಸಿಮೆಂಟ್ ಶೀಟ್‌ನಿಂದ ಕಬ್ಬಿಣದ ಪೈಪು ಬಳಸಿ ಬಿಸಿಲು ತಾಕದಂತೆ ಸ್ಟೇಜ್ ನಿರ್ಮಿಸುವುದು ಮತ್ತು ಸ್ಟೇಜಿನ ಅಕ್ಕಪಕ್ಕದಲ್ಲಿ ಕುಳಿತು ಆಟ ವೀಕ್ಷಿಸಲು ಮೆಟ್ಟಿಲು ನಿರ್ಮಿಸುವುದು ಮಾತ್ರ ಎಂಬಂತಾಗಿದೆ.     
ಕ್ರೀಡಾಂಗಣದ ಕಲ್ಪನೆ ಇಲ್ಲ: ಕಡೂರಿನಲ್ಲಿ ನಡೆಯುವ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ನಗರ ಪ್ರದೇಶಗಳಿಂದ ಬರುವ ಕ್ರೀಡಾಪಟುಗಳು ಬೇರೆ ಕಡೆಯಿರುವ ಕ್ರೀಡಾಂಗಣದ ಕಲ್ಪನೆ ಕೂಡ ಇಲ್ಲಿ ಮಾಡಿಕೊಳ್ಳುವಂತಿಲ್ಲ. ಕ್ರೀಡಾಪಟುಗಳಿಗೆ ಅಗತ್ಯವಾದ ಕೊಠಡಿಗಳಿದ್ದರೂ ಕೂಡ ಅವುಗಳಲ್ಲಿ ಕೆಲವು ಹಿಂದೆ ಇಲಾಖೆಗಳ ಕಚೇರಿ ಉಪಯೋಗಕ್ಕೆ ಮೀಸಲಾಗಿದ್ದು, ಇದೀಗ ಬೇರೆ ಉಪಯೋಗಕ್ಕೆ ಇದ್ದರೆ ಮತ್ತೆ ಕೆಲವು ಶಾಶ್ವತ ಬೀಗ ಮುದ್ರೆ ಹೊಂದಿ ಕ್ರೀಡಾಂಗಣದ ಹಿಂಭಾಗ ಗಲೀಜಿನಿಂದ ಆವೃತವಾಗಿದೆ.
ಕ್ರೀಡಾಂಗಣದ ಪಕ್ಕವಿರುವ ಒಂದು ದೊಡ್ಡ ಕೋಣೆ ಮಾತ್ರ ಜಿಮ್ ಪಟುಗಳ ಅಭ್ಯಾಸಕ್ಕೆ ಉಪಯೋಗವಾಗುತ್ತಿದೆ. ಕೆಮ್ಮಣ್ಣಿನ ಮೈದಾನದಲ್ಲಿ ತಗ್ಗು ದಿಣ್ಣೆಗಳಿದ್ದು, ಸಮತಟ್ಟಾಗಿಲ್ಲ. ಕ್ರೀಡಾ ಇಲಾಖೆ ಯಾವುದೇ ಟ್ರಾಕಿಂಗ್ ವ್ಯವಸ್ಥೆ ಮಾಡದೆ ಅಥ್ಲೀಟ್‌ಗಳು ಓಡುವ ಸಂದರ್ಭದಲ್ಲಿ ಬಿದ್ದರೆ ಕೈಕಾಲಿಗೆ ಪೆಟ್ಟು ಮಾಡಿಕೊಂಡಿರುವ ಹಲವು ಪ್ರಕರಣಗಳು ನಡೆದಿವೆ.     
ಕೊಠಡಿ ಇಲ್ಲ ಯಾವುದೇ ಟ್ರಾಕಿಂಗ್ ವ್ಯವಸ್ಥೆ ಇಲ್ಲ. ಕ್ರೀಡಾ ಪಟುಗಳ ಅಭ್ಯಾಸಕ್ಕೆ ಕೊಠಡಿಗಳ ಕೊರತೆ ಇದೆ. ನೀರಿನ ವ್ಯವಸ್ಥೆ ಕೂಡ ಇಲ್ಲ. ಇನ್ನು ಕ್ರೀಡಾಂಗಣವಾಗಿರುವ ಮೈದಾನದ ವಿವಾದ ಬಗೆಹರಿಯದಿರುವುದರಿಂದ ಕಾಂಪೌಂಡ್ ಇಲ್ಲದೆ ಯಾವ ಕಡೆಯಿಂದ ಬೇಕಾದರೂ ಬರುವ ಹಾಗೂ ಹೋಗುವ ವ್ಯವಸ್ಥೆ ಇದ್ದು, ಪ್ರವೇಶದ ಗೇಟ್ ಮಾತ್ರ ಇದೆ.
ಕ್ರೀಡಾರ್ಥಿಗಳಿಗೆ ಮೂಲ ಸವಲತ್ತುಗಳೂ ಇಲ್ಲ. ಜಾಗದ ಕೊರತೆಯಿಂದ ವಿಧಿಯಿಲ್ಲದೆ ವರ್ಷದಲ್ಲಿ ನಡೆಯುವ ಪ್ರಾಥಮಿಕ, ಪ್ರೌಢಶಾಲಾ, ಕಾಲೇಜು ಮಟ್ಟದ ಜಿಲ್ಲಾ ಮಟ್ಟದ ಮತ್ತು ನೌಕರರ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಆಯೋಜಿಸಲಾಗುವ ವಿವಿಧ ಕ್ರೀಡೆಗಳು ನಡೆಯುತ್ತಿದ್ದರೂ, ಕ್ರೀಡಾ ಇಲಾಖೆ ಅಭಿವೃದ್ಧಿಗೆ  ಮುಂದಾಗಿಲ್ಲ.
ಸುಣ್ಣ ಬಣ್ಣವಿಲ್ಲ: ಈಗಿರುವ ಕ್ರೀಡಾಂಗಣದ ಕ್ರೀಡಾಂಗಣ ವೇದಿಕೆ ಸುಣ್ಣಬಣ್ಣ ಕಾಣದೇ ಅದೆಷ್ಟೋ ವರ್ಷಗಳು ಕಳೆದಿವೆ. ಒಟ್ಟಿನಲ್ಲಿ ದೇಶಕ್ಕೆ ಉತ್ತಮ ಕ್ರೀಡಾ ಪ್ರತಿಭೆಗಳನ್ನು ನೀಡಬೇಕೆನ್ನುವ ಸರ್ಕಾರದ ಕನಸು ಅಭಿವೃದ್ದಿ ಕೊರತೆಯಿಂದ ಇಲ್ಲಿ ಸಾಕಾರಗೊಳ್ಳುವಲ್ಲಿ ವಿಫಲವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.