ಚಿಕ್ಕಮಗಳೂರು

ದತ್ತಪೀಠ ರಸ್ತೆ ಕಾಮಗಾರಿ ಮಂದಗತಿ

Published On :

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.28
ದತ್ತಪೀಠಕ್ಕೆ ಹೋಗುವ ರಸ್ತೆಗೆ ಕಾಂಕ್ರಿಟ್ ಹಾಕುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ಕಾಮಗಾರಿ ಆರಂಭವಾಗಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡು ಬಂದಿಲ್ಲ.
ಇಲ್ಲಿನ ರಸ್ತೆಯಲ್ಲಿ 2.35 ಕಿ.ಮೀ. ರಸ್ತೆಗೆ ಕಾಂಕ್ರೀಟ್ ಹಾಕಲು ರಾಜ್ಯ ಸರ್ಕಾರ ರು. 4 ಕೋಟಿ ಬಿಡುಗಡೆ ಮಾಡಿದೆ. ಟೆಂಡರ್‌ದಾರರು ಇಲ್ಲಿವರೆಗೆ 1.6 ಕಿ.ಮೀ. ಮಾತ್ರ ಕಾಮಗಾರಿ ಮುಗಿಸಿದ್ದಾರೆ. ಇನ್ನುಳಿದ ಕಾಮಗಾರಿಗಳು ಬರುವ ಏಪ್ರಿಲ್ ಕೊನೆಯಲ್ಲಿ ಮುಗಿಯಲಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.
ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದರಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸಚಿವ  ಸಿ.ಟಿ. ರವಿ ಟೆಂಡರ್‌ದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಹೊಸದಾಗಿ ಟೆಂಡರ್ ಕರೆಯಲಾಗುವುದು ಎಂದು ಹೇಳಿದ್ದರು. ಆದರೆ, ಈ ಪ್ರದೇಶದಲ್ಲಿ ಈ ಕಾಮಗಾರಿ ತೆಗೆದುಕೊಳ್ಳಲು ಟೆಂಡರ್‌ದಾರರು ಮುಂದೆ ಬರುವುದಿಲ್ಲ. ಆದುದರಿಂದ ಈಗ ಇರುವ ಮಹಾವೀರ್ ಸಂಸ್ಥೆಯೇ ಕಾಮಗಾರಿ ಮುಂದುವರೆಸುತ್ತಿದೆ.
ಕಾಮಗಾರಿ ಆರಂಭದಲ್ಲಿ ಮರಳಿನ ಕೊರತೆ ಉಂಟಾಗಿತ್ತು. ಇದರಿಂದ ಕಾಮಗಾರಿ ಆರಂಭದಲ್ಲೇ ಕೆಲ ಕಾಲ  ಅಡಚಣೆಯಾಗಿತ್ತು. ನಂತರದಲ್ಲಿ ಮರಳು ಸಿಕ್ಕಿದ್ದರಿಂದ ಕಾಮಗಾರಿ ಆರಂಭಿಸಲಾಯಿತು. ಸದ್ಯ ಕಾಮಗಾರಿ ಪ್ರಗತಿ ನೋಡಿದರೆ ಏಪ್ರಿಲ್ ತಿಂಗಳಲ್ಲೂ ಮುಕ್ತಾಯಗೊಳ್ಳುವುದು ಅನುಮಾನ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಪ್ರವಾಸಿಗರಿಗೆ ತೊಂದರೆ: ದತ್ತಪೀಠಕ್ಕೆ ಹೋಗುವ ರಸ್ತೆಗೆ ಕಾಂಕ್ರಿಟ್ ಹಾಕುತ್ತಿರುವುದರಿಂದ ದತ್ತಪೀಠ, ಮಾಣಿಕ್ಯಧಾರಾಕ್ಕೆ ಹೋಗುವ ಪ್ರವಾಸಿಗರಿಗೆ ತುಂಬಾ ಅಡಚಣೆಯಾಗುತ್ತಿದೆ.
ಇದರಿಂದಾಗಿ ಬಹಳಷ್ಟು ಪ್ರವಾಸಿಗರು ಅರ್ಧ ದಾರಿಗೆ ಹೋಗಿ ವಾಪಸ್ ಬರುತ್ತಿದ್ದಾರೆ. ರಸ್ತೆ ಮೇಲೆ ಮರಳು  ಹಾಗೂ ಜಲ್ಲಿ ಹಾಕಿದ್ದರಿಂದ ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.
ಇನ್ನು ಎರಡು ತಿಂಗಳು ಕಳೆದರೆ ಮಳೆಗಾಲ ಆರಂಭವಾಗಲಿದೆ. ಈ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುವುದರಿಂದ ಕಾಮಗಾರಿ ಮುಂದುವರೆಸಲು ಕಷ್ಟವಾಗಲಿದೆ. ಈಗ ಎರಡು ತಿಂಗಳು ಮಾತ್ರ ಬಾಕಿ ಇದೆ. ಈ ಕಾಲಾವಧಿಯೊಳಗೆ ಕಾಮಗಾರಿ ಮುಗಿಸಬೇಕಾಗಿದೆ. ಇಲ್ಲದೆ ಹೋದರೆ ಮತ್ತೆ ಮೂರು ತಿಂಗಳು ಕಾಯಬೇಕಾಗಿದೆ. ಒಟ್ಟಾರೆ ದತ್ತಪೀಠದ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.
ಪ್ರಸ್ತಾವನೆ: ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿರುವ ಪ್ರದೇಶದಲ್ಲಿ ವಾಹನಗಳು ಅತಿ ವೇಗವಾಗಿ ಚಲಿಸುವ ಸಾಧ್ಯತೆ ಹೆಚ್ಚಿದೆ. ಅದುದರಿಂದ ಇಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕಾಗಿದೆ. ಅದುದರಿಂದ ಲೋಕೋಪಯೋಗಿ ಇಲಾಖೆ ತಡೆಗೋಡೆ ನಿರ್ಮಾಣಕ್ಕಾಗಿ ಒಂದು ಕೋಟಿ ರುಪಾಯಿಗಳ ಕ್ರಿಯಾಯೋಜನೆ ಸಿದ್ಧಪಡಿಸಿ ರಾಜ್ಯ  ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಈ ಪ್ರಸ್ತಾಪನೆ ಇಲಾಖೆ ಕಡತದಲ್ಲಿ ಉಳಿದುಕೊಂಡಿದೆ.
ಕಾಂಕ್ರಿಟ್ ರಸ್ತೆ ನಿರ್ಮಾಣದ ಜತೆಗೆ ತಡೆಗೋಡೆ ನಿರ್ಮಾಣಕ್ಕೆ ತಕ್ಷಣಕ್ಕೆ ಮುಂದಾಗದೆ ಹೋದರೆ ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಪ್ರವಾಸಿಗರ ಹಿತದೃಷ್ಟಿಯಿಂದ  ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವ ಜತೆಗೆ ತಡೆಗೋಡೆ ನಿರ್ಮಾಣವಾಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.