ಚಿಕ್ಕಮಗಳೂರು

ಕೈಕೊಟ್ಟ ಹಿಂಗಾರು: ತರಕಾರಿ ದುಬಾರಿ

Published On :

ಕಪ್ರ ವಾರ್ತೆ, ಚಿಕ್ಕಮಗಳೂರು, ಮೇ 16
ಹಿಂಗಾರು ಮಳೆ ಕೈ ಕೊಟ್ಟ ಪರಿಣಾಮ ತರಕಾರಿ ಬೆಲೆ ಗಗನಕ್ಕೆ ಏರಿದೆ. ಎಲ್ಲಾ ತರಕಾರಿ ಹಾಗೂ ಸೊಪ್ಪಿನ ಬೆಲೆ ದುಪ್ಪಟ್ಟು ಆಗಿದೆ.
ಮುಂಗಾರು ಆರಂಭದ ಮೊದಲು ಹಿಂಗಾರು ಮಳೆಗೆ ರೈತರು ತರಕಾರಿ ಹಾಗೂ ಸೊಪ್ಪು ಬೆಳೆಯುತ್ತಾರೆ. ಆದರೆ, ಈ ಬಾರಿ ಹಿಂಗಾರು ಮಳೆ ಬಾರದೆ ಇದ್ದರಿಂದ ರೈತರು ತರಕಾರಿ ಬೆಳೆದಿಲ್ಲ. ಇದರಿಂದಾಗಿ ತರಕಾರಿ ದುಬಾರಿಯಾಗಿದೆ.
ಬೆಲೆಯಲ್ಲಿ ದುಪ್ಪಟ್ಟು: ಕಳೆದ ವಾರ ಚಿಕ್ಕಮಗಳೂರು ಮಾರುಕಟ್ಟೆಯಲ್ಲಿ ಬೀನ್ಸ್ ಕೆಜಿಗೆ 30 ರುಪಾಯಿ, ಹಸಿ ಮೆಣಸಿನಕಾಯಿ ಕೆಜಿಗೆ 30 ರುಪಾಯಿ, ಟೋಮ್ಯಾಟೋ 20, ಹಿರೇಕಾಯಿ 25 ರುಪಾಯಿ ಇತ್ತು. ಆದರೆ, ಬುಧವಾರದಂದು ಚಿಕ್ಕಮಗಳೂರು ಸಂತೆಯಲ್ಲಿ ಬೀನ್ಸ್ ಕೆಜಿಗೆ 60 ರುಪಾಯಿ, ಹಸಿ ಮೆಣಸಿನಕಾಯಿ 60 ರುಪಾಯಿ, ಟೋಮ್ಯಾಟೋ 30 ರುಪಾಯಿ, ಹಿರೇಕಾಯಿ 40 ರುಪಾಯಿ, ಸಂಬಾರು ಸೊಪ್ಪು, ಕೊತ್ತಂಬರಿ ಸೊಪ್ಪು ಸೇರಿದಂತೆ ಇತರೆ ಎಲ್ಲಾ ಸೊಪ್ಪುಗಳು ಕಟ್ಟಿಗೆ 5 ರುಪಾಯಿ ಇತ್ತು.
ಮೊದಲ ಬಾರಿಗೆ ಏರಿಕೆ: ತರಕಾರಿ ಬೆಲೆ ದುಬಾರಿಯಾಗಿದ್ದರಿಂದ ಗ್ರಾಹಕರು ಖರೀದಿ ಮಾಡಲು ಹಿಂದೇಟು ಹಾಕುವುದರಿಂದ ವ್ಯಾಪಾರಸ್ಥರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿಯನ್ನು ಮಾರುಕಟ್ಟೆಗೆ ಹಾಕಿರಲಿಲ್ಲ. ಎಷ್ಟೊಂದು ದುಬಾರಿ ಯಾಕೆಂದು ಗ್ರಾಹಕರು ಕೇಳಿದಾಗ ವ್ಯಾಪಾರಸ್ಥರಿಂದ ಬಂದ ಉತ್ತರ, ತರಕಾರಿ ಬರ್ತಾ ಇಲ್ಲ.
ಬೇರೆ ಜಿಲ್ಲೆಯಿಂದ ಬಂದಿದ್ದು ಇಷ್ಟೆ. ಅದರಲ್ಲಿ ವ್ಯಾಪಾರ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದರು. ಇತ್ತೀಚಿನ ದಿನಗಳಿಗೆ ಹೋಲಿಕೆ ಮಾಡಿದರೆ ಇದೇ ಮೊದಲ ಬಾರಿಗೆ ತರಕಾರಿ ಬೆಲೆ ಏರಿಕೆಯಾಗಿದೆ.
ಮುಂಗಾರು ಮಳೆ ವೈಫಲ್ಯ: ಚಿಕ್ಕಮಗಳೂರು ಮಾರುಕಟ್ಟೆಗೆ ಪ್ರಮುಖವಾಗಿ ಕಡೂರು ತಾಲೂಕಿನ ಎಮ್ಮೆದೊಡ್ಡಿ, ಸಖರಾಯಪಟ್ಟಣ ಹೋಬಳಿ ಹಾಗೂ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯಿಂದ ಈ ಸಂದರ್ಭದಲ್ಲಿ ತರಕಾರಿ ಹಾಗೂ ಸೊಪ್ಪು ಬರುತ್ತದೆ.ಙ
ಆದರೆ, ಕಳೆದ ವರ್ಷ ಈ ಪ್ರದೇಶದಲ್ಲಿ ಮುಂಗಾರು ಮಳೆ ವೈಫಲ್ಯವಾಗಿದೆ. ಜತೆಗೆ ಹಿಂಗಾರು ಮಳೆಯೂ ಕೈಕೊಟ್ಟಿದೆ. ಅದುದರಿಂದ ರೈತರು ತರಕಾರಿ ಬೆಳೆದಿಲ್ಲ. ಹಾಗೆನಾದರೂ ಬೆಳೆದಿದ್ದರೆ ನಷ್ಟ ಸಂಭವಿಸುವ ಸಾಧ್ಯತೆ ಹೆಚ್ಚಿದ್ದರಿಂದ ಈ ಸಾಹಸಕ್ಕೆ ಕೈ ಹಾಕಿಲ್ಲ.
ರೈತರ ಪರದಾಟ: ಈ ಪ್ರದೇಶದಲ್ಲಿ ಕೆಲವು ರೈತರು ಪಂಪ್‌ಸೆಟ್ ಮೂಲಕ ನೀರು ಹಾಯಿಸಿ ತರಕಾರಿ ಬೆಳೆಯುತ್ತಾರೆ. ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್‌ವೆಲ್‌ಗಳು ನೀರಿಲ್ಲದೆ ಬರಿದಾಗಿವೆ.
ಅದುದರಿಂದ ಬೋರ್‌ವೆಲ್ ಅವಲಂಬಿತ ರೈತರು ಬೆಳೆದ ತರಕಾರಿ ಬೆಳೆ ನೆಲಕಚ್ಚಿದೆ. ಮುಂಗಾರು ಆರಂಭವಾಗುವ ಮೊದಲು ಹಿಂಗಾರಿನಲ್ಲಿ ತರಕಾರಿ ಬೆಳೆದು ಅದರಿಂದ ಬರುವ ಹಣದಲ್ಲೇ ಬಯಲುಸೀಮೆಯ ರೈತರು ಜೀವನ ನಡೆಸುತ್ತಾರೆ. ಆದರೆ, ಈ ಬಾರಿ ಬೆಳೆ ಇಲ್ಲ.
ಅದ್ದರಿಂದ ರೈತರ ಜೀವನ ಕಷ್ಟವಾಗಿದೆ. ಜತೆಗೆ ಮುಂದಿನ ತಿಂಗಳು ಮುಂಗಾರು ಆರಂಭವಾಗಲಿದ್ದು, ಆಗ ಬಿತ್ತನೆ ಬೀಜ, ಗೊಬ್ಬರ ಖರೀದಿ ಮಾಡಲು ರೈತರು ತರಕಾರಿ ಬೆಳೆಯ ಆದಾಯವನ್ನೇ ನಂಬಿದ್ದರು.
 ಈ ಬಾರಿ ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿ ಮಾಡಲು ಹಣ ಇಲ್ಲದಂತಾಗಿದೆ.
ತರಕಾರಿಗೆ ಒಳ್ಳೆಯ ಬೆಲೆ ಇದೆ. ಆದರೆ, ಇದು ರೈತರ ಪಾಲಿಗೆ ಕನ್ನಡಿಯೊಳಗಿನ ಗಂಟು. ಹೊಲದಲ್ಲಿ ಬೆಳೆ ಇಲ್ಲ. ನಿರೀಕ್ಷೆಯಂತೆ ಹಿಂಗಾರು ಮಳೆ ಬಂದಿದ್ದರೆ, ಬೋರ್‌ವೆಲ್‌ಗಳಲ್ಲಿ ನೀರು ಇದ್ದಿದ್ದರೆ, ಈ ಬಾರಿ ಬಂಪರ್ ಬೆಲೆ ರೈತರಿಗೆ ಸಿಗುತ್ತಿತ್ತು.
ಆದರೆ, ಬೆಲೆ ಏರಿಕೆ ರೈತರಿಂದ ರೈತರಿಗೇನೂ ಅನುಕೂಲ ಇಲ್ಲ. ಒಟ್ಟಾರೆ ದುಬಾರಿ ಬೆಲೆ ಗ್ರಾಹಕರ ಜೇಬು ಖಾಲಿ ಮಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.