ಚಿಕ್ಕಮಗಳೂರು

ಹೆಚ್ಚುತ್ತಿದೆ ಕಾಡಾನೆ ಹಾವಳಿ

Published On :

ಕ.ಪ್ರ.ವಾರ್ತ್ಣೆ ಮೂಡಿಗೆರ್ಣೆ ಮೇ 19 ಇತ್ತೀಚಿನ ದಿನಗಳಲ್ಲಿ ಜನಸಂಖ್ಯಾ ಸ್ಫೋಟದಿಂದಾಗಿ ಕಾಡು ನಾಡಾಗಿ ಪರಿವರ್ತನೆಯಾಗುತ್ತಿದ್ದು, ಕಾಡಿನಲ್ಲಿ ಪ್ರಾಣಿಗಳು ಆಹಾರ ದೊರೆಯದೆ ಆಹಾರಕ್ಕಾಗಿ ನಗರ ಪ್ರದೇಶಗಳಿಗೆ ಆಗಮಿಸುತ್ತಿದೆ.
  ಅದರಲ್ಲೂ ಆನೆಗಳ ಸಂಖ್ಯೆ ಗಣನೀಯವಾಗಿ ಏರಿದ್ದು, ಕಾಡಿನಲ್ಲಿ ಬಿದಿರು ಕಟ್ಟೆಯೊಡೆದು ಆಹಾರಕ್ಕಾಗಿ ಕಾಡಿಗೆ ಸಮೀಪವಿರುವ ತೋಟ ಗದ್ದೆಗಳಿಗೆ ನುಗ್ಗಿ ಹಲಸು, ಬಸರಿಮರ, ಆಲದ ಮರ, ಕಿಚಿಯಾ ಮರಗಳ ಎಲೆಯನ್ನು ಆಹಾರವಾಗಿ ಸೇವಿಸುವುದು ಮತ್ತು ಬೈನೆ ಮರ ಮತ್ತು ಬಾಳೇ ಎಂದರೆ ಆನೆಗಳಿಗೆ ಎಲ್ಲಿಲ್ಲದ ಪ್ರೀತಿ ಅವುಗಳ ಸೇವನೆಗೆ ಆಗಮಿಸುವ ಆನೆಗಳು ತಮ್ಮ ಕಾಲಿಗೆ ಸಿಕ್ಕ ಗದ್ದೆ ತೋಟಗಳನ್ನು ತುಳಿಯುವುದರಿಂದ ಬೆಳೆ ಪೈರುಗಳು ಮತ್ತು ಕಾಫಿ ಗಿಡಗಳು ನಾಶವಾಗುತ್ತಿವೆ.
ಕಳ್ಳಬಟ್ಟಿ ಪಂಚಪ್ರಾಣ: ಕಳ್ಳಬಟ್ಟಿ ಎಂದರೆ ಆನೆಗಳಿಗೆ ಪಂಚ ಪ್ರಾಣವಾಗಿದ್ದು, 5-6 ಕಿ.ಮೀ. ದೂರದಿಂದಲೇ ಅವುಗಳ ವಾಸನೆ ಹಿಡಿಯುವುದರ ಮೂಲಕ ಕಳ್ಳಬಟ್ಟಿ ಸೇವನೆ ಮಾಡಿ ಮತ್ತಿನಲ್ಲಿ ಮನಬಂದಂತೆ ಹಾನಿಮಾಡುವುದರೊಂದಿಗೆ ಸಿಕ್ಕವರನ್ನು ತುಳಿದು ಸಾಯಿಸಿದ ಪ್ರಕರಣಗಳು ಬಹಳಷ್ಟು. ಹೀಗಾಗಿ ಮಾನವ - ಆನೆಗಳ ನಡುವೆ ಸಂಘರ್ಷ ಏರ್ಪಟ್ಟಿದೆ ಎಂದು ಆಲ್ದೂರು ವಲಯ ಅರಣ್ಯಾಧಿಕಾರಿ ಅಬ್ದುಲ್ ಅಜೀಜ್ ತಮ್ಮ ಅಭಿಪ್ರಾಯವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
  ರಾಜ್ಯವು ರಾಷ್ಟ್ರದಲ್ಲಿ ಆನೆ ಸಂರಕ್ಷಿಸುವಲ್ಲಿ ಬಹಳಷ್ಟು ಇತಿಹಾಸ ಹೊಂದಿದೆ. 1879 ರಲ್ಲಿ ಆನೆಗಳ ಸಂರಕ್ಷಣೆಗೆಂದೇ ಒಂದು ಅಧಿನಿಯಮ ಹೊರಡಿಸಲಾಗಿದ್ದು, ಇದರಡಿ ವಿಶೇಷ ಪರವಾನಗಿ ಪಡೆಯದ ಹೊರತು, ಕಾಡಾನೆಗಳನ್ನು ಕೊಲ್ಲುವುದು, ಗಾಯಗೊಳಿಸುವುದು ಮತ್ತು ಸೆರೆ ಹಿಡಿಯುವುದನ್ನು ನಿಷೇಧಿಸಲಾಗಿತ್ತು. ಅಷ್ಟೇ ಅಲ್ಲದೆ 2010 ರಲ್ಲಿ ಭಾರತ ಸರ್ಕಾರ ಆನೆಗಳನ್ನು ಪಾರಂಪರಿಕ ಪ್ರಾಣಿ ಎಂದು ಘೋಷಿಸಿದೆ.  
ಆನೆಗಳ ಆವಾಸ ಸ್ಥಾನ: ರಾಷ್ಟ್ರದಲ್ಲಿ ಆನೆಗಳನ್ನು ಅಸ್ಸಾಂ, ಪಶ್ಚಿಮ ಬಂಗಾಳ, ಜಾರ್ಖಂಡ್, ಚತ್ತೀಸ್‌ಗಡ್, ಕೇರಳ,ತಮಿಳುನಾಡಿನಲ್ಲಿನ ಅರಣ್ಯಗಳಲ್ಲಿ ಕಾಣಬಹುದಾಗಿದೆ. ಅದೇ ರೀತಿಯಲ್ಲಿ ಕರ್ನಾಟಕ ಆನೆಗಳಿಗೆ ಉತ್ತಮ ವಾಸ ಸ್ಥಾನವಾಗಿದೆ.
 2010ರ ಮೈಸೂರು ಆನೆ ಮೀಸಲು ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಏಕ ಕಾಲದಲ್ಲಿ ಆನೆಗಳ ಗಣತಿ ಕಾರ್ಯ ಮಾಡಲಾಗಿದ್ದು ಸರಾಸರಿ ಅಂದಾಜು ಸಂಖ್ಯೆ 5881 ಆಗಿದೆ. ರಾಜ್ಯದಲ್ಲಿ ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಮೈಸೂರು, ಬೆಂಗಳೂರು, ಹಾಸನ, ರಾಮನಗರ, ಉತ್ತರ ಕನ್ನಡ ಜಿಲ್ಲೆಯ 8 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಆನೆಗಳು ಕಂಡು ಬರುತ್ತಿವೆ.
65- 70 ಆಯಸ್ಸು: ಆನೆಗಳು ಸರಾಸರಿಯಾಗಿ 65- ರಿಂದ 70 ವರ್ಷ ಜೀವಿಸುವುದು ಮತ್ತು ಹೆಣ್ಣು ಆನೆಗಳು 8 ರಿಂದ 10ವರ್ಷದೊಳಗೆ ಮರಿ ಹಾಕುವುದರಿಂದ ಆನೆಗಳ ಸಂತತಿ ಏರುತ್ತಿದೆ. ಇತ್ತ ಏರುತ್ತಿರುವ ಜನಸಂಖ್ಯೆಯ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾಮಾಗಾರಿ ಕೈಗೊಳುತ್ತಿರುವುದರಿಂದ ಆನೆಗಳ ಆವಾಸ ಸ್ಥಾನಕ್ಕೆ ಕ್ಷೋಭೆ ಉಂಟಾಗಿ ಮಾನವ- ಆನೆಗಳ ಸಂಘರ್ಷಕ್ಕೆ ಒಂದು ಕಾರಣ ಎಂದರೆ ತಪ್ಪಾಗಲಾರದು.
 ಅಭಿವೃದ್ಧಿ ಕೆಲಸಗಳಿಂದ ಕಾಡಿನ ನಡುವೆ ತಲೆ ಎತ್ತಿದ ಹಲವಾರು ಯೋಜನೆಗಳು ಕಾಡುಗಳನ್ನು ಛಿದ್ರ ಗೊಳಿಸುತ್ತಿರುವ ಕಾರಣ ಕಾಡು- ಕಾಡುಗಳ ನಡುವೆ ಸಂಪರ್ಕ ಕಡಿದುಹೋಗಿದೆ.
   ಇಂತಹ ತೆರೆದ ಪ್ರದೇಶಗಳಲ್ಲಿ ಹಲವು ಗ್ರಾಮಗಳು ತಲೆ ಎತ್ತಿದ್ದರ ಪರಿಣಾಮ ಆನೆಗಳು ಕಾಡಿನ ಒಂದು ಪ್ರದೇಶದಿಂದ ಮತ್ತೊಂದು ಕಾಡನ್ನು ಪ್ರವೇಶಿಸಬೇಕಾದರೆ ದಾರಿ ತಪ್ಪಿದಂತಾಗಿ ಜನರ ವಸತಿ ಪ್ರದೇಶದತ್ತ ಸಾಗುವುದು ಅನಿವಾರ್ಯ  ಪರಿಸ್ಥಿತಿ ಎದುರಾಗಿದೆ.
25 ಸಾವಿರ ಹೆಕ್ಟೇರ್: ಮೂಡಿಗೆರೆ ವಲಯ ಮತ್ತು ಆಲ್ದೂರು ವಲಯದಲ್ಲಿ ಮೀಸಲು ಅರಣ್ಯ ಹಾಗೂ ಡಟ್ಟ ಅರಣ್ಯ 25 ಸಾವಿರ ಹೆಕ್ಟೇರ್ ಹೊಂದಿವೆ.
  ಮೂಡಿಗೆರೆ ಅರಣ್ಯ ವ್ಯಾಪ್ತಿಯಲ್ಲಿ ಬೆಳಗೋಡು, ಕುಂಡ್ರದಲ್ಲಿರುವ ಕಾಡಾನೆಗಳು 4 ಗಂಡಾನೆಗಳು ಆಗಿದ್ದು, ಮತ್ತೊಂದು ಹೆಣ್ಣು ಹಾಗೂ ಮರಿ ಆನೆ, ಆಲ್ದೂರು ವಲಯದಲ್ಲಿ ಸಾರಗೋಡು, ಬೆರಣಗೋಡಿನಲ್ಲಿ ಸುತ್ತುತ್ತಿರುವ 5ಆನೆಗಳಲ್ಲಿ 4 ಗಂಡಾನೆಗಳಾಗಿದ್ದು, 1 ಹೆಣ್ಣಾನೆ.
  ಅರಣ್ಯ ಪ್ರದೇಶದಲ್ಲಿ ಬಿದಿರು ಚಿಗುರುತ್ತಿದ್ದು, ಅವುಗಳ ಸೇವನೆಗೆ ಆನೆಗಳು ಇನ್ನು 4-5 ವರ್ಷ ಕಾಯಬೇಕಾಗಿದೆ. ಮತ್ತು ಅರಣ್ಯಗಳಲ್ಲಿ ಮುಳ್ಳು ಸೋಗೆಗಳು, ಫಾರ್ಥೇನಿಯಂ, ಲಂಟಾನುಗಳು ಬೆಳೆದು ನಿಂತಿದ್ದು, ಹುಲ್ಲುಗಳು ನಶಿಸಿ ಹೋಗಿದ್ದರ ಪರಿಣಾಮ ಆನೆಗಳಿಗೆ ಮೇಯಲು ಹುಲ್ಲುಗಳೇ ಇಲ್ಲದಂತಾಗಿದೆ.
        ಸೌರಶಕ್ತಿ ಬೇಲಿ, ಆನೆ ತಡೆ ಕಂದಕಗಳನ್ನು ನಿರ್ಮಿಸಲಾಗುತ್ತಿದ್ದು, ಕಂದಕ ಮತ್ತು ಬೇಲಿಗಳ ನಿರ್ವಹಣೆ  ಮಾಡುವುದರಿಂದ ಮಲೆನಾಡಿನಲ್ಲಿ  ಮಾನವ- ಆನೆ ಸಂಘರ್ಷವನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದಾಗಿದೆ ಎಂಬುದು ವಲಯ ಅರಣ್ಯಾಧಿಕಾರಿ ಅಬ್ದುಲ್ ಅಜೀಜ್ ಮನವಿ.    ಆನೆಗಳು ಅಥವಾ ಕಾಡು ಪ್ರಾಣಿಗಳು ಕಂಡಲ್ಲಿ ಅವುಗಳಿಗೆ ತೊಂದರೆ ಮಾಡದೆ ಅರಣ್ಯ ಇಲಾಖೆಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.