ಸಾಮಾಜಿಕ ಪ್ರಜ್ಞೆ ಬೆಳೆಸುವ ಮಠಗಳು
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಮೇ 21
ಮಠಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಾಮಾಜಿಕ ಪ್ರಜ್ಞೆ ಬೆಳೆಸುತ್ತವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಜಿಲ್ಲಾ ಒಕ್ಕಲಿಗರ ಸಂಘ, ಜಿಲ್ಲಾ ನಾಗರಿಕ ಗುರುವಂದನಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಬಾಲಗಂಗಾಧರನಾಥ ಸ್ವಾಮೀಜಿಗಳ ದಿವ್ಯ ನಾಮ ಸ್ಮರಣೆ ಹಾಗೂ ಆದಿಚುಂಚನಗಿರಿ ಮಠದ 72ನೆಯ ಜಗದ್ಗುರುಗಳ ಪುರಪ್ರವೇಶ ಮತ್ತು ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮಠ ಒಂದು ವರ್ಗಕ್ಕೆ ಸೀಮಿತವಾಗಿಲ್ಲ, ಎಲ್ಲಾ ಜಾತಿ ಮತ್ತು ಧರ್ಮದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಕೋಮು ಸೌಹಾರ್ಧತೆ ಮತ್ತು ಸಾಮರಸ್ಯ ಮೂಡಿಸುವ ಕಾರ್ಯಕ್ರಮವನ್ನು ಮುಂದುವರೆಸಲಾಗುವುದು ಎಂದರು.
ಜ್ಞಾನ-ವಿಜ್ಞಾನದ ಬೆಳವಣಿಗೆ: ತಂದೆ, ತಾಯಿಗಳು ಮಕ್ಕಳಿಗೆ ಆದರ್ಶ ವ್ಯಕ್ತಿಗಳಾಗಿ ಕಾಣಬೇಕು. ಸಂಸ್ಕೃತಿಗೆ, ಉತ್ತಮ ನಾಗರಿಕತೆ, ಜ್ಞಾನ-ವಿಜ್ಞಾನದ ಬೆಳವಣಿಗೆಗೆ ಮಠ ಕಾರಣವಾಗುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಬಾಲಗಂಗಾಧರನಾಥ ಸ್ವಾಮೀಜಿ ನಗರದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕೊಡಲು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು.
ಅದಮ್ಯ ಆಶಯ: ಒಕ್ಕಲಿಗ ಜನಾಂಗದವರ ಬೌದ್ಧಿಕ ಸ್ತರ ಮೇಲೆತ್ತಬೇಕೆಂಬ ಆಶಯವನ್ನು ಹೊಂದಿದ್ದರು. ಜ್ಞಾನ ಪರಂಪರೆಯ ಉನ್ನತಿ ಏರಿದಾಗ ಸಮಾಜ ಬೆಳೆಯಲು ಸಹಕಾರಿಯಾಗುತ್ತದೆ ಎಂಬ ಅದಮ್ಯ ಆಶಯವನ್ನು ಹೊಂದಿದ್ದ ಸ್ವಾಮೀಜಿ, ದೇಶ, ವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಎಲ್ಲಾ ಜಾತಿ ಮತ್ತು ಧರ್ಮದವರು ಉನ್ನತ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿದ್ದಾರೆಂದು ತಿಳಿಸಿದರು.
ದೈವೀ ಪುರುಷ: ವಿವಿಧ ಮಠಗಳಿಗೆ ಶಿಷ್ಯರನ್ನು ಆಯ್ಕೆ ಮಾಡಿಕೊಳ್ಳುವಾಗ ಅವರಲ್ಲಿರುವ ಶಕ್ತಿಯನ್ನು ಗುರುತಿಸಿ ತಮ್ಮತ್ತ ಸೆಳೆದುಕೊಂಡು ದೈವೀ ಪುರುಷರನ್ನಾಗಿಸಿದ್ದಾರೆ. ಜ್ಞಾನ ಪರಂಪರೆಯ ಮೂಲಕ ಆಂತರಿಕ ದೈವಿ ಪ್ರಜ್ಞೆ ಬೆಳೆಸಿದ್ದರು. ಅವರ ಸಾನ್ನಿಧ್ಯದಲ್ಲಿ ಮೌನದ ಮೂಲಕ ಬೋಧಿಸಿದ್ದರು. ಅಂತರಂಗದ ವಿದ್ಯೆ ಹೇಳಿಕೊಟ್ಟಿದ್ದರು. ಭಕ್ತರಿಗೆ ಮುಕ್ತಿಮಾರ್ಗ ಕಲಿಸಿಕೊಟ್ಟಿದ್ದರು ಎಂದು ಹೇಳಿದರು.
ಅಭಿವೃದ್ಧಿಗೆ ಶ್ರಮಿಸಲಾಗುವುದು: ಸಾನ್ನಿಧ್ಯ ವಹಿಸಿ ಮಾತನಾಡಿದ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಶ್ರದ್ಧೆ ಇದ್ದಲ್ಲಿ ಜ್ಞಾನ ಲಭಿಸುತ್ತದೆ. ಜ್ಞಾನ ಸಂಪತ್ತಿನ ಮೇರು ಪರ್ವತವಾಗಿ ಬಾಲಗಂಗಾಧರನಾಥ ಸ್ವಾಮೀಜಿ ಇರುತ್ತಿದ್ದರು ಎಂದು ಬಣ್ಣಿಸಿದರು. ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ನಡೆಯುವ ದಾರಿಯನ್ನು ಸ್ವಾಮೀಜಿಗಳು ತೋರಬೇಕು, ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಭರವಸೆ: ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ,ಬಾಲಗಂಗಾಧರನಾಥ ಸ್ವಾಮೀಜಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಮೂಲಕ ಪಕ್ಷದ ಜ್ಞಾನವನ್ನು ನೀಡಿದ್ದಾರೆ. ಇಡೀ ಸಮಾಜವನ್ನು ಒಟ್ಟಿಗೆ ನೂತನ ಸ್ವಾಮೀಜಿ ಕೊಂಡೊಯ್ಯಬೇಕು. ಕರಾವಳಿ ಕಡಲ ತೀರದಲ್ಲಿ ಶಾಲೆ ಆರಂಭಿಸಲು ಸ್ವಾಮೀಜಿ ಮುಂದಾಗಿದ್ದು, ಪರಿಸರ ಇಲಾಖೆ ಅನುಮತಿ ನೀಡಿರಲಿಲ್ಲ. ಅನುಮತಿ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಅನುದಾನ ಮುಂದುವರೆಸಿ: ಶಾಸಕ ಸಿ.ಟಿ. ರವಿ ಮಾತನಾಡಿ, ಸಮಾಜಮುಖಿ ಕೆಲಸಕ್ಕಾಗಿ ಬಿಜೆಪಿ ಸರ್ಕಾರ ಮಠಗಳಿಗೆ ನೀಡುತ್ತಿದ್ದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಮುಂದುವರೆಸಬೇಕು. ಬಿಜೆಪಿ ಸರ್ಕಾರ ವಿವಿಧ ಮಠಗಳ ಹುಂಡಿಗಳಿಗೆ ಹಣ ಹಾಕಿಲ್ಲ, ಸಮಾಜಮುಖಿ ಕೆಲಸವನ್ನು ಗಮನಿಸಿ, ಮಠಗಳಿಗೆ ಬರುವ ಭಕ್ತರ ಮೂಲ ಸೌಲಭ್ಯಕ್ಕಾಗಿ ಅನುದಾನವನ್ನು ನೀಡಲಾಗಿದೆ. ಮಠಗಳು ಮಾಡುವ ಕೆಲಸವನ್ನು ಉದಾರ ಮನೋಭಾವದಿಂದ ನೋಡಬೇಕು, ಅವುಗಳಿಗೆ ಅನುದಾನ ನೀಡಬೇಕೆಂದು ಮನವಿ ಮಾಡಿದರು.
ಪುರುಷೋತ್ತಮನಂದನಾಥ ಸ್ವಾಮೀಜಿ, ಶಿವಕುಮಾರನಂದನಾಥ ಸ್ವಾಮೀಜಿ, ಧರ್ಮಪಾಲನಾಥ ಸ್ವಾಮೀಜಿ, ಸೋಮನಾಥನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಗುರುನಾಥನಂದ ಸ್ವಾಮೀಜಿ, ಶ್ರೀಶೈಲನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಜೆ.ಪಿ. ಕೃಷ್ಣೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಐ.ಎಂ. ಮಹೇಶ್ಗೌಡ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಡಿ.ಎನ್. ಜೀವರಾಜ್, ಮುಖಂಡರಾದ ಗೌರಮ್ಮ ಬಸವೇಗೌಡ, ಎಂ.ಆರ್. ಸಣ್ಣಸಿದ್ದೇಗೌಡ, ಡಿ.ಬಿ. ಸುಬ್ಬೇಗೌಡ ಸೇರಿದಂತೆ ಒಕ್ಕಲಿಗರ ಸಂಘದ ಮತ್ತು ನಾಗರಿಕ ಗುರುವಂದನಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ವೇದಿಕೆಯಲ್ಲಿದ್ದರು. ಗೌರವ ಕಾರ್ಯದರ್ಶಿ ಬಿ.ಎಲ್. ಸಂದೀಪ್ ಸ್ವಾಗತಿಸಿದರು, ಎಸ್.ಎಸ್. ವೆಂಕಟೇಶ್ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರ ಪ್ರವೇಶಿಸಿದ ಆದಿಚುಂಚನಗಿರಿ ಮಠದ ನೂತನ ಸ್ವಾಮೀಜಿ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಕತ್ರಿಮಾರಮ್ಮ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಂಚರಿಸಿ, ಒಕ್ಕಲಿಗರ ಸಮುದಾಯ ಭವನ ತಲುಪಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

