ಹಲಸಿನ ಫಸಲಿಗೆ 'ರಬ್ಬರ್' ಹೊಡೆತ
ನರಸಿಂಹರಾಜಪುರ:ತಾಲೂಕಿನ ಅಲ್ಲಲ್ಲಿ ಹೊಸದಾಗಿ ರಬ್ಬರ್ ತೋಟ ಮಾಡುವ ಭರಾಟೆಯಲ್ಲಿ ಹಲಸಿನ ಮರಗಳ ಕೊಂಬೆಗಳನ್ನು ತೆಗೆಯಲಾಗಿದ್ದು, ಇದರಿಂದಾಗಿ ಈ ವರ್ಷ ಶೇ.50 ಹಲಸಿನ ಫಸಲು ಕಡಿಮೆಯಾಗಿದೆ.
ಈಗ ಹಲಸಿನ ಕಾಯಿ ಸೀಜನ್ ಪ್ರಾರಂಭವಾಗಿದೆ. ಬಲಿತ ಹಲಸಿನ ಕಾಯಿಯಿಂದ ಗ್ರಾಮೀಣ ಭಾಗದಲ್ಲಿ ಹಪ್ಪಳ ಮಾಡಲು ಶುರುಮಾಡಿದ್ದರೆ, ಬಯಲು ಸೀಮೆಯಿಂದ ಬರುವ ಪ್ಯಾಪಾರಿಗಳು ಹಲಸು ಖರೀದಿಗೆ ಪ್ರಾರಂಭಿಸಿದ್ದಾರೆ.
ಹೊರ ರಾಜ್ಯಕ್ಕೆ ರವಾನೆ: ತಾಲೂಕಿನ ಬಿ.ಎಚ್. ಕೈಮರವನ್ನು ಕೇಂದ್ರಸ್ಥಳ ಮಾಡಿಕೊಳ್ಳುವ ಮೂಲಕ ಹಲಸಿನ ಕಾಯಿ ವ್ಯಾಪಾರಿಗಳು ಸುತ್ತ ಮುತ್ತಲಿನ ಗ್ರಾಮಗಳಾದ ಕಳ್ಳಿಕೊಪ್ಪ, ರಾವೂರು, ದ್ವಾರಮಕ್ಕಿ, ಹೊಸಕೆರೆ, ಮೆಣಸೂರು, ಕಾದಲದಿಬ್ಬ, ಗುಬ್ಬಿಗಾ ಮುಂತಾದ ಹಳ್ಳಿಗಳಿಂದ ಹಲಸಿನಕಾಯಿ ಖರೀದಿಸಿ ಬಿ.ಎಚ್. ಕೈಮರಕ್ಕೆ ತಂದು ಶೇಖರಿಸುತ್ತಾರೆ.
ಒಂದು ಲಾರಿ ಲೋಡು ಹಲಸಿನ ಕಾಯಿ ಭರ್ತಿ ಆದ ನಂತರ ಆಂಧ್ರ, ಬಾಂಬೆಗೆ ರವಾನೆ ಮಾಡುತ್ತಾರೆ. ಈಗಾಗಲೇ ಚೆನ್ನಗಿರಿ ತಾಲೂಕಿನಿಂದ 10 ಕ್ಕೂ ಹೆಚ್ಚು ಹಲಸಿನ ವ್ಯಾಪಾರಿಗಳು ಬಿ.ಎಚ್. ಕೈಮರದಲ್ಲಿ ಬೀಡು ಬಿಟ್ಟಿದ್ದಾರೆ. ಪ್ರತಿ ವರ್ಷ 50 ಕ್ಕೂ ಹೆಚ್ಚು ಲಾರಿ ಹಲಸಿನ ಕಾಯಿಗಳನ್ನು ಖರೀದಿಸಿ ರವಾನಿಸುತ್ತಾರೆ.
ರು. 10 ರಿಂದ ರು. 15 : ವ್ಯಾಪಾರಿಗಳು ಒಂದು ಹಲಸಿನ ಕಾಯಿಗೆ ರು. 10 ರಿಂದ ರು. 15 ನೀಡುತ್ತಾರೆ. ದೊಡ್ಡ ಹಲಸಿನ ಕಾಯಿಯಾದರೆ ರು. 20ರವರೆಗೂ ನೀಡಿದ ಉದಾಹರಣೆ ಇದೆ.
ಸಾಮಾನ್ಯ ಕಾಯಿಗಳಿಗೆ ರು. 10 ನೀಡಿ ಖರೀದಿಸುತ್ತಾರೆ. ಆದರೆ ಬಾಂಬೆ, ಆಂಧ್ರಕ್ಕೆ ತಲುಪಿದ ಹಲಸಿನ ಕಾಯಿಗೆ ಅಲ್ಲಿ ರು. 30 ರಿಂದ ರು. 40ಕ್ಕೆ ಮಾರಾಟವಾಗಲಿದೆ. ಕೆಲವು ದೊಡ್ಡ ಜಾತಿ ಹಣ್ಣುಗಳು ರು. 100ರ ವರೆಗೂ ಮಾರಾಟವಾಗುತ್ತದೆ ಎನ್ನುತ್ತಾರೆ ಹಲಸಿನ ವ್ಯಾಪಾರಿ ಇಸ್ಮಾಯಿಲ್.
ಹಪ್ಪಳಕ್ಕೆ ರು. 2: ಹಲಸಿನ ಹಪ್ಪಳಕ್ಕೆ ಬೇಡಿಕೆ ಹೆಚ್ಚಾಗಿದ್ದು, ಒಂದು ಹಪ್ಪಳಕ್ಕೆ ರು. 1.50ರಿಂದ ರು. 2ರವರೆಗೂ ವರೆಗೂ ಮಾರಾಟವಾಗುತ್ತಿದೆ. 1 ಹಲಸಿನಕಾಯಿಯಿಂದ 100 ರಿಂದ 150 ಹಪ್ಪಳ ಸಿದ್ಧವಾಗಲಿದೆ. ಈಗ ಬಿಸಿಲು ಇರುವುದರಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಹಲಸಿನ ಹಪ್ಪಳ ಮಾಡಿ ಹಣ ಸಂಪಾದಿಸುತ್ತಿದ್ದಾರೆ. 5 ಸಾವಿರ ಹಪ್ಪಳದಿಂದ ಹಿಡಿದು 50 ಸಾವಿರದವರೆಗೂ ಹಪ್ಪಳ ಮಾಡಿ ಮಾರಾಟ ಮಾಡಿ ಹಣ ಸಂಪಾದಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

