ಸಿಕ್ಕಸಿಕ್ಕಲ್ಲಿ ವಾಹನ ನಿಲುಗಡೆ: ಸಾರ್ವಜನಿಕರಿಗೆ ಕಿರಿಕಿರಿ
ತರೀಕೆರೆ:ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಜನದಟ್ಟಣೆ ಮತ್ತು ದಟ್ಟ ವಾಹನ ಸಂಚಾರಗಳಿಂದ ತುಂಬಿಹೋಗಿ ಜನರಿಗೆ ಸುಗಮ ಮತ್ತು ಸುರಕ್ಷಿತ ಸಂಚಾರ ಎನ್ನುವುದು ಬಹು ದೊಡ್ಡ ತಲೆನೋವಾಗಿದೆ.
ತರೀಕೆರೆ ಪಟ್ಟಣ 5 ಜಿಲ್ಲೆಗಳಿಂದ ಸುತ್ತುವರಿದಿರುವ ಕೇಂದ್ರ ಸ್ಥಳವಾಗಿದೆ. ವಿವಿಧ ಭಾಗಗಳಿಂದ ಕುವೆಂಪು ವಿ.ವಿ. ನಿಲಯ, ಭದ್ರಾ ಅಭಯಾರಣ್ಯ, ಭದ್ರಾ ಅಣೆಕಟ್ಟು, ಹಾಗೂ, ಬಾಳೆಹೊನ್ನೂರು, ಶೃಂಗೇರಿ ನರಸಿಂಹರಾಜಪುರ, ಅಮೃತಾಪುರ, ಸೋಂಪುರ ಇತ್ಯಾದಿ ಶೈಕ್ಷಣಿಕ ಅಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರಗಳಿಗೆ ಹೋಗಬೇಕಾದವರೂ ಇಲ್ಲಿಗೆ ಬರುವುದು ಸಾಮಾನ್ಯ.
ಹೆಚ್ಚಿನ ಜನಸಂದಣಿ: ಕೆಮ್ಮಣಗುಂಡಿ- ಕಲ್ಲತ್ತಿಗಿರಿಯಂತಹ ಪ್ರವಾಸಿ ಕೇಂದ್ರಗಳಿಗೆ ರೈಲು ಅಥವಾ ಬಸ್ಸಿನಲ್ಲಿ ಬಂದು ಹೋಗುವ ಪ್ರವಾಸಿಗರು ಇಳಿದು ಹತ್ತಿಹೋಗಬೇಕಾದ ಕೇಂದ್ರ ಸ್ಥಳ ತರೀಕೆರೆ. ಹಾಗಾಗಿ ಪ್ರತಿನಿತ್ಯ ರೈಲು ಮತ್ತು ಬಸ್ಸು ನಿಲ್ದಾಣಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಕರು ತರೀಕೆರೆಯತ್ತ ಬಂದು ಹೋಗುತ್ತಾರೆ.
ದಿನ ಬೆಳಗಾದರೆ ಶಾಲಾ ಕಾಲೇಜು, ಐಟಿಐ ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಕಚೇರಿಗಳಿಗೆ ಬಂದು ಹೋಗುವ ಜನರು- ಖಾಸಗಿ ಮತ್ತು ಸರ್ಕಾರಿ ಬಸ್ಸು ನಿಲ್ದಾಣಗಳಿಗೆ ಬಂದು ಹೋಗಲು ಪಟ್ಟಣದ ಬಿ.ಎಚ್. ರಸ್ತೆಯನ್ನೇ ಆಶ್ರಯಿಸಬೇಕಾಗಿದೆ.
ಸರಕು ವಾಹನ: ರಸ್ತೆಯಲ್ಲಿ ಪಟ್ಟಣದ ಮೂಲಕ ಬೇರೆ ಬೇರೆ ಊರುಗಳಿಗೆ ಹೋಗಬೇಕಾದ ಸರಕು ತುಂಬಿದ ವಾಹನಗಳು ಈ ಮೊದಲೇ ಜನನಿಬಿಡವಾದ ರಸ್ತೆಗಳ ಇಕ್ಕೆಲೆಗಳಲ್ಲಿ ಎಲ್ಲೆಂದರಲ್ಲಿ ಮನಸೋ ಇಚ್ಚೆ ನಿಲ್ಲಿಸುತ್ತಾರೆ. ಇದರಿಂದ ಪಾದಚಾರಿಗಳಿಗೆ ಸುರಕ್ಷಿತವಾಗಿ ಸಂಚರಿಸಲು, ಸ್ಥಳೀಯ ವಾಹನ ಸಂಚರಿಸಲು ವಿಪರೀತ ಕಿರಿ ಕಿರಿಯಾಗುತ್ತಿದೆ, ರಸ್ತೆ ವಿಶಾಲವಾಗಿ ಅಗಲೀಕರಣವಾಗಿದ್ದರೂ, ರಸ್ತೆಗಳ ಎರಡೂ ಬದಿಯಲ್ಲಿ ವಿಪರೀತ ವಾಹನಗಳ ನಿಲುಗಡೆಯಿಂದ ಸಾರ್ವಜನಿಕರಿಗೆ, ಸ್ಥಳೀಯ ವಾಹನಗಳಿಗೆ ಬಹುದೊಡ್ಡ ಕಿರಿ ಕಿರಿಯಾಗುತ್ತಿದೆ.
ವೇಗಮಿತಿ ಇಲ್ಲ: ಸೋಮವಾರ, ಗುರುವಾರ ಮತ್ತು ವಾರದ ಸಂತೆ ದಿನವಾದ ಶುಕ್ರವಾರ ಈ ದಿವಸಗಳಲ್ಲಂತೂ ಜನಸಂಚಾರಕ್ಕೆ ಮತ್ತು ಸ್ಥಳೀಯ ವಾಹನಗಳಿಗೆ ಸಂಚರಿಸಲು ತುಂಬಾ ಕಷ್ಟದಾಯಕವಾಗಿದೆ. ಮೇಲಾಗಿ ತರೀಕೆರೆ ್ಡಹೊರವಲಯದಿಂದ ಎರಡೂ ದಿಕ್ಕಿನಿಂದ ಪಟ್ಟಣದ ಪ್ರವೇಶಿಸುವ, ವಿಶೇಷವಾಗಿ ಸರಕು ತುಂಬಿದ ವಾಹನಗಳಂತೂ ಹೊರವಲಯದಲ್ಲಿದ್ದ ವೇಗವನ್ನು ನಿಯಂತ್ರಿಸದೆ, ಪಟ್ಟಣದ ವ್ಯಾಪ್ತಿಯಲ್ಲೂ ಊರಿನ ಹೊರವಲಯದ ವೇಗವನ್ನೇ ವಾಹನಕ್ಕೆ ಅಳವಡಿಸುತ್ತಾರೆ, ಜೊತೆಗೆ ಕರ್ಕಶವಾದ ಹಾರನ್.
ಬಿ.ಎಚ್. ರಸ್ತೆಯಲ್ಲಿ ಇಷ್ಟೆಲ್ಲಾ ತೊಂದರೆ ನಡುವೆ ಪಾದಚಾರಿಗಳು ಹೇಗೆ ತಾನೇ ಸಂಚರಿಸಿಯಾರು? ಸ್ಥಳೀಯ ವಾಹನಗಳು ಹೇಗೆ ತಾನೆ ಸುರಕ್ಷಿತವಾಗಿ ಸಂಚರಿಸಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಸಂಬಂಧಿಸಿದ ಇಲಾಖೆ ಈ ಬಗ್ಗೆ ಗಮನಹರಿಸಿ ಪಟ್ಟಣ ವ್ಯಾಪ್ತಿಯಲ್ಲಿ ಊರ ಹೊರವಲಯದಿಂದ ಪಟ್ಟಣದ ಮೂಲಕ ಪ್ರತಿನಿತ್ಯ ಬಂದು ಹೋಗುವ ವಾಹನಗಳ ವೇಗ ನಿಯಂತ್ರಣ, ಎಲ್ಲೆಂದರಲ್ಲಿ ವಾಹನಗಳ ಅನಗತ್ಯ ನಿಲುಗಡೆ, ಕರ್ಕಶ ಸೌಂಡ್ ಹಾರನ್ ಇವುಗಳನ್ನು ನಿಯಂತ್ರಿಸಿ, ಜನರ ಮತ್ತು ಸ್ಥಳೀಯ ವಾಹನಗಳ ಸುಗಮ ಸಂಚಾರಕ್ಕೆ ಅನೂಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಅಭಿಪ್ರಾಯ.
-ಅನಂತ ನಾಡಿಗ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

