ಚಿಕ್ಕಮಗಳೂರು

ಅಡಕೆ ಚೊಗರಿನ ಬಣ್ಣದ ವಸ್ತ್ರಕ್ಕೆ ಎಲ್ಲಿಲ್ಲದ ಬೇಡಿಕೆ

Published On :

-ಹೊನ್ನಾಳಿ ಚಂದ್ರಶೇಖರ್
ಕ.ಪ್ರ.ವಾರ್ತೆ ಶಿವಮೊಗ್ಗ   ಮೇ 30
ರಾಜ್ಯದಲ್ಲೂ ಗುಟ್ಕಾ ನಿಷೇಧವಾಗುವ ಕಾಲ ಹತ್ತಿರ ಬಂದಂತೆ ಕಾಣುತ್ತಿದೆ. ಗುಟ್ಕಾ ಮೇಲೆಯೇ ಬಹುತೇಕ ಅವಲಂಬಿತವಾಗಿದ್ದ ಅಡಕೆ ಬೆಳೆಗಾರರು ಕಂಗಾಲಾಗಿದ್ದು, ದಾರಿ ಕಾಣದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಈ ಸಂಕಷ್ಟದ ನಡುವೆಯೂ ಆಶಾಕಿರಣದಂತೆ ಹಲವು ದಾರಿಗಳು ಗೋಚರಿಸುತ್ತಿವೆ. ಅಡಕೆಯನ್ನು ಪರ್ಯಾಯವಾಗಿ ಬಳಸುತ್ತಿರುವ ಹಲವು ಯಶೋಗಾಥೆಗಳು ನಮ್ಮ ಮುಂದಿವೆ. ಅವುಗಳಲ್ಲೊಂದು ಸಾಗರ ತಾಲೂಕು ಭೀಮನಕೋಣೆಯಲ್ಲಿರುವ ಚರಕ ಸಂಸ್ಥೆ ರೂಪಿಸಿರುವ ಬಣ್ಣ.
ಇದು ಅಂತಿಂಥ ಬಣ್ಣವಲ್ಲ. ಸಹಜವಾಗಿ, ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಸಿಗುವ ಅಡಕೆ ಚೊಗರಿನಿಂದ ತಯಾರಿಸಿದ್ದು. ಕಂದು ಬಣ್ಣದ ಅಂಶ ಹೊಂದಿರುವ ಈ ವಸ್ತುವು ಬಟ್ಟೆಯೊಂದಿಗೆ ಗಾಢವಾಗಿ ಅಂಟಿಕೊಳ್ಳುವ ಗುಣ ಹೊಂದಿದ್ದು, ವಿವಿಧ ಶೇಡ್‌ನಲ್ಲಿಯೂ ಈ ಬಣ್ಣ ಸಿದ್ಧವಾಗುತ್ತದೆ.
ಗುಟ್ಕಾದತ್ತ ಕಣ್ಣು ನೆಟ್ಟು ಎಂದೂ ಕಾಣದಷ್ಟು ಲಾಭ ಕಂಡು, ಈಗ ಎಂದೂ ಕಾಣದಷ್ಟು ನಷ್ಟಕ್ಕೆ ಸಿದ್ಧವಾಗುತ್ತಿರುವ ಅಡಕೆ ಬೆಳೆಗಾರರ ಎದುರು ಹಲವು ಪರ್ಯಾಯಗಳಿವೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸುಬೇಕಾಗಿದೆ.
ಅಡಕೆ ಪರ್ಯಾಯ ಬಳಕೆಗೆ ಬಣ್ಣ ಉತ್ಪಾದನೆ ಹೊರತುಪಡಿಸಿ, ಔಷಧಿಗಳೂ ಸಿದ್ಧವಾಗುತ್ತಿವೆ. ಟ್ಯಾನಿಂಗ್ ಉದ್ದೇಶಕ್ಕೆ ಬಳಸಬಹುದು. ಅಡಕೆ ಹಾಳೆಯ ತಟ್ಟೆ, ದೊನ್ನೆ, ಲೋಟಗಳ ಬಳಕೆಯೂ ವ್ಯಾಪಕವಾಗಿದೆ.
ಚರಕ ಯಶಸ್ಸು: ಜವಳಿ ಉದ್ಯಮದಲ್ಲಿ ಅಡಕೆ ಚೊಗರಿನಿಂದ ತಯಾರಿಸಿದ ಬಣ್ಣವನ್ನು ಬಳಸುತ್ತಿರುವ ಏಕೈಕ ಸಂಸ್ಥೆ ಚರಕ. ಇಲ್ಲಿ ಉತ್ಪತ್ತಿಯಾಗುವ ಶೇ.25ರಷ್ಟು ಬಟ್ಟೆಗಳಲ್ಲಿ ಅಡಕೆ ಚೊಗರಿನ ಬಣ್ಣವನ್ನೇ ಬಳಸಲಾಗುತ್ತದೆ.
ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಂಘದಲ್ಲಿ ಹಲವು ವರ್ಷಗಳ ಕಾಲ ಡೈಯಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಎನ್.ಎಂ. ಕುಲಕರ್ಣಿ, 'ಚೊಗರು ವರ್ಷದ ನಿರ್ದಿಷ್ಟ ಕಾಲದಲ್ಲಿ ಮಾತ್ರ ಸಿಗುತ್ತದೆ. ಆಗ ಬಣ್ಣವನ್ನು ನಾವು ಸಿದ್ಧಪಡಿಸಿಟ್ಟುಕೊಂಡರೆ ಸರ್ವಕಾಲಕ್ಕೂ ಬಳಸಬಹುದು. ಇತರೆ ಬಣ್ಣಕ್ಕಿಂತ ಅಡಕೆ ಚೊಗರಿನ ಬಣ್ಣದ ಉತ್ಪಾದನಾ ವೆಚ್ಚ ಸ್ವಲ್ಪ ಕಡಿಮೆ' ಎನ್ನುತ್ತಾರೆ.
ಅಂದಹಾಗೆ ಸಂಪೂರ್ಣ ಮಹಿಳೆಯರೇ ಕೆಲಸ ಮಾಡುವ, ಮಹಾತ್ಮ ಗಾಂಧೀಜಿಯ ಆದರ್ಶಗಳನ್ನು ಹೊಂದಿದ, ಯಂತ್ರ ನಾಗರಿಕತೆಗೆ ಸೆಡ್ಡು ಹೊಡೆದಿರುವ ಭೀಮನಕೋಣೆಯ ಚರಕ ಸಂಸ್ಥೆಯ ರೂವಾರಿ ಖ್ಯಾತ ರಂಗಕರ್ಮಿ, ಸಾಮಾಜಿಕ ಚಿಂತಕ ಪ್ರಸನ್ನ ಅವರು. ಹಳ್ಳಿಯಲ್ಲಿಯೇ ಹಳ್ಳಿಗರಿಗೆ ಉದ್ಯೋಗ ಸಿಗಬೇಕು. ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ ಉತ್ಪಾದನೆ ಮಾಡಬೇಕು ಎಂಬುದು ಪ್ರಸನ್ನ ಅವರ ಆಶಯ. ಅದಕ್ಕೆ ತಕ್ಕಂತೆ ಚರಕ ರೂಪುಗೊಂಡಿದೆ.
ಬೇಡಿಕೆಯ ಬಣ್ಣ: ಚರಕ ಸಂಸ್ಥೆಯ ಉತ್ಪನ್ನಗಳ ಮಾರಾಟ ಮಾಡುವ ದೇಸಿ ಅಂಗಡಿಗಳು ಬೆಂಗಳೂರು ಸೇರಿದಂತೆ ದೇಶದ ಹಲವು ಸ್ಥಳಗಳಲ್ಲಿವೆ. ಎಲ್ಲೆಡೆಯೂ ಅಡಕೆ ಚೊಗರಿನ ಬಣ್ಣ ಬಳಕೆಯಾಗುವ ಜುಬ್ಬಾ, ಅಂಗಿ, ಕುರ್ತಾ ಇತ್ಯಾದಿ ಉತ್ಪನ್ನಗಳಿಗೆ ಬಹು ಬೇಡಿಕೆ ಇದೆ.
ಅಡಕೆ ಚೊಗರಿನ ಮೂಲ ಬಣ್ಣ ಕಂದು. ಇದನ್ನು ಬಟ್ಟೆಗೆ ಬಳಸಲು ಅನುಕೂಲವಾಗುವಂತೆ ಕೆಲವು ನೈಸರ್ಗಿಕ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ.
ವಿವಿಧ ಶೇಡ್‌ಗಳ ದಾರ ಸಿದ್ಧಪಡಿಸಿ ಕೈಮಗ್ಗದಲ್ಲಿ ಬಟ್ಟೆ ಸಿದ್ಧವಾಗುತ್ತದೆ. ಈ ಬಟ್ಟೆಯ ನಡುವೆ ಬೇರೆ ಬಣ್ಣದ ನೂಲುಗಳನ್ನು ಸೇರಿಸಿ ಹಲವು ವಿನ್ಯಾಸಗಳನ್ನೂ ಸಿದ್ಧಪಡಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.