ಮರಳು ದಂಧೆಗೆ ಇಲಾಖೆ ಅಧಿಕಾರಿಗಳಿಂದಲೇ ಅನುಕೂಲ
ಕಡೂರು ತಾಲೂಕಿನಲ್ಲಿ ನಿರಂತರವಾಗಿ ಮರಳು ಸಾಗಾಣಿಕೆ ದಂಧೆ ನಡೆಯುತ್ತಿದ್ದರೂ ಗಣಿ ಮತ್ತು ಜಿಲ್ಲಾ ಭೂ ವಿಜ್ಞಾನ ಗಣಿ ಇಲಾಖೆ ಕಡೂರು ತಾಲೂಕಿನಲ್ಲಿ ಮರಳು ಗಣಿ ನಿಕ್ಷೇಪಗಳೇ ಇಲ್ಲ ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದರಿಂದ ಮರಳು ದಂಧೆ ಮಾಡುವವರಿಗೆ ಈ ವರದಿ ಹಬ್ಬವಾಗಿ ಪರಿಣಮಿಸುವ ಮೂಲಕ ನಿದ್ದೆ ಮಾಡುವವನಿಗೆ ಚಾಪೆ ಹಾಕಿ ಕೊಟ್ಟಂತಾಗಿದೆ.
ಈ ತಾಲೂಕಿನಲ್ಲಿ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿರುವುದರ ಬಗ್ಗೆ ಸೊಲ್ಲೆತ್ತದ ಪರಿಸರವಾದಿಗಳು ಅರಣ್ಯ ನಾಶವಾಗುತ್ತಿದೆ ಎಂದು ಬೊಬ್ಬೆ ಹೊಡೆಯುವ ಮೂಲಕ ಹೆಬ್ಬೆ ಯೋಜನೆಗೆ ಅಡ್ಡಗಾಲಾಗಿದ್ದಾರೆ. ಇತ್ತ ಕಡೂರು ತಾಲೂಕಿನಲ್ಲಿ ನಿರಂತರವಾಗಿರುವ ಮರಳು ಮಾಫಿಯಾ, ಕಲ್ಲು ಗಣಿಗಾರಿಕೆಯಂತಹ ಅಕ್ರಮ ವ್ಯವಸ್ಥೆ ಬಗ್ಗೆ ಸರ್ಕಾರವೇ ಸಡಿಲ ನೀತಿ ಅನುಸರಿಸುತ್ತಿದ್ದರೂ ಕೂಡ ಪರಿಸರವಾದಿಗಳು ಬಾಯಿ ಮುಚ್ಚಿಕೊಂಡಿದ್ದು, ಬಯಲು ಪ್ರದೇಶದ ಜನರ ದುಸ್ಥಿತಿ ಜೀವನದ ಬಗ್ಗೆಯಾಗಲಿ, ಮರಳು ಬಗೆಯುವುದರಿಂದ ಹಳ್ಳದ ಸಾಲಲ್ಲಿ ನೀರು ಸರಾಗವಾಗಿ ಹರಿಯುವುದಿಲ್ಲ ಎಂಬ ವಿಜ್ಞಾನಿಗಳ ಅಭಿಪ್ರಾಯದ ಬಗ್ಗೆಯಾಗಲೀ, ಮರಳು ಮತ್ತು ಕಲ್ಲು ಗಣಿಗಾರಿಕೆಯಿಂದ ಜನರು ಅನುಭವಿಸುತ್ತಿರುವ ಪ್ರತಿದಿನದ ನರಕಯಾತನೆಯಾಗಲೀ ಪರಿಸರವಾದಿಗಳು ಮತ್ತು ಬುದ್ಧಿಜೀವಿಗಳಿಗೆ ಕಾಣುತ್ತಿಲ್ಲ ಎಂದರೆ ನಿಜಕ್ಕೂ ವಿಪರ್ಯಾಸ.
ನಾಲ್ಕು ತಿಂಗಳ ಹಿಂದೆ ಕಡೂರು ತಾಲೂಕು ಆಡಳಿತ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ ಯಾವುದೇ ಮರಳು ನಿಕ್ಷೇಪ ಇಲ್ಲ ಎಂದು ಸರ್ಕಾರಕ್ಕೆ ವರದಿ ನೀಡಿರುವುದು ಆಶ್ಚರ್ಯಕರವಾಗಿದೆ.
ಇಲಾಖೆಯೂ ಸುಮ್ಮನಿದೆ: ಪರಿಸರವಾದಿಗಳು ಮತ್ತು ಸಂಘಟನೆಗಳಿಗೆ ಚಿಕ್ಕಮಗಳೂರು ಸಮೀಪದ ಮಳಲೂರು, ಆಲ್ದೂರು ಮತ್ತಿತರ ಕಡೆಯ ಅಕ್ರಮ ಮರಳು ಸಾಗಾಣಿಕೆ ಮಾತ್ರ ಕಾಣುತ್ತಿದೆಯೇ ಹೊರತು ಕಡೂರು ತಾಲೂಕಿನ ಮರಳು ಹಾಗು ಕಲ್ಲು ಗಣಿಗಾರಿಕೆ ಕಾಣುತ್ತಿಲ್ಲ.
ತಾಲೂಕಿನ ಯಗಟಿ, ಚೌಳಹಿರಿಯೂರು, ಬಾಸೂರು ಕಾವಲು, ಕಟ್ಟೆಹೊಳೆ, ನಿಡುವಳ್ಳಿ ಸೇರಿದಂತೆ ತಾಲೂಕಿನ ಅನೇಕ ಕಡೆ ಅವ್ಯಾಹತವಾಗಿ ದಂಧೆ ನಡೆಯತ್ತಿದ್ದರೂ ಕೂಡ ಸಂಬಂಧಿಸಿದ ಇಲಾಖೆಗಳು ಮೌನ ವಹಿಸುವ ಮೂಲಕ ಗಣಿ ಭೂ ವಿಜ್ಞಾನ ಇಲಾಖೆ ಯಾವ ಕ್ರಮಕ್ಕೂ ಮುಂದಾಗದಿರುವುದು ಮತ್ತೊಂದು ದುರಂತ.
ಮರಳು ದಂಧೆ ನಡೆಸುತ್ತಿದ್ದ ವೇಳೆ ಕೆಲವು ಕೂಲಿಗಾರರು ದುರಂತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಈ ಘಟನೆಗಳು ತಿಳಿದಿದೆ. ಆದರೂ, ಸರ್ಕಾರ ಇಂತಹ ಮರಳು ದಂಧೆಗೆ ಕಡಿವಾಣ ಹಾಕಿಲ್ಲ. ಇದು ಮರಳು ಸಾಗಾಟಕ್ಕೆ ಪರೋಕ್ಷ ಬೆಂಬಲ ನೀಡಿದಂತಾಗಿದೆ.
ಇದನ್ನೆಲ್ಲಾ ಪರಿಗಣಿಸಿ, ಮರಳು ಅಕ್ರಮ ಸಾಗಣೆಯನ್ನು ತಡೆಯಲು ಯೋಚಿಸದ ಬುದ್ಧಿಜೀವಿಗಳು ಸುಮಾರು 40 ಲಕ್ಷ ಹೆಕ್ಟೇರ್ ಜಮೀನಿಗೆ ನೀರುಣಿಸುವ ಜನೋಪಯೋಗಿ ಹೆಬ್ಬೆ ಯೋಜನೆಗೆ ಅಡ್ಡಿಯಾಗಿದ್ದಾರೆ. 145 ಕೋಟಿಯ ಹೆಬ್ಬೆ ಯೋಜನೆಗೆ ಸರ್ಕಾರ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ, ಅನುದಾನವನ್ನೂ ಬಿಡುಗಡೆ ಮಾಡಿದೆ. 23 ಟಿಎಂಸಿ ನೀರು ಹೊಂದಿರುವ ಹೆಬ್ಬೆ, ಭದ್ರಾ ನದಿ ಪಾತ್ರಕ್ಕೆ ಸೇರುವ ಹೆಬ್ಬೆ ಹಳ್ಳದಿಂದ ನೀರನ್ನು ಮದಗದ ಕೆರೆಗೆ ಹರಿಸಿ ಅಲ್ಲಿಂದ ಕಡೂರು ಬೀರೂರಿಗೆ ನೀರು ಸರಬರಾಜು ಮಾಡಿ ಸುಮಾರು 40 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಆದರೆ ಕೆಲವೇ ಮೀಟರ್ನಷ್ಟು ಮಾತ್ರ ಕಾಲುವೆ ತೋಡುವ ಈ ಯೋಜನೆ ಜಾರಿಯಿಂದ ಅಭಯಾರಣ್ಯಕ್ಕೆ ಅಪಾಯ ತಂದೊಡ್ಡಲಿದೆ ಎಂದು ಕಾರಣವೊಡ್ಡುವ ಮೂಲಕ ಸರ್ಕಾರದ ಅಭಿವೃದ್ದಿ ಕಾರ್ಯಕ್ಕೆ ಅಗತ್ಯವಾಗುವಂತಹ ಮರಳು ನೀತಿ ರೂಪಿಸುವಂತೆ ಒತ್ತಡ ತಂದು ಹೆಬ್ಬೆ ಯೋಜನೆಗೆ ಇರುವ ಅಡ್ಡಿ ನಿವಾರಿಸಿ ಹೆಬ್ಬೆ ಯೋಜನೆ ಜಾರಿಗೊಳಿಸುವಂತೆ ಮಾಡಿ ಪರಿಸರ ಸಂರಕ್ಷಿಸಬೇಕು ಎಂಬುದು ಬರಗಾಲಕ್ಕೆ ತುತ್ತಾಗುವ ಬಯಲು ಜನರ ಒತ್ತಾಯವಾಗಿದೆ.
ಕಡೂರು ಕೃಷ್ಣಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

