ಚಿಕ್ಕಮಗಳೂರು

ತುಂಗಾ ಮೇಲ್ದಂಡೆ ಯೋಜನೆಗೆ 90 ಹೆಕ್ಟೇರ್ ಭೂಮಿ

Published On :

ನರಸಿಂಹರಾಜಪುರ: ತುಂಗಾ ಮೇಲ್ದಂಡೆ ಯೋಜನೆಗೆ ಮುತ್ತಿನಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ 3 ಗ್ರಾಮಗಳ ರೈತರಿಂದ 90 ಹೆಕ್ಚೇರ್ ಭೂಮಿಯನ್ನು ವಶಪಡಿಸಿಕೊಂಡಿದ್ದು ಎಲ್ಲಾ ರೈತರಿಗೂ ನ್ಯಾಯವಾದ ಪರಿಹಾರ ನೀಡಲಾಗುವುದು ಎಂದು ರಾಜ್ಯ ಬೃಹತ್ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದರು.
ಅವರು ಗುರುವಾರ ತಾಲೂಕಿನ ಮುತ್ತಿನಕೊಪ್ಪದಲ್ಲಿ 324 ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯ ಪ್ಯಾಕೇಜ್- 1 ರಲ್ಲಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಡಿ ರೈತರಿಂದ ವಶಪಡಿಸಿಕೊಂಡ ಒಣ ಭೂಮಿಗಳಿಗೆ ಒಂದು ಎಕರೆಗೆ 3.50 ಲಕ್ಷ, ತರೀ ಜಮೀನಿಗೆ 5 ಲಕ್ಷ ಹಾಗೂ ಬಾಗಾಯ್ತು ಜಮೀನಿಗೆ 12 ಲಕ್ಷ ಪರಿಹಾರ ನೀಡಲಾಗುತ್ತದೆ. ಈಗಾಗಲೇ ಒಂದು ಗ್ರಾಮದ ರೈತರಿಗೆ ಪರಿಹಾರ ನೀಡಲಾಗಿದ್ದು ಉಳಿದ ರೈತರಿಗೆ ತಕ್ಷಣ ಪರಿಹಾರ ನೀಡಲಾಗುತ್ತದೆ. ರೈತರ ಎಲ್ಲಾ ಸಮಸ್ಯೆಗಳಿಗೂ ಸರ್ಕಾರ ಸ್ಪಂದಿಸಲಿದೆ ಎಂದು ಅವರು ಭರವಸೆ ನೀಡಿದರು.
ಸಣ್ಣ ನೀರಾವರಿಗೆ ಪ್ರಯತ್ನ: ಭದ್ರಾ ಮೇಲ್ದಂಡೆ ಯೋಜನೆಗಾಗಿ ಇಲ್ಲಿನ ರೈತರು ತಮ್ಮ ಭೂಮಿಯನ್ನು ಬಿಟ್ಟು ಕೊಟ್ಟಿದ್ದು ಸ್ಲಳೀಯರ ಬೇಡಿಕೆಯಂತೆ ಅಕ್ಟೋಬರ್ ತಿಂಗಳ ನಂತರ ಕಾಲುವೆಯಿಂದ ನೀರನ್ನು ಎತ್ತಿ ಕೆರೆಗಳಿಗೆ ಭರ್ತಿ ಮಾಡುವ ಸಣ್ಣ ನೀರಾವರಿ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲು ಪ್ರಯತ್ನ ಮಾಡಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಯಂತೆ ಮಳೆಗಾಲದ ಜೂನ್, ಜುಲೈ, ಆಗಸ್ಟ್, ಸೆಂಪ್ಟಂಬರ್, ತಿಂಗಳು ಮಾತ್ರ ತುಂಗಾ ಮೇಲ್ದಂಡೆ ನೀರನ್ನು ಭದ್ರಾ ಡ್ಯಾಂ ಗೆ ಹರಿಸಲಾಗುತ್ತದೆ.ನಂತರದ ನೀರನ್ನು ಈ ಭಾಗದ ಜನರಿಗೆ ನೀಡಲು ಸರ್ಕಾರ ಚಿಂತನೆ ನಡೆಸುತ್ತದೆ ಎಂದರು.
ಅರಣ್ಯ ಇಲಾಖೆ ಒಪ್ಪಿಗೆ: ಭದ್ರಾ ಮೇಲ್ದಂಡೆ ಯೋಜನೆಗೆ ಅರಣ್ಯ ಇಲಾಖೆಯ ಒಪ್ಪಿಗೆ ಸಿಗದೆ ಸದ್ಯದಲ್ಲಿ ಕಾಮಗಾರಿ ನಿಂತಿದೆಯಾದರೂ ಶೀಘ್ರದಲ್ಲೇ ಅರಣ್ಯ ಇಲಾಖೆಯ ಒಪ್ಪಿಗೆ ಸಿಗಲಿದ್ದು ಕಾಮಗಾರಿ ಮುಂದುವರಿಯಲಿದೆ. ಹಿಂದಿನ ಸರ್ಕಾರವು ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳದೆ ಇರುವುದರಿಂದ ತಾಂತ್ರಿಕವಾಗಿ ಕೆಲವು ಅಡಚಣೆ ಉಂಟಾಗಿದೆ. ಈ ಯೋಜನೆಯಿಂದ ನಿರಾಶ್ರಿತರಾದವರಿಗೆ ಪುನರ್ ವಸತಿ ಕಲ್ಪಿಸಬೇಕಾಗಿದೆ.ಪುನರ್ ವಸತಿ ನೀಡಬೇಕಾದರೆ ಭೂಮಿಯ ಹಕ್ಕು ಪತ್ರ ಅಗತ್ಯವಾಗಿದೆ ಎಂದರು.
ಯಾವುದೇ ಯೋಜನೆಗೆ ಭೂಮಿಯನ್ನು ವಶ ಪಡಿಪಡಿಸಿಕೊಳ್ಳಬೇಕಾದರೆ ಸೂಕ್ತ ಪರಿಹಾರ ನೀಡಬೇಕು ಎಂಬುದು ಕೇಂದ್ರ ಸರ್ಕಾರವು ನೂತನವಾಗಿ ಜಾರಿಗೆ ತಂದ ಭೂಮಿ ಹಸ್ತಾಂತರದ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಭಾರೀ ತೂಕದ ವಾಹನಗಳು ಬರುತ್ತಿರುವುದರಿಂದ ರಸ್ತೆ ಹಾಳಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇಂತಹ ದೊಡ್ಡ ಯೋಜನೆಗಳನ್ನು ಜಾರಿಗೆ ತರುವಾಗ ರಸ್ತೆ ಹಾಳಾಗುವುದು ಸಹಜ. ರಸ್ತೆಯನ್ನು ದುರಸ್ಥಿ ಮಾಡಿಸಿಕೊಡುವುದು ನಮ್ಮ ಜವಾಬ್ದಾರಿಯಾಗಿದ್ದು, ಶೀಘ್ರದಲ್ಲೇ ರಸ್ತೆ ದುರಸ್ಥಿ ಕಾರ್ಯ ಕೈ ಗೆತ್ತಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ನೀರಾವರಿ ನಿಗಮಕ್ಕೆ ವರ್ಗಾವಣೆ: ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳಿಗೆ ಭೇಟಿ ನೀಡುತ್ತಿದ್ದು ನೀರಾವರಿ ಯೋಜನೆಗಳ ಸಮಸ್ಯೆ, ಸ್ಥಳೀಯರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ಎಲ್ಲಾ ನೀರಾವರಿ ಯೋಜನೆಗಳನ್ನು ನೀರಾವರಿ ನಿಗಮಕ್ಕೆ ಹಸ್ತಾಂತರಿಸಲಾಗಿದ್ದು ನೀರಾವರಿ ಯೋಜನೆಗಳು ಇನ್ನು ಮುಂದೆ ಚುರುಕುಗೊಳ್ಳಲಿದೆ. ನರಸಿಂಹರಾಜಪುರ ಭದ್ರಾ ಮೇಲ್ದಂಡೆ ಯೋಜನೆಯ ಪ್ಯಾಕೇಜ್- 1 ರ ಕಾಮಗಾರಿ ಮತ್ತು ಕಡಹಿನಬೈಲು ಏತ ನೀರಾವರಿ ಯೋಜನೆಯನ್ನು ವೀಕ್ಷಿಸಿದ್ದೇನೆ. ಭದ್ರ ಮೇಲ್ದಂಡೆ ಯೋಜನೆಗೆ ಬೇಕಾದ ವಿದ್ಯುತ್ ಲಭ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಭದ್ರ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಚಲುವರಾಜ್, ಜಿಲ್ಲಾ ಪಂಚಾಯ್ತಿ ಮಾಜಿ ಅದ್ಯಕ್ಷ ಟಿ.ಡಿ. ರಾಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್, ಜಿಲ್ಲಾ ಕಾಂಗ್ರೆಸ್ ಮುಖಂಡ ಸುಬ್ರಮಣ್ಯ, ಕೆಪಿಸಿಸಿ ಕಿಸಾನ್ ಮೋರ್ಚಾದ ಉಪಾಧ್ಯಕ್ಷ ಸಚಿನ್ ಮೀಗಾ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಲ್ದೋಸ್, ಪಟ್ಟಣ ಪಂಚಾಯ್ತಿ ಸದಸ್ಯೆ ಲೇಖಾ ವಸಂತ್, ಕಾಂಗ್ರೆಸ್ ವಕ್ತಾರ ಉಪೇಂದ್ರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.