ಇನಾಂ ಜಮೀನು ವಿವಾದ: 21ರಂದು ಸಭೆ
ಕ.ಪ್ರ.ವಾರ್ತೆ ಚಿಕ್ಕಮಗಳೂರು ನ.17
ಕಳೆದ ಒಂದು ದಶಕದಿಂದ ಮೂಡಿಗೆರೆ ತಾಲೂಕಿನ ಕಳಸೇಶ್ವರ ಇನಾಂ ಜಮೀನುಗಳ ವಿವಾದ ಅಲ್ಲಿನ ಜನರ ನಿದ್ದೆಯನ್ನು ಭಂಗ ಮಾಡಿದೆ.
ಯಾವತ್ತೋ ಒಂದು ದಿನ ವಾಸದ ಮನೆ, ಜಮೀನುಗಳನ್ನು ಬಿಟ್ಟು ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಜನರನ್ನು ರಕ್ಷಣೆ ಮಾಡಲು ಸರ್ಕಾರದಲ್ಲಿ ಹಲವು ದಾರಿಗಳಿದ್ದರೂ ಅದರತ್ತ ಹೆಜ್ಜೆ ಹಾಕಲು ಸರ್ಕಾರ ಕಳೆದ ಒಂದು ದಶಕದಿಂದ ಯಾವುದೇ ರೀತಿಯ ಪ್ರಯತ್ನ ಮಾಡಿಲ್ಲ. ಇದೀಗ ಈ ವಿವಾದ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ನ ಅಂಗಳಕ್ಕೆ ಬಂದು ನಿಂತಿದೆ.
ಇದೀಗ ಎಚ್ಚರಗೊಂಡಿರುವ ರಾಜ್ಯ ಸರ್ಕಾರ ಸದ್ಯದ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಲು ಹಾಗೂ ಇದಕ್ಕೆ ಪರಿಹಾರ ಕಂಡುಕೊಳ್ಳಲು ನ. 21ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರಿಗಳ ಸಭೆ ಕರೆದಿದೆ. ಈ ಸಭೆಯಲ್ಲಿ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಂದಾಯ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಭಾಗವಹಿಸಲಿದ್ದಾರೆ.
ನಿರ್ಣಯ ಸಾಧ್ಯತೆ: ಕಳಸೇಶ್ವರ ಇನಾಂ ಭೂಮಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೈಕೋರ್ಟ್ ಆದೇಶ ಹೊರಡಿಸಿ ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದು, ತಕ್ಷಣಕ್ಕೆ ಸಾಧ್ಯವಿಲ್ಲ. ಅದುದರಿಂದ ಇದಕ್ಕೆ ಕಾಲಾವಕಾಶ ನೀಡುವಂತೆ ಕೇಳುವ ಸಾಧ್ಯತೆ ಇದೆ. ಈ ಕುರಿತು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯತೆ ಹೆಚ್ಚಿದೆ.
ಇಲ್ಲಿರುವ 600 ಕುಟುಂಬಗಳಿಗೆ ತಕ್ಷಣಕ್ಕೆ ಪುನರ್ವಸತಿ ಕಲ್ಪಿಸಲು ಸಾಧ್ಯವಿಲ್ಲ. ಇದಕ್ಕೆ ಕೆಲವು ವರ್ಷಗಳೇ ಬೇಕಾಗಬಹುದು. ಈ ವಿಷಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಸರ್ಕಾರ ಉದ್ದೇಶಿಸಿದೆ. ಅಂದರೆ, ಸರ್ಕಾರದ ನಿಲುವು ಇಲ್ಲಿನ ಜನರನ್ನು ಖುಲ್ಲಾಗೊಳಿಸುವುದು ಎಂದರ್ಥ.
ಸುಪ್ರೀಂಕೋರ್ಟ್ನಲ್ಲೂ ಅರ್ಜಿ: ಕಳಸೇಶ್ವರ ಇನಾಂ ಜಮೀನಿನಲ್ಲಿರುವವರು ಹೈಕೋರ್ಟ್ಗೆ ಒತ್ತುವರಿದಾರರನ್ನು ಖುಲ್ಲಾಪಡಿಸುವಂತೆ ನೀಡಿರುವ ಆದೇಶದ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಇದರ ಜತೆಗೆ ಹೈಕೋರ್ಟ್ನ ಆದೇಶಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟ್ನಲ್ಲೂ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸರ್ಕಾರದಿಂದ ಪ್ಯಾರವಾರು ಉತ್ತರ ಕೇಳಿದೆ. ಇದಕ್ಕಾಗಿ ಸರ್ಕಾರ ಉತ್ತರ ಸಿದ್ಧಪಡಿಸಿದ್ದು, ಮುಂದಿನ ದಿನಾಂಕದಂದು ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ.
ಒಂದೆಡೆ ಸುಪ್ರೀಂಕೋರ್ಟ್ಗೆ ಪ್ಯಾರವಾರು ಉತ್ತರ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನೊಂದೆಡೆ ಇಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಲು ಕಾಲಾವಕಾಶ ನೀಡುವಂತೆ ಕೋರಿ ಪ್ರಮಾಣ ಪತ್ರ ಸಲ್ಲಿಸುವ ಸಿದ್ಧತೆಯನ್ನು ಸರ್ಕಾರ ಮಾಡಿಕೊಳ್ಳುತ್ತಿದೆ.
ಏನಿದು ವಿವಾದ?
ಮೂಡಿಗೆರೆ ತಾಲೂಕಿನ ಮಾವಿನಕೆರೆ, ತೋಟದೂರು ಮತ್ತು ತಲಗೋಡು ಗ್ರಾಮಗಳಲ್ಲಿ ಕಳಸೇಶ್ವರ ದೇವಾಲಯಕ್ಕೆ ಸೇರಿರುವ 14,340 ಎಕರೆ ಜಮೀನು ಇದ್ದು, ಇದರಲ್ಲಿ 6777 ಎಕರೆ ಜಮೀನು ಮೀಸಲು ಅರಣ್ಯದ ವ್ಯಾಪ್ತಿಗೆ ಒಳಪಟ್ಟಿದ್ದು, ಮೀಸಲು ಅರಣ್ಯ ಘೋಷಣೆಯಾಗುವ ಮೊದಲೇ 204.19 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಇನ್ನುಳಿದಂತೆ 633.20 ಎಕರೆ ಒತ್ತುವರಿ ಮಾಡಲಾಗಿದೆ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿಗಳು 24-1-2001ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಬಳಿಕ ಜಿಲ್ಲಾಧಿಕಾರಿಗಳು 327 ಕುಟುಂಬಗಳಿಗೆ 706.26 ಎಕರೆ ಜಮೀನು ಮಂಜೂರು ಮಾಡಿದ್ದಾರೆ. ಇನ್ನುಳಿದಂತೆ 606 ಕುಟುಂಬಗಳು 1800.17 ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆಂದು ನ್ಯಾಯಾಲಯಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯವು ಜಿಲ್ಲಾಧಿಕಾರಿಗಳು ಭೂ ಮಂಜೂರು ಮಾಡಿರುವ ಆದೇಶ ರದ್ದುಗೊಳಿಸಿರುವ ಜತೆಗೆ ಒತ್ತುವರಿ ಖುಲ್ಲಾಗೊಳಿಸುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿ, ಈ ಕೆಲಸ 2012ರ ಡಿ. 31 ರೊಳಗೆ ವರದಿ ನೀಡುವಂತೆ ತಿಳಿಸಿತ್ತು. ಆದರೆ, ಇದಕ್ಕೆ ಅರಣ್ಯ ಇಲಾಖೆ ಕಾಲಾವಕಾಶ ನೀಡುವಂತೆ ಕೇಳಿಕೊಂಡಿದ್ದು, ಎರಡು ಬಾರಿ ಕಾಲಾವಕಾಶ ನೀಡಿ, ಇದೇ ನ. 30 ರೊಳಗೆ ಒತ್ತುವರಿದಾರರನ್ನು ಖುಲ್ಲಾಗೊಳಿಸುವಂತೆ ಕೊನೆಯ ಅವಕಾಶ ನೀಡಿತ್ತು.
ಇತ್ತೀಚೆಗೆ ಹೈಕೋರ್ಟ್ ಒತ್ತುವರಿದಾರರನ್ನು ಖುಲ್ಲಾಪಡಿಸುವ ಮುನ್ನ ಅವರಿಗೆ ಪುನರ್ ವಸತಿ ಕಲ್ಪಿಸಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ಕರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

