ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ಕ.ಪ್ರ.ವಾರ್ತೆ, ತರೀಕೆರೆ, ನ. 21
ಪಂಚಾಯತ್ ರಾಜ್ ಎಂಜಿನಿಯರಿಂಗ್ ಕಚೇರಿಯಲ್ಲಿ ಹಲವು ದಿನಗಳಿಂದ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿಲ್ಲ ಮತ್ತು ಮಂದಗತಿಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿ ಗುರುವಾರ ಪಟ್ಟಣದಲ್ಲಿ ಜಿಪಂ ಸದಸ್ಯ ಕೆ.ಆರ್. ಆನಂದಪ್ಪ, ಎಸ್.ಬಿ. ಆನಂದಪ್ಪ, ಜಿಪಂ ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ಮೊದಲಾದವರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿ ಬಾಗಿಲಿಗೆ ಬೀಗ ಜಡಿದು ಪ್ರತಿಭಟಿಸಿದರು.
ತಂತಮ್ಮ ಜಿಪಂ ವ್ಯಾಪ್ತಿಯಲ್ಲಿ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದ್ದು, ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಸಾರ್ವಜನಿಕರು ಕಷ್ಟ ಪಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಜಿಪಂ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದು ಜಿಪಂ ಎಂಜಿನಿಯರಿಂಗ್ ಕಚೇರಿ ಎಇಇ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
3 ವಷಂದಿಂದ ಮುಕ್ತಿ ಇಲ್ಲ: ಜಿಪಂ ಸದಸ್ಯ ಕೆ.ಆರ್. ಆನಂದಪ್ಪ ಮಾತನಾಡಿ, ಕಳೆದ ಒಂದು ತಿಂಗಳಿಗೂ ಹೆಚ್ಚು ದಿವಸಗಳಿಂದ ಜಿಪಂ ಎಂಜಿನಿಯರಿಂಗ್ ಕಚೇರಿಯಲ್ಲಿ ಯಾವ ಅಧಿಕಾರಿಗಳೂ ಕೆಲಸವನ್ನೇ ಮಾಡುತ್ತಿಲ್ಲ. ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ತಾಲೂಕಿನ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಲ್ಲದೆ ಜನರು ಹಾಹಾಕಾರ ಪಡುವಂತಾಗಿದೆ ಎಂದರು.
ಸರ್ಕಾರ ಹಣ ಮಂಜೂರು ಮಾಡಿದ್ದರೂ, ಭದ್ರಾ ನದಿಯಿಂದ ನೀರು ಸರಬರಾಜು ಮಾಡುವ ಬೇಲೇನಹಳ್ಳಿ, ಕರಕುಚ್ಚಿ ಮತ್ತು ಅಜ್ಜಂಪುರ ಕುಡಿಯುವ ನೀರು ಸರಬರಾಜು ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ. ಕಳೆದ ವರ್ಷ ಬರದ ಹಿನ್ನೆಲೆಯಲ್ಲಿ ಜಿಪಂ ಮೂಲಕ ಸರ್ಕಾರ ಪ್ರಾರಂಭಿಸಿದ ಕುಡಿಯುವ ನೀರು ಯೋಜನೆ 3 ವರ್ಷದಿಂದ ಮುಕ್ತಿ ಕಂಡಿಲ್ಲ, ಶಾಸಕರು ಅಭಿವೃದ್ಧಿ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೆಂಕಿ ಬಿದ್ದರೂ ಹನಿ ನೀರಿಲ್ಲ: ಜಿಪಂ ಸದಸ್ಯ ಎಸ್.ಬಿ. ಆನಂದಪ್ಪ ಮಾತನಾಡಿ, ಜಿಪಂ ಎಂಜಿನಿಯಿರಿಂಗ್ ಕಚೇರಿಯಲ್ಲಿ ಜೆ.ಇ. ಮತ್ತಿತರ ಅಧಿಕಾರಿಗಳು ಕಳೆದ ಎಷ್ಟೋ ದಿವಸಗಳಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲ, ಕಚೇರಿಯಲ್ಲಿ ಯಾರೂ ಹೇಳು ಕೇಳುವರಿಲ್ಲದಂತಾಗಿದೆ ಎಂದು ಆಕ್ಷೇಪಿಸಿದರು.
ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಸರ್ಕಾರ ಕುಡಿವ ನೀರು ಸರಬರಾಜು ಯೋಜನೆಗೆ ಜಿಪಂ ಮೂಲಕ ರು. 12 ಕೋಟಿ ಮಂಜೂರು ಮಾಡಿದೆ. ಇದು ಜಿಪಂ ವ್ಯಾಪ್ತಿಯ ಯೋಜನೆಯ ಕಾರ್ಯವಾಗಿದೆ. ಕುಡಿವ ನೀರಿನ ಯೋಜನಾ ಕಾರ್ಯ ಅಧಿಕಾರಿಗಳನಿರ್ಲಕ್ಷ್ಯದಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಹಳ್ಳಿಗಳಲ್ಲಿ ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ, ಆನೇಕ ಯೋಜನೆಗಳು ಅಪೂರ್ಣವಾಗಿದೆ ಎಂದು ತೀವ್ರವಾಗಿ ಆಕ್ಷೇಪಿಸಿದರು.
ವಾಗ್ವಾದ: ಕಚೇರಿ ಬಾಗಿಲು ಹಾಕಿ ಬೀಗ ಜಡಿಯುವಾಗ ಜಿಪಂ ಸದಸ್ಯರು ಮತ್ತು ಎ.ಇ.ಇ. ನಡುವೆ ವಾಗ್ವಾದ ನಡೆಯಿತು. ಅಭಿವೃದ್ಧಿ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿರುವ ವಿರುದ್ಧ ಜಿಪಂ, ತಾಪಂ ಸದಸ್ಯರನ್ನು ಒಳಗೊಂಡಂತೆ ಎಲ್ಲರ ಸಹಕಾರದಿಂದ ಉಗ್ರ ಹೋರಾಟ ನಡೆಸುವುದಾಗಿ ಜಿಪಂ ಸದಸ್ಯ ಕೆ.ಆರ್. ಆನಂದಪ್ಪ ತಿಳಿಸಿದ್ದಾರೆ. ತಾಪಂ ಮಾಜಿ ಸದಸ್ಯ ಕೃಷ್ಣಪ್ಪ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

