ಚಿಕ್ಕಮಗಳೂರು

ಜಿಲ್ಲೆಯಲ್ಲಿ 950 ಶಾಸನಗಳು ಪತ್ತೆ

Published On :

ಚಿಕ್ಕಮಗಳೂರು: ಜಿಲ್ಲೆಯಲ್ಲಿ 950 ಶಾಸನಗಳು ಪತ್ತೆಯಾಗಿದ್ದು, ಅವುಗಳಲ್ಲಿ 350 ಹೊಯ್ಸಳ ಅರಸರ ಕಾಲದವು. 10 ರಿಂದ 15ನೇ ಶತಮಾನದ ಶಾಸನಗಳಲ್ಲಿ ಭಾಷೆ, ಪಾಂಡಿತ್ಯದ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ ಎಂದು ಉಪನ್ಯಾಸಕ ಎಚ್.ಎಂ. ನಾಗರಾಜರಾವ್ ಕಲ್ಕಟ್ಟೆ ಹೇಳಿದ್ದಾರೆ.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಜ್ಯೋತಿನಗರದ ಸಂತಜೋಸೆಫ್‌ರ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಸಾಹಿತ್ಯಕ್ಕೆ ಜಿಲ್ಲೆಯ ಶಾಸನ ಸಾಹಿತ್ಯದ ಕೊಡುಗೆ ಕುರಿತಂತೆ ಅವರು ವಿಶೇಷ ಉಪನ್ಯಾಸ ನೀಡಿದರು.
2 ಸಾವಿರ ವರ್ಷದ ಇತಿಹಾಸ: ಕನ್ನಡ ಸಾಹಿತ್ಯಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಎರಡನೇ ಶತಮಾನದಲ್ಲಿ ಕನ್ನಡ ಬಳಕೆಯಲ್ಲಿತ್ತು. 5ನೇ ಶತಮಾನದಲ್ಲಿ ಕನ್ನಡ ಸಾಹಿತ್ಯ ಲಿಪಿಕವಾದ ಬಗ್ಗೆ ದಾಖಲೆಗಳಿವೆ. ಭೌಗೋಳಿಕವಾಗಿ ಬಹು ಸಂಸ್ಕೃತಿ ಹೊಂದಿರುವ ಚಿಕ್ಕಮಗಳೂರು ಜಿಲ್ಲೆ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ತನ್ನದೇ ಆದ ಕೊಡುಗೆ ನೀಡಿದೆ. ಕನ್ನಡದ ಪ್ರಥಮ ಶಾಸನವೆಂದು  ಗುರುತಿಸಲ್ಪಟ್ಟ ಹಲ್ಮಡಿ ಶಾಸನ ನಮ್ಮೂರ ಸಮೀಪದಲ್ಲೆ ಇದೆ. ಇದರಲ್ಲಿ ಮುಳಿಬಳ್ಳಿ ಎಂಬ ಹೆಸರು ಪ್ರಸ್ತಾಪವಾಗಿದ್ದು, ಅದು ಈಗಿನ ಮುಗುಳುವಳ್ಳಿ ಎಂಬುದು ಹಲವರ ಅಭಿಪ್ರಾಯವಾಗಿದೆ ಎಂದರು.
950 ಶಾಸನಗಳು: ಜಿಲ್ಲೆಯಲ್ಲಿ ಸಿಕ್ಕಿರುವ 950 ಶಾಸನಗಳಲ್ಲಿ ಗಂಗ, ಸಾಂತ, ಚಾಲುಕ್ಯ, ಚೋಳ, ವಿಜಯನಗರ ಚಕ್ರವರ್ತಿಗಳು, ಕೆಳದಿ ನಾಯಕರ ಕಾಲದವು ಸೇರಿವೆ. ಕನ್ನಡದ ಮೊದಲ ರಾಜವಂಶಸ್ಥ ಕದಂಬರ ಎರಡು ಶಾಸನ ಇಲ್ಲಿ ಸಿಕ್ಕಿದೆ. ಬಾಬಾಬುಡನ್‌ಗಿರಿ- ಐ.ಡಿ. ಪೀಠದ ಸುತ್ತ ನಾಲ್ಕು ಪರ್ಶಿಯನ್ ಶಾಸನಗಳು ಸಿಕ್ಕಿವೆ. ಟಿಪ್ಪುಕಾಲದ ಸುಮಾರು 40 ತಾಮ್ರ ಶಾಸನಗಳಲ್ಲಿ ಶೃಂಗೇರಿ ಜಾಹಗೀರಿ ಬಗ್ಗೆ ವಿಫುಲ ಮಾಹಿತಿ ಇದೆ ಎಂದರು.
ಗ್ರಂಥ ಸಾಹಿತ್ಯಕ್ಕೆ ಬಂದರೆ ಕನ್ನಡಕ್ಕೆ ಮೊದಲ ಆರಂಭ ಕೊಟ್ಟವರು ಜೈನಕವಿಗಳಾದರೆ, ಸಂಸ್ಕೃತದ ಕೊಂಡಿ ಕಳಚಿ ಬರೆದ ಮೊದಲ ಬ್ರಾಹ್ಮಣಕವಿ ರುದ್ರಭಟ್ಟ ಜಿಲ್ಲೆಯವನು. ಉಪಮಾಲೋಲ, ಕವಿ ಚೂತವನಚೈತ್ರ ದೇವನೂರು ಲಕ್ಷ್ಮೀಶ ಕನ್ನಡದ ಜೈಮಿನಿ ಭಾರತದ ಕರ್ತೃ ಎಂದರು.
ಮೂಲದಲ್ಲಿಲ್ಲದ ಬಬ್ರುವಾಹನ ವೃತ್ತಾಂತ ಸೇರ್ಪಡೆ ಮಾಡಿದವನು ಲಕ್ಷ್ಮೀಶ ಕವಿ. ಬಾಹುಬಲಿ ಮತ್ತು ರಾಮಚಂದ್ರಗುರು ಈ ಜಿಲ್ಲೆಯವರೆ. ಕನ್ನಡದ ಅಶ್ವಿನಿ ದೇವತೆಗಳಲ್ಲೊಬ್ಬರಾದ ಎ.ಆರ್. ಕೃಷ್ಣಶಾಸ್ತ್ರಿ ಅಂಬಳೆಯವರಾಗಿದ್ದು ಇವರು ಕನ್ನಡ, ಇಂಗ್ಲೀಷ್, ಬಂಗಾಳಿಯಲ್ಲಿ ಸಾಹಿತ್ಯ ರಚಿಸಿದವರು ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷೆ ಗೌರಮ್ಮ ಬಸವೇಗೌಡ, ಎಲ್ಲೆ ಇರಲಿ ಮಾತೃ ಭಾಷೆ ಕನ್ನಡವನ್ನು ಗೌರವಿಸಿ. ಈಗ ಇಂಗ್ಲೀಷ್ ಕಲಿಕೆಬೇಕು. ಆದರೆ, ಅದೇ ಅನಿವಾರ್ಯ ಅಲ್ಲ. ನಮ್ಮ ದೇಶವನ್ನು ಪ್ರೀತಿಸಿ, ಎಲ್ಲಿಗೆ ಹೋದರೂ ಮನೆಯಲ್ಲಿ ಕನ್ನಡ ಮಾತನಾಡಿ, ಕನ್ನಡ ಬೆಳೆಸಿ, ಸಾಹಿತ್ಯ, ಸಂಸ್ಕೃತಿ ಉಳಿಸಿ ಎಂದು ಕರೆ ನೀಡಿದರು.
ಕಡೂರು ತಾಲೂಕು ಕ.ಸಾ.ಪ. ಅಧ್ಯಕ್ಷ ಸೂರಿ ಶ್ರೀನಿವಾಸ ಮತ್ತು ಕಾಲೇಜಿನ ಪ್ರಾಂಶುಪಾಲೆ ಮಿನಿ ಥಾಮಸ್ ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಉಪನ್ಯಾಸಕ ಚಂದ್ರಮೌಳಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.