ಚಿಕ್ಕಮಗಳೂರು

ದುರ್ಬೀನಲ್ಲೂ ತೃತೀಯ ರಂಗ ಕಾಣಲ್ಲ

Published On :

ಕ.ಪ್ರ.ವಾರ್ತೆ    ಕಡೂರು    ಏ. 7
ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತಾ ದೇಶಕ್ಕೆ ದೇಶವೇ ನರೇಂದ್ರ ಮೋದಿ ಭಾರತದ ಪ್ರಧಾನಿ ಎಂದು ತೀರ್ಮಾನಿಸಿರುವಾಗ ನಾಪತ್ತೆ ಆಗಿರುವ ತೃತೀಯ ರಂಗವನ್ನು ದುರ್ಬೀನು ಹಾಕಿ ಹುಡುಕಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೃತೀಯ ರಂಗದ ಕುರಿತು ಲೇವಡಿ ಮಾಡಿದರು.
ಪಟ್ಟಣದ ಎಂಆರ್‌ಎಂ ರಂಗಮಂದಿರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ 2 ಗಂಟೆ ಕಾಲ ತಡವಾಗಿ ಬಂದುದಕ್ಕೆ ಕ್ಷಮೆ ಕೋರಿ ಮಾತನಾಡಿದ ಅವರು, ನಿಮ್ಮ ಒಂದೊಂದು ಮತಕ್ಕೂ ಶಕ್ತಿಯಿದೆ. ದೇಶದ ಭವಿಷ್ಯ ಬದಲಿಸಲು, ಭ್ರಷ್ಟಮುಕ್ತ ಸರ್ಕಾರ ರಚಿಸಲು, ದೇಶವನ್ನು ಭಯೋತ್ಪಾದಕರಿಂದ ರಕ್ಷಿಸಲು, ಯುವ ಜನತೆಗೆ ಉದ್ಯೋಗವಕಾಶ ಸೃಷ್ಟಿಸಲು ಹಾಗೂ ದೇಶ ಭವಿಷ್ಯದ ಚಿತ್ರಣ ಬದಲಿಸುವ ಶಕ್ತಿ ನಿಮ್ಮ ಮತಕ್ಕಿದೆ. ದೇಶದ ಎಲ್ಲ ವರ್ಗದ ಜನರು ಮೋದಿ ಪ್ರಧಾನಿಯಾಗಿ ಈ ದೇಶವನ್ನು ಮುನ್ನಡೆಸುವ ಸಮರ್ಥ ಅಭ್ಯರ್ಥಿ ಆಗಲಿ ಎಂದು ತೀರ್ಮಾನಿಸಿದ್ದಾರೆ. ಹಾಗಾಗಿ, ನಿಮ್ಮ ಪವಿತ್ರ ಮತ ವ್ಯರ್ಥ ಮಾಡದೆ ದೇಶದ ಅಭಿವೃದ್ಧಿಗಾಗಿ ಬಿಜೆಪಿಗೆ ನೀಡಿ ಎಂದರು.
ಹೀನಾಯಸ್ಥಿತಿ:  ಕಾಂಗ್ರೆಸ್ ನೇತೃತ್ವದ ಮುಂದಿನ ಪ್ರಧಾನಿ ಅಭ್ಯರ್ಥಿ ತಾವಲ್ಲ, ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಿರುವ ಮನಮೋಹನ ಸಿಂಗ್ ಈಗಾಗಲೇ ತಮ್ಮ ನಿವಾಸವನ್ನು ಮೋತಿಲಾಲ್ ನೆಹರು ರಸ್ತೆಗೆ ಬದಲಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಅಂಗುಲದಲ್ಲೇ ಇದ್ದ ದೆಹಲಿ ಕಾಂಗ್ರೆಸ್ ಸರ್ಕಾರ 70 ಕ್ಷೇತ್ರದ ಪೈಕಿ 8 ರಲ್ಲಿ ಮಾತ್ರ ಜಯಗಳಿಸಿ ಶೀಲಾ ದೀಕ್ಷಿತ್ ರಾಜಿನಾಮೆ ನೀಡುವ ಮೂಲಕ ತನ್ನ ಹೀನಾಯ ಸ್ಥಿತಿ ತೋರಿಸಿದೆ ಎಂದರು.
ರಾಹುಲ್ ಗಾಂಧಿ ಅವರನ್ನು ನರೇಂದ್ರ ಮೋದಿ ಅವರಿಗೆ ಹೋಲಿಸುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ನಾಯಕರೇ ಬಂದಿದ್ದಾರೆ. ರಣಭೂಮಿಯಲ್ಲಿ ಯುದ್ಧ ಮಾಡದೆ ಹೆದರಿ ಓಡಿಹೋಗುವ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಕಾಂಗ್ರೆಸ್ ಈ ಸ್ಥಿತಿಯಲ್ಲಿದ್ದರೆ ತೃತೀಯ ರಂಗ ಅಡ್ರೆಸ್ ಇಲ್ಲದಂತಾಗಿ ಎಲ್ಲಿದೆ ಎಂದು ಪತ್ತೆ ಹಚ್ಚಿ ಹುಡುಕಬೇಕಾಗಿದೆ. ತೃತೀಯ ರಂಗದಲ್ಲಿ ಯಾರೊಬ್ಬರೂ ಸಮರ್ಥ ನಾಯಕರಿಲ್ಲ ಎಂದು ಹೇಳಿದ ಬಿ.ಎಸ್.ಯಡಿಯೂರಪ್ಪ ಅವರು, ದೇಶದಲ್ಲಿ ಶೇ.70 ರಷ್ಟು ಜನ ಈ ದೇಶಕ್ಕೆ ಮೋದಿ ಸಮರ್ಥ ನಾಯಕ ಎಂದ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ತೃತೀಯ ರಂಗ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಂಗ್ರೆಸ್ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುತ್ತಿದೆ ಎಂದರು.
ಬಿಜೆಪಿಯಿಂದ ಜನಪರ ಕಾರ್ಯಕ್ರಮ:  ಬಿಜೆಪಿ ಸರ್ಕಾರದ ತಮ್ಮ 5 ವರ್ಷದ ಅಧಿಕಾರವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಸಾಧಿಸಿದೆ. ಆದರೆ, ಕಾಂಗ್ರೆಸ್ ಸರ್ಕಾರಕ್ಕೆ 20000 ಕೋಟಿ ತೆರಿಗೆ ಸಂಗ್ರಹ ಮಾಡಲು ಸಾಧ್ಯವಾಗಿಲ್ಲ. ರಾಜ್ಯದ ರಸ್ತೆಗಳ ಗುಂಡಿ ಗೊಟರುಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ. ತಾವು ಜಾರಿಗೆ ತಂದ 3 ಲಕ್ಷವರೆಗಿನ ಶೂನ್ಯ ಬಡ್ಡಿಯಲ್ಲಿ ಸಾಲ, ಸಂಧ್ಯಾ ಸುರಕ್ಷಾ, ಸವಲತ್ತು ವಿತರಣೆ, 108 ವಾಹನ ಸೌಕರ್ಯ, 17 ಲಕ್ಷ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಬಿಜೆಪಿ ಜಾರಿಗೆ ತಂದು ಜನಸಾಮಾನ್ಯರ ಪರವಾದ ಕಾರ್ಯಕ್ರಮ ರೂಪಿಸಿದೆ ಎಂದರು.
ಬಿಜೆಪಿ ಮುಖಂಡ ಬೆಳ್ಳಿ ಪ್ರಕಾಶ್ ಮಾತನಾಡಿದರು. ಅಭ್ಯರ್ಥಿ ಸಿ.ಎಚ್. ವಿಜಯಶಂಕರ್, ಶಾಸಕ ಸಿ.ಟಿ.ರವಿ, ಮಾಜಿ ಶಾಸಕರಾದ ಡಾ ವೈ.ಸಿ. ವಿಶ್ವನಾಥ್, ರೇಣುಕಪ್ಪ ಎಂ.ಕೆ. ಪ್ರಾಣೇಶ್, ಕೆ.ಎಚ್.ಶಂಕರ್, ಅರೇಕಲ್ ಪ್ರಕಾಶ್, ಕಾಮನಕೆರೆ ಶಶಿಧರ್, ಎ.ಮಣಿ, ರೇಖಾ ಹುಲಿಯಪ್ಪಗೌಡ, ಕೆ.ಬಿ. ಸೋಮೇಶ್, ರವಿಶಂಕರ್, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.