ಚಿಕ್ಕಮಗಳೂರು

ಭೂ ಸಂರಕ್ಷಣೆ ಕಾರ್ಯಪಡೆ ರಚಿಸಿ ಚಪ್ಪಡಿ ಎಳೆದ ಬಿಜೆಪಿ: ರವಿಶಂಕರ್

Published On :

ಕೊಪ್ಪ:  ಒತ್ತುವರಿದಾರ ರೈತರನ್ನು ಜೈಲಿಗಟ್ಟುವ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ರಚಿಸಿದ ಬಿಜೆಪಿಯವರ ಕೊಡುಗೆ ರೈತ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಎಂ.ಆರ್.ರವಿಶಂಕರ್ ಹೇಳಿದರು.
ಇಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನ ಜ್ವಲಂತ ಸಮಸ್ಯೆಗಳಿಗೆ ಕಾಂಗ್ರೆಸ್ ಹೊಣೆ ಎಂಬಂತೆ ಸುಳ್ಳು ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಪಕ್ಷ ಈ ಭಾಗದ ರೈತರಿಗೆ ಕೊಟ್ಟಿರುವ ಕೊಡುಗೆ ಬಗ್ಗೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ನಗರ ಒತ್ತುವರಿ ಬಗ್ಗೆ ರಚಿತವಾದ ಎ.ಟಿ. ರಾಮಸ್ವಾಮಿ ಸಮಿತಿಗೆ ಬದಲಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಕಂದಾಯ ಸಚಿವರಾಗಿದ್ದಾಗ ಬಾಲಸುಬ್ರಹ್ಮಣ್ಯಂ ನೇತೃತ್ವದಲ್ಲಿ ಸರ್ಕಾರಿ ಭೂ ಸಂರಕ್ಷಣೆ ಕಾರ್ಯಪಡೆ ರಚಿಸಿ ಈ ಭಾಗದ ರೈತರ ಮೇಲೆ ಚಪ್ಪಡಿ ಎಳೆದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ದೂರಿದರು.
ದಿಕ್ಕು ತಪ್ಪಿಸುವ ಪ್ರಯತ್ನ: ಹುಲಿ ಯೋಜನೆ ಹಾಗೂ ಕಸ್ತೂರಿರಂಗನ್ ವರದಿ ಜಾರಿಗೆ ಮೂಲ ಹೊಣೆಗಾರರಾದ ಬಿಜೆಪಿಯವರು ತಮ್ಮ ಎಲ್ಲ ದೋಷಗಳನ್ನು ಬೇರೆ ಪಕ್ಷಗಳ ಮೇಲೆ ಹಾಕಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದೆ. ದತ್ತನ ಹೆಸರಲ್ಲಿ ಮತಕೇಳಿ ಮತ್ತೆ ಮರೆತ ಆ ಪಕ್ಷ ಚುನಾವಣೆಗೊಂದು ಹೊಸ ಬಲೂನ್ ಸಿದ್ಧಪಡಿಸಿಕೊಳ್ಳತ್ತದೆ ನಂತರ ಅದು ಟುಸ್ ಎನ್ನುತ್ತದೆ ಎಂದು ವ್ಯಂಗ್ಯವಾಡಿದರು.
ಸಂಸದ ಜಯಪ್ರಕಾಶ್ ಹೆಗಡೆ ಕಸ್ತೂರಿರಂಗನ್ ವರದಿ ಪುನರ್ ಪರಿಶೀಲನೆಗೆ ಮನವಿ ಮಾಡಿರುವುದಲ್ಲದೇ ಕುದುರೆಮುಖ ಅಭಯಾರಣ್ಯ ಪ್ರದೇಶವನ್ನು ಇಕೋಟೂರಿಸಂ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರದ ಒಪ್ಪಿಗೆ ಪಡೆದಿದ್ದಾರೆ. ಯುಪಿಎ ಸರ್ಕಾರ ಪರಂಪರಾಗತ ಅರಣ್ಯವಾಸಿಗಳಿಗೆ ಭೂ ಹಕ್ಕುದಾರಿಕೆ ನೀಡಲು ಅರಣ್ಯಹಕ್ಕು ಕಾಯ್ದೆ ಜಾರಿಗೆ ತಂದಿದೆ ಎಂದು ನೆನಪಿಸಿದರು.
ಭ್ರಷ್ಟ ಆಡಳಿತ ಬಯಲು:  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್ ಮಾತನಾಡಿ, ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಗೆ ರಾಜ್ಯದಲ್ಲಿ ಕಳೆದ 7 ವರ್ಷ ಯಾರ ಸರ್ಕಾರ ಅಸ್ಥಿತ್ವದಲ್ಲಿತ್ತು ಎಂಬುದೇ ಮರೆತುಹೋಗಿದೆ. ಉದ್ಯೋಗ ಖಾತ್ರಿ, ಶೌಚಾಲಯ ನಿರ್ಮಾಣದಲ್ಲಿ ಅವ್ಯವಹಾರ ಆಗಿರುವುದನ್ನು ಒಪ್ಪಿಕೊಳ್ಳವ ಮೂಲಕ ರಾಜ್ಯ ಬಿಜೆಪಿಯ ಭ್ರಷ್ಟ ಆಡಳಿತವನ್ನು ಬಯಲುಗೊಳಿಸಿದ್ದಾರೆ ಎಂದರು.
ಮುಖಂಡ ಮೀಗಾ ಚಂದ್ರಶೇಖರ್, ನವೀನ್ ಮಾವಿನಕಟ್ಟೆ, ರತ್ನಕಾರ್, ರೇವಂತ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.