ಚಿಕ್ಕಮಗಳೂರು

ಜಾತ್ಯತೀತ ಮತದಾರರು ಕೈ ಹಿಡಿಯಲಿ

Published On :

ಕ.ಪ್ರ. ವಾರ್ತೆ, ಹಿರಿಯೂರು, ಏ10
ಸ್ವಾತಂತ್ರ್ಯ ಬಂದ ನಂತರ ಅಧಿಕಾರಕ್ಕೆ ಬಂದ ಯಾವ ಪಕ್ಷಗಳೂ ಬಡವರಿಗಾಗಿ ರೂಪಾಯಿಗೆ ಒಂದು ಕೆಜಿ ಪಡಿತರ ಅಕ್ಕಿ ವಿತರಿಸುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ ಸಿದ್ದರಾಮಯ್ಯನವರ ಸರ್ಕಾರ ತನ್ನ ಬದ್ಧತೆಯನ್ನು ಮೆರೆದಿದೆಯೆಂದು ಶಾಸಕ ಡಿ.ಸುಧಾಕರ್ ಹೇಳಿದರು.
ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಹೋಬಳಿ ಮಟ್ಟದ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಹತ್ತು ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರ್ಕಾರ ಪಾರದರ್ಶಕ ಮತ್ತು ಸ್ವಚ್ಚ ಆಡಳಿತ ನೀಡುತ್ತಿರುವುದಲ್ಲದೆ ಬಡವರಿಗಾಗಿ ಕ್ರಾಂತಿಕಾರಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನಪರ ನಿಲುವನ್ನು ಮತ್ತೊಮ್ಮೆ ಜಾಹೀರುಗೊಳಿಸಿದೆಯೆಂದರು.
ಕಾಂಗ್ರೆಸ್ ಬೆಂಬಲಿಸಲು ಮನವಿ: 60 ವರ್ಷಗಳಿಂದಲೂ ಎಲ್ಲ ಜಾತಿ ಧರ್ಮದವರನ್ನ ಬೆಸೆದುಕೊಂಡು ಆರೋಗ್ಯಕರ ರಾಜಕಾರಣ ಮಾಡಿದ ಕೀರ್ತಿ ಕಾಂಗ್ರೆಸ್‌ಗಿದೆ. ಆದರೆ ಕೋಮುವಾದದ ಮೂಲಕ ಪಕ್ಷದ ನೆಲಗಟ್ಟನ್ನು ರೂಪಿಸಿಕೊಂಡಿರುವ ಬಿಜೆಪಿ ದೇಶ ಒಡೆಯುವ ಕೆಲಸ ಮಾಡುತ್ತಿದೆ. ಈ ಕಾರಣಕ್ಕೆ ಜಾತ್ಯತೀತ ಮತದಾರರು ಬಿಜೆಪಿ ಮತ್ತು ಜೆಡಿಎಸ್ ತಿರಸ್ಕರಿಸಿ ಕಾಂಗ್ರೆಸ್ ಕೈ ಹಿಡಿಯಬೇಕೆಂದು ಮನವಿ ಮಾಡಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಕಾಂಗ್ರೇಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಸಜ್ಜನ ರಾಜಕಾರಣಿಯಾಗಿದ್ದು, ಈ ಹಿಂದೆ ಪಕ್ಷ ನೀಡಿದ ಅನೇಕ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಅವರ ಬದ್ದತೆಯನ್ನು ಮನಗಂಡೇ ಪಕ್ಷ ಟಿಕೆಟ್ ನೀಡಿ ಆಶೀರ್ವದಿಸಿದ್ದು, ಕ್ಷೇತ್ರದ ಮತದಾರರು ಬಹುಮತಗಳಿಂದ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಶೀಘ್ರದಲ್ಲೇ ಕಾಮಗಾರಿ: ಜೆಜಿಹಳ್ಳಿ ಹೋಬಳಿಯ ಮೂವತ್ತೆಂಟು ಹಳ್ಳಿಗಳಿಗೆ ಪೈಪ್‌ಲೈನ್‌ಗಳ ಮೂಲಕ ಗಾಯತ್ರಿ ಜಲಾಶಯದಿಂದ ಕುಡಿಯುವ ನೀರು ಕೊಡುವ ಯೋಜನೆಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದೆಂದರು. ಈ ಭಾಗದ ಅಭಿವೃದ್ಧಿಗಾಗಿ ಪ್ರಾಮಾಣಿಕ ಶ್ರಮ ಹಾಕಲಾಗುವುದೆಂದು ಭರವಸೆ ನೀಡಿದರು.
ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಮಾತನಾಡಿ, ಬಿಜೆಪಿ ಪಕ್ಷವು ಸುಳ್ಳು ಕಥೆಗಳನ್ನು ಹೆಣೆಯುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ದೇಶದಲ್ಲಿ ಮೋದಿ ಅಲೆ ಇಲ್ಲ ಎಂಬುದು ಈಗಾಗಲೇ ಮತದಾರರಿಗೆ ಮನದಟ್ಟಾಗಿದೆಯೆಂದರು. ಕಾಂಗ್ರೆಸ್ ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಜಾರಿಗೆ ತಂದ ಯೋಜನೆಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಸುಭದ್ರಗೊಂಡಿದ್ದು, ಜನರ ಪರಮಾಧಿಕಾರವನ್ನು ಎತ್ತಿಹಿಡಿಯುವ ಎಲ್ಲ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಿದೆಯೆಂದರು.
ಸಮಸ್ಯೆ ಪರಿಹಾರಕ್ಕೆ ಯತ್ನ: ಆದರೆ ವಿರೋಧ ಪಕ್ಷಗಳು ವಿನಾಕಾರಣ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತ ಕಾಂಗ್ರೆಸ್ ಸಾಧನೆಗಳು ಜನರ ಮನಸ್ಸಿನಿಂದ ಅಳಿಸಿಹಾಕುವ ಪ್ರಯತ್ನಕ್ಕೆ ಮುಂದಾಗಿವೆ. ನನಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನ ಆಶೀರ್ವದಿಸಿ ಸಂಸತ್ ಪ್ರವೇಶಕ್ಕೆ ಅನುವು ಮಾಡಿಕೊಟ್ಟಲ್ಲಿ ಜಿಲ್ಲೆ ಪ್ರಮುಖ ಸಮಸ್ಯೆಗಳನ್ನು ನೀಗಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದರು.
ಮಾಜಿ ಸಂಸದೆ ಡಿ.ಕೆ. ತಾರಾದೇವಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸೇತುರಾಂ, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಯಣ್ಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲ್ಲಟ್ಟಿ ತಿಪ್ಪೇಸ್ವಾಮಿ,ಮುಖಂಡರಾದ ಮಾಧವ, ಎಚ್.ಆರ್. ಭಾಸ್ಕರ್, ವಿಜಯಕುಮಾರ್, ಪುರಸಭಾ ಸದಸ್ಯರಾದ ಪ್ರೇಮ್ಕುಮಾರ್, ರವಿಚಂದ್ರನಾಯ್ಕ, ನಾಗೇಂದ್ರನಾಯ್ಕ, ಪುರುಷೋತ್ತಮ್, ಬಸವರಾಜನಾಯ್ಕ, ಈರಲಿಂಗೇಗೌಡ, ಜ್ಞಾನದೇವಪ್ಪ, ಚಂದ್ರನಾಯ್ಕ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.