ಚಿಕ್ಕಮಗಳೂರು

ಶೃಂಗೇರಿ ಕ್ಷೇತ್ರ ಅಭಿವೃದ್ಧಿಪಡಿಸಿದ್ದು ಕಾಂಗ್ರೆಸ್ ಅಲ್ಲ, ಬಿಜೆಪಿ

Published On :

ಕ.ಪ್ರ.ವಾರ್ತೆ ಟಿ ನರಸಿಂಹರಾಜಪುರ ಟಿ ಏ.10
ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಸಾಧನೆಯನ್ನು ಕಾಂಗ್ರೆಸ್ ಪಕ್ಷವು ತನ್ನ ಸಾಧನೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಶಾಸಕ ಡಿ.ಎನ್. ಜೀವರಾಜ್ ಆರೋಪಿಸಿದರು.
ಇಲ್ಲಿನ ನಾಗರಮಕ್ಕಿಯಲ್ಲಿ ಅವರು ಗುರುವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 2012 ರಲ್ಲಿ ಚಿಕ್ಕಮಗಳೂರು- ಉಡುಪಿ ಲೋಕಸಭಾ ಚುನಾವಣೆ ಸಂದರ್ಭ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ಎಂಬ ಕಾರಣದಿಂದ ಜನರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಅವರನ್ನು ಗೆಲ್ಲಿಸಿದ್ದರು. ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿ ಇದ್ದರೂ ಶೃಂಗೇರಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷವು ಏನು ಕೊಡುಗೆ ನೀಡಿದೆ ಎಂದು ಪಟ್ಟಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಟೆಂಡರ್ ರದ್ದಾಯಿತು:  ಬಿಜೆಪಿ ಸರ್ಕಾರ ಇದ್ದಾಗ ಒತ್ತುವರಿ ಮಾಡಿದ ಬಡವರ ಬೇಲಿ ಕೀಳಲು ಬಿಡುತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದಾಕ್ಷಣ ಅರಣ್ಯ ಇಲಾಖೆಯವರು ಮಿಲಿಟರಿಯಂತೆ ಬಂದು ಬಡವರ ಬೇಲಿ ಕಿತ್ತು ಹಾಕಲಾಗುತ್ತಿದ್ದಾರೆ. ಆದರೆ,ಶ್ರೀಮಂತರು ಒತ್ತುವರಿ ಮಾಡಿದ ಜಮೀನಿನ ಬೇಲಿ ಕೀಳುತ್ತಿಲ್ಲ. ನಾನು ಉಸ್ತುವಾರಿ ಮಂತ್ರಿಯಾಗಿದ್ದಾಗ 30 ಕಿ.ಮೀ. ರಸ್ತೆಗೆ ಹಣ ಮಂಜೂರು ಮಾಡಿಸಲಾಗಿತ್ತು. ಟೆಂಡರ್ ಸಹ ಆಗಿತ್ತು. ನಮ್ಮ ಸರ್ಕಾರ ಬಿದ್ದ ಕೂಡಲೇ ಅದನ್ನು ಸ್ಥಗಿತಗೊಳಿಸಲಾಯಿತು ಎಂದರು.
ಚಿಕ್ಕಮಗಳೂರು ಜಿಲ್ಲೆಯ ರಸ್ತೆ ಅಭಿವೃದ್ಧಿಗೆ 36 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿದ್ದೆ. ಅದನ್ನು ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ತಡೆಹಾಕಿದ್ದರು. ನಾನು ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದ ನಂತರ ಹಣ ಬಿಡುಗಡೆ ಮಾಡಲಾಯಿತು. ಆಲ್ದೂರು- ಬಿದರಗೋಡು ರಸ್ತೆಗೆ 23 ಕೋಟಿ  ಮಂಜೂರು ಮಾಡಿಸಿದ್ದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯು ಅದನ್ನು ನಾನು ಮಂಜೂರು ಮಾಡಿಸಿದ್ದೇನೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಶೋಭಾಗೆ ಮಂತ್ರಿಗಿರಿ:  ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದ 6 ರಾಜ್ಯಗಳಲ್ಲಿ ಬಿಜೆಪಿ ಪಕ್ಷದಿಂದ ಮಹಿಳಾ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಮಾತ್ರ ಸ್ಪರ್ಧಿಸುತ್ತಿದ್ದಾರೆ. ಅವರು ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಆಗುವುದು ಖಚಿತ. ಪುತ್ತೂರಿನ ಕುಗ್ರಾಮದಿಂದ ಬಂದ ಶೋಭಾ ಕರಂದ್ಲಾಜೆ ಅವರು ರಾಜ್ಯದ ಇಂಧನ ಖಾತೆ ಮಂತ್ರಿಯಾಗಿ ರಾಜ್ಯದಲ್ಲಿ ಬರಗಾಲ ಇದ್ದರೂ ಜನತೆಗೆ ಸಮರ್ಪಕ ವಿದ್ಯುತ್ ಸೌಲಭ್ಯ ನೀಡಿದ್ದರು. ಮಂತ್ರಾಲಯದಲ್ಲಿ ಮಳೆ ಬಂದು ಪ್ರವಾಹದಲ್ಲಿ ಸಿಕ್ಕಿ ಬಿದ್ದಿದ್ದ ಶ್ರೀಗಳನ್ನು ಶೋಭಾ ಕರಂದ್ಲಾಜೆ ರಕ್ಷಣೆ ಮಾಡಿದ್ದರು. ಅವರ ದಕ್ಷತೆಗೆ ಮತ ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಮತದಾರರಿಗೆ ಕರೆ ನೀಡಿದರು.
ಗುಟ್ಕಾ ರದ್ದು:  ಸಿಗರೇಟು ಕಂಪನಿಯ ಲಾಬಿಗೆ ಮಣಿದು ಗುಟ್ಕಾವನ್ನು ಬ್ಯಾನ್ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಈಗ ಕೇಂದ್ರ ಸರ್ಕಾರದ ಇಲಾಖೆಯ ಅಧಿಕಾರಿ ಇಂದಿರಾ ಜೈಸಿಂಗ್ ಎಂಬುವರು ಅಡಕೆ ಹಾನಿಕರವಾಗಿದ್ದು ನಿಷೇಧ ಮಾಡುವಂತೆ ಸುಪ್ರೀಂಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಅಡಕೆ ಇಲ್ಲದಿದ್ದರೆ ಮಲೆನಾಡಿನ ಭವಿಷ್ಯವನ್ನು ಯೋಚಿಸಲೇ ಸಾಧ್ಯವಾಗುವುದಿಲ್ಲ. ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತಂದಿದ್ದು ಕೇಂದ್ರದ ಕಾಂಗ್ರೆಸ್ ಸರ್ಕಾರವೇ. ಈ ವರದಿ ಜಾರಿಗೆ ಬಂದರೆ ರೈತರು ತಮ್ಮ ಜಮೀನಿಗೆ ರಾಸಾಯನಿಕ ಗೊಬ್ಬರ ಹಾಕಲು ಬಿಡುವುದಿಲ್ಲ. ಮಣ್ಣು ತೆಗೆಯಲು ಬಿಡುವುದಿಲ್ಲ. ಕಾಡಿನಿಂದ ಸೊಪ್ಪು, ದರಗು ಸಹ ತರಲು ಬಿಡುವುದಿಲ್ಲ. ಮಲೆನಾಡಿನ ರೈತರು ಕಾಡು ಪ್ರಾಣಿಗಳೇ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ನೀಲೇಶ್, ಕೆ.ಪಿ. ಸಂಪತ್‌ಕುಮಾರ್, ವೈ.ಎಸ್. ಗಣೇಶ್, ವೈ.ಎಸ್. ಸುಬ್ರಮಣ್ಯ, ಕೆ.ಎಸ್. ಉಮೇಶ್, ಪ್ರಸನ್ನ, ಬಾಬು ಪೂಜಾರಿ, ಶ್ರೀಧರ್ ಮುಂತಾದವರಿದ್ದರು.
ಇದಕ್ಕೂ ಮೊದಲು ಜೀವರಾಜ್ ಮಲ್ಲಂದೂರು, ಖಂಡಕ, ಬೆಳ್ಳೂರ ಕಾಲೋನಿ, ಬೆಮ್ಮನೆಯಲ್ಲಿ ಪ್ರಚಾರ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.