ಸೇತುವೆಗಿಲ್ಲ ತಡೆಗೋಡೆ, ಅಪಘಾತಕ್ಕಿಲ್ಲ ಅಡೆತಡೆ!
ವಿಶೇಷ ವರದಿ
ತರೀಕೆರೆ: ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯಲ್ಲಿನ ಹಲವು ಸೇತುವೆ ಶಿಥಿಲಗೊಂಡಿರುವುದರಿಂದ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದರಿಂದ ಪ್ರಯಾಣಿಕರು, ವಾಹನ ಚಾಲಕರು ಸಂಚಾರಕ್ಕೆ ಭಯಪಡುವಂತಾಗಿದೆ.
ತರೀಕೆರೆಯಿಂದ ಭದ್ರಾವತಿಗೆ ಹೋಗುವ ಮತ್ತು ತರೀಕೆರೆಯಿಂದ ಬೀರೂರು, ಕಡೂರಿಗೆ ಹೋಗುವ ಮಾರ್ಗದಲ್ಲಿ ಅಪಘಾತಗಳು ಪದೇ ಪದೇ ನಡೆಯುತ್ತಿದೆ. ತರೀಕೆರೆ ಆಸುಪಾಸಿನಲ್ಲಂತೂ ಕನಿಷ್ಠ ವಾರಕ್ಕೆರಡು ಅಪಘಾತ ನಡೆಯುತ್ತಲೇ ಇವೆ.
ಅಪಘಾತ ವಲಯ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಶಿಥಿಲ ಸೇತುವೆ, ತಿರುವುಗಳು ಇವೆ. ಆದರೂ ಅಪಘಾತ ವಲಯ ಎಚ್ಚರಿಕೆಯಿಂದ ವಾಹನ ಚಲಿಸಿ ಎಂಬ ಬೋರ್ಡ್ ಕೂಡ ಹಾಕಿಲ್ಲ. ಹೆಚ್ಚುತ್ತಿರುವ ಅಪಘಾತಗಳಿಂದಾಗಿ ತರೀಕೆರೆ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ(ಭದ್ರಾವತಿ ಮತ್ತು ಬೀರೂರು ಕಡೆಗೆ) ಹದನೈದು ಕಿಮೀವರೆಗೆ ಸಂಪೂರ್ಣ ಅಪಘಾತ ವಲಯ ಎಂದು ರಸ್ತೆ ಬದಿಯಲ್ಲಿ ಎಲ್ಲ ಕಡೆ ಬೋರ್ಡ್ ಹಾಕುವ ಅನಿವಾರ್ಯತೆ ಬಂದಿದೆ.
ಶಿಥಿಲಗೊಂಡ ಸೇತುವೆ: ತರೀಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆ ಮತ್ತು ಸೇತುವೆಗಳ ತಡೆಗೋಡೆಗಳು ಶಿಥಿಲಗೊಂಡಿವೆ. ತರೀಕೆರೆ ಪಟ್ಟಣ ವ್ಯಾಪ್ತಿಯಲ್ಲೇ ಎಪಿಎಂಸಿ ಬಳಿ, ಮಿನಿ ವಿಧಾನಸೌಧದ ಬಳಿ( ಸೇತುವೆ ಗೋಡೆ ಎತ್ತರಿಸಬೇಕು), ಅಜ್ಜಂಪುರ ಗೇಟ್ ಬಳಿ ಎರಡು ಸೇತುವೆ, ಪಟ್ಟಣದ ಹೊರ ವಲಯದಲ್ಲಿ ಕೋರನಹಳ್ಳಿ ಸೇತುವೆ, ಕಟ್ಟೆಹೊಳೆ ಸೇತುವೆ, ಬೇಲೇನಹಳ್ಳಿ ಸೇತುವೆ ಈ ಎಲ್ಲಾ ಸೇತುವೆಗಳು ಶಿಥಿಲಗೊಂಡಿವೆ. ಅಲ್ಲದೆ, ತಡೆಗೋಡೆಗಳೆಲ್ಲಾ ಬಿದ್ದು ಹೋಗಿದೆ. ಶಿಥಿಲಗೊಂಡ ಸೇತುವೆಗಳು ಅಪಘಾತಕ್ಕೆ ಆಹ್ವಾನ ನೀಡುವಂತಿದೆ.
ಸಂಚಾರಕ್ಕೆ ತೊಡರಾದ ಗಿಡಗಳು: ಅಪಘಾತಕ್ಕೆ ಬಹುಮುಖ್ಯ ಕಾರಣವೆಂದರೆ, ಎದುರು ಬರುವ ವಾಹನಗಳು ಕಾಣದಂತೆ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆದು ನಿಂತಿರುವ ಗಿಡಗಳು. ರಸ್ತೆ ತಿರುವಿನಲ್ಲಂತೂ ಎದುರು ಬರುವ ವಾಹನಗಳು ಕಾಣುವುದಿಲ್ಲ. ದ್ವಿಚಕ್ರ ವಾಹನಗಳು ರಸ್ತೆ ಮಗ್ಗುಲಲ್ಲಿ ಸಂಚರಿಸಲು ಸ್ಥಳವೇ ಇಲ್ಲ.
ರಾತ್ರಿ ವೇಳೆಯಲ್ಲಂತೂ ವಾಹನಗಳ ದೀಪದ ಬೆಳಕು ಸರಿಯಾಗಿ ಪಕ್ಕದಲ್ಲಿ ಬರುವ ವಾಹನಗಳ ಮೇಲಾಗಲಿ ಅಥವಾ ಎದುರು ವಾಹನಗಳ ಮೇಲಾಗಲಿ ಸ್ಪಷ್ಟವಾಗಿ ಬೀಳುವುದಿಲ್ಲ. ಇದಕ್ಕೆ ಕಾರಣ ಅಡ್ಡ ಬರುವ ಮರದ ಕೊಂಬೆ, ಗಿಡಗಳೇ ಆಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ರಸ್ತೆ ಎರಡು ಬದಿಯಲ್ಲಿ ಬೆಳೆದಿರುವ ಸುರಕ್ಷಿತ ಸಂಚಾರಕ್ಕೆ ಅಡ್ಡಿಪಡಿಸುವ ಈ ಗಿಡಗಳನ್ನು ಆಗಾಗ್ಗೆ ಸವರಿ ಹಾಕುವ ಕಾರ್ಯವನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಚಾಚೂ ತಪ್ಪದೇ ನಿರ್ವಹಿಸಬೇಕು. ಆದರೆ, ಅದು ಆಗುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಹಾಳಾಗಿರುವ ಸೇತುವೆ ತಡೆಗೋಡೆ ದುರಸ್ತಿಪಡಿಸುವ ಕಾರ್ಯವೂ ಆಗಿಲ್ಲ.
ಆಗಬೇಕಾದ ಕಾರ್ಯ: ತರೀಕೆರೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಾಗಲೇ ಶಿಥಿಲಗೊಂಡಿರುವ ಹತ್ತಾರು ಸೇತುವೆ ಮತ್ತು ತಡೆಗೋಡೆಗಳನ್ನು ತಡಮಾಡದೇ ಪುನರ್ ನಿರ್ಮಿಸಬೇಕು. ರಸ್ತೆ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಳನ್ನು ಸವರಿ ಹಾಕಿ ರಸ್ತೆ ಸ್ಪಷ್ಟವಾಗಿ ಕಾಣುವಂತೆ ಮಾಡಬೇಕು. ಸೂಕ್ಷ್ಮ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಹಾಕಬೇಕು. ಆ ಮೂಲಕ ಅತಿ ವೇಗವಾಗಿ ಸಂಚರಿಸುವ ವಾಹನಗಳ ವೇಗ ನಿಯಂತ್ರಿಸಲು ಮೊದಲು ಗಮನ ಹರಿಸಬೇಕು. ರಾ.ಹೆ.ಯಿಂದ ತಿರುವು ತೆಗೆದುಕೊಳ್ಳುವ ಅಜ್ಜಂಪುರ, ಲಕ್ಕವಳ್ಳಿ ಸಂಪರ್ಕ ರಸ್ತೆಗಳಲ್ಲಿ ವಾಹನಗಳ ವೇಗ ನಿಯಂತ್ರಿಸಲು ಮೊದಲು ಮುಂದಾಗಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

