ಚಿಕ್ಕಮಗಳೂರು

ಪ್ರಕರಣ ತಿರುಚುವ ಪ್ರಯತ್ನ: ಆರೋಪ

Published On :

ಬಾಳೆಹೊನ್ನೂರು:  ತನಿಕೋಡು ಬಳಿ ನಡೆದ ಪ್ರಕರಣ ತಿರುಚುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿರುವ ಬಜರಂಗದಳದ ಜಿಲ್ಲಾ ಸಂಚಾಲಕ ಆರ್.ಡಿ. ಮಹೇಂದ್ರ, ರಾಜ್ಯ ಸರ್ಕಾರ ಅವಿವೇಕಿಯಂತೆ ವರ್ತಿಸುತ್ತಿದೆ ಎಂದು ಟೀಕಿಸಿದ್ದಾರೆ.
ಕಬೀರ್ ಹಾಗೂ ಆತನ ಸಹಚರರು ಹಲವು ದಿನದಿಂದ ಅಕ್ರಮವಾಗಿ ಗೋವು ಸಾಗಾಣಿಕೆ ಮಾಡುತ್ತಿದ್ದರು. ಈ ದಂಧೆ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದೆ. ಏ. 19 ರಂದು 23 ದನಗಳನ್ನು ಅಮಾನುಷವಾಗಿ ತುಂಬಿಸಿ ಸಾಗಿಸಲಾಗುತ್ತಿತ್ತು. ಅವುಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿರಲಿಲ್ಲ, ಈಗ ದಾಖಲೆಯನ್ನು ಸೃಷ್ಟಿಸಿ ಪ್ರಕರಣ ತಿರುಚುವ ಕೆಲಸ ನಡೆಯುತ್ತಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಓಡುವ ಅವಶ್ಯಕತೆ ಏನು: ದನಗಳನ್ನು ಖರೀದಿ ಮಾಡಿದ್ದೇ ಆದರೆ ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳು ಇದ್ದಿದ್ದರೆ ಪೊಲೀಸರನ್ನು ನೋಡಿ ಓಡುವ ಅವಶ್ಯಕತೆ ಏನಿತ್ತು ಎಂದಿರುವ ಅವರು ದಾಖಲೆ ಇಲ್ಲದಿರುವುದರಿಂದ ಹೆದರಿ ಓಡಿದ ಸಂದರ್ಭದಲ್ಲಿ ಅನುಮಾನಗೊಂಡ ಪೊಲೀಸರು ಗುಂಡು ಹಾರಿಸಿದ್ದಾರೆ. ಇದರಲ್ಲಿ ನಕ್ಸಲ್ ನಿಗ್ರಹ ಪಡೆಯ ತಪ್ಪು ಖಂಡಿತ ಇಲ್ಲ. ಎಎನ್‌ಎಫ್ ಸಿಬ್ಬಂದಿಯ ಆತ್ಮಸ್ಥೈಯ ಕುಂದಿಸುವ ಕೆಲಸ ನಡೆಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ನಕ್ಸಲರಿಗೆ ಅನುಕೂಲವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಕುರಿತು ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಕಳವಳಕಾರಿಯಾಗಿದೆ. ಒಬ್ಬ ಅಕ್ರಮ ಗೋ ಸಾಗಾಣಿಕೆದಾರನಿಗೆ ಪರಿಹಾರ ನೀಡಲು ಮುಂದಾಗುತ್ತಿರುವ ಜನಪ್ರತಿನಿಧಿಗಳು ಗಡಿಯಲ್ಲಿ ಸೈನಿಕರು ಪ್ರಾಣ ತೆತ್ತಾಗ ಯಾಕೆ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಮೂರ್ಖತನದ ಪರಮಾವಧಿ; ರಾಜ್ಯದ ಒಳಿತಿಗಾಗಿ ಮೃತರಾದ ಮಲ್ಲಿಕಾರ್ಜುನ ಬಂಡೆ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಿದ್ದು, ಹಲವಾರು ದಿನಗಳ ನಂತರ. ಆದರೆ ಗೋ ಸಾಗಾಣಿಕೆದಾರ ಕಬೀರ್ ಮೃತಪಟ್ಟ ಎರಡೇ ದಿನದಲ್ಲಿ ಸಿಒಡಿ ತನಿಖೆಗೆ ಒಪ್ಪಿಸಿರುವುದು ಸರ್ಕಾರದ ಮೂರ್ಖತನದ ಪರಮಾವಧಿ ಎಂದು ಆರೋಪಿಸಿದ್ದಾರೆ.
ಎಎನ್‌ಎಫ್ ಸಿಬ್ಬಂದಿಯಿಂದ ತಪ್ಪೊಕಂಡು ಓಡಿ ಹೋದ ಇಬ್ಬರು ಅಪರಾಧಿಗಳಿಗೆ ಶಾಸಕ ಮೈಯುದ್ದಿನ್ ಬಾವಾ ರಕ್ಷಣೆ ನೀಡಿರುವುದರ ಹಿಂದಿನ ಔಚಿತ್ಯವೇನು ಎಂದು ಪ್ರಶ್ನಿಸಿರುವ ಅವರು, ಜಿಲ್ಲೆಯಲ್ಲಿ ಯಾವುದೇ ಪ್ರಕರಣ ನಡೆದರೂ ಬಜರಂಗದಳದ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಸಂಘಟನೆ  ಹೋರಾಟ ದಮನಿಸುವ ಯತ್ನ ಖಂಡನೀಯವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.