ದೈಹಿಕವಾಗಿ ಮಾತ್ರ ಕಾಂಗ್ರೆಸ್‌ನಲ್ಲಿರುವವರುಪಕ್ಷ ಬಿಡುವುದೇ ಒಳ್ಳೆಯದು: ಭಂಡಾರಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.25 ಮಾನಸಿಕ ಹಾಗೂ ದೈಹಿಕವಾಗಿ ಪಕ್ಷದಲ್ಲಿ ಗುರುತಿಸಿಕೊಂಡವರು ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿ. ಅದು ಬಿಟ್ಟು ದೈಹಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದು, ಮಾನಸಿಕವಾಗಿ ಬೇರೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೆ ಅಂತವರು ಕಾಂಗ್ರೆಸ್ ಬಿಟ್ಟು ಹೋಗುವುದೇ ಒಳ್ಳೆಯದು ಎಂದು ಎಂದು ಎಐಸಿಸಿ ಸದಸ್ಯ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಹೇಳಿದರು.
ನಗರದಲ್ಲಿ ಶುಕ್ರವಾರ ಕಾಂಗ್ರೆಸ್ ಭವನದಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆತ್ಮವಿಮರ್ಶೆ: ಪಕ್ಷದ ಕೆಲ ನಾಯಕರು ತಪ್ಪು ಮಾಡಿದ್ದೇವೆ. ಇದರಿಂದಾಗಿಯೇ ಕಾರ್ಯಕರ್ತರು ಹಾಗೂ ಮತದಾರರಿಂದ ದೂರವಾಗಿದ್ದೇವೆ ಎಂದೆನಿಸುತ್ತದೆ. ಇದನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಕಾಂಗ್ರೆಸ್ ಕಾಮಧೇನು ಇದ್ದಂತೆ. ಅದು ನಮಗೆ ಎಲ್ಲವನ್ನೂ ನೀಡಿದೆ. ಆದರೆ ಈಗ ಎಲ್ಲೋ ಒಂದು ಕಡೆ ಕಾಮಧೇನು ಹಾಲು ಕೊಡುವುದನ್ನು ನಿಲ್ಲಿಸುತ್ತದೆ ಎಂಬ ಭಾವನೆ ಮೂಡುತ್ತಿದೆ. ಆದರೆ ಪಕ್ಷದಿಂದ ಅಧಿಕಾರ ಪಡೆದವರು ಸುಮ್ಮನಿರಬಾರದು. ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದರು.
ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಬೀಗ ಹಾಕಿಕೊಂಡಿದ್ದಾರೆ. ಬೇರೆಯವರು ಪಕ್ಷಕ್ಕೆ ಬರಬಾರದು ಎಂಬ ಮನಸ್ಥಿತಿಯಲ್ಲಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಯುವಜನತೆ ಹಾಗೂ ಮಹಿಳೆಯರನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಪಕ್ಷಕ್ಕೆ ಕರೆತರಬೇಕು. ಸಂಘಟನೆಯನ್ನು ಬಲಗೊಳಿಸಬೇಕು ಎಂದರು.
ಅಧಿಕಾರಕ್ಕಲ್ಲ: ದೇಶ ಉಳಿಯಬೇಕು. ಪ್ರಜಾಪ್ರಭುತ್ವ ಉಳಿಯಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬರಬೇಕೇ ಹೊರತು ಅಧಿಕಾರದ ಆಸೆಗಲ್ಲ ಎಂದು ಮಂಜುನಾಥ ಭಂಡಾರಿ ಹೇಳಿದರು.
ರಾಜಕಾರಣದಲ್ಲಿ ಚುನಾವಣೆ ಎನ್ನುವುದು ನಿರಂತರ ಪ್ರಕ್ರಿಯೆ. ಇಲ್ಲಿ ನಾನೂ ಕೂಡ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಗೆಲವು ಸಾಧಿಸಿದರೂ, ಸೋಲು ಅನುಭವಿಸಿದರೂ ಯಾವುದೇ ಬದಲಾವಣೆ ಆಗುವುದಿಲ್ಲ. ಮುಂದೆಯೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಪ್ರತಿಯೊಬ್ಬರಲ್ಲಿಯೂ ಸಮಾನತೆ ನಿರ್ಮಾಣವಾಗಬೇಕು. ಬಡವರು, ತುಳಿತಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕು, ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆಯೇ ಹೊರತು ಯಾವುದೇ ಅಧಿಕಾರದ ಆಸೆಗಲ್ಲ. ಹೀಗಾಗಿ ಫಲಿತಾಂಶ ನನ್ನಲ್ಲಿ ಯಾವ ಬದಲಾವಣೆಯನ್ನೂ ಉಂಟುಮಾಡದು ಎಂದರು.
ಚುನಾವಣಾ ಪ್ರಚಾರದ ವೇಳೆ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ತೆರಳಿ ಪ್ರಚಾರ ಮಾಡಿದ್ದೇನೆ. ಈ ಸಮಯದಲ್ಲಿ ಯಾರೊಬ್ಬರೂ ನನ್ನ ಜಾತಿ- ಅಂತಸ್ತು ಕೇಳಲಿಲ್ಲ. ಬದಲಿಗೆ ಕಾಂಗ್ರೆಸ್ ಅಭ್ಯರ್ಥಿ ಎಂದೇ ಗುರುತಿಸಿದ್ದಾರೆ. ಇದು ಸಂತೋಷದ ವಿಷಯ ಎಂದು ಅವರು ಹೇಳಿದರು. ಪಕ್ಷದ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕರಿಯಣ್ಣ, ಜಿ.ಪಂ. ಸದಸ್ಯ ಷಡಾಕ್ಷರಿ, ಮುಖಂಡರಾದ ರಮೇಶ್ ಹೆಗ್‌ಡೆ, ರವಿಕುಮಾರ್, ಉಮಾಪತಿ, ಎಸ್.ಪಿ. ದಿನೇಶ್ ಸೇರಿದಂತೆ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

