ಚಿಕ್ಕಮಗಳೂರು

ತೂಗು'ಯ್ಯಾಲೆಯಲ್ಲಿ ತೂಗು ಸೇತುವೆ

Published On :

ಕ.ಪ್ರ.ವಾರ್ತೆ, ಶೃಂಗೇರಿ, ಏ.29 ಕೆರೆ ಪಂಚಾಯಿತಿ ವ್ಯಾಪ್ತಿಯ ಸುಂಕದಮಕ್ಕಿ ತೂಗು ಸೇತುವೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಅಪಾಯದ ಕರೆಗಂಟೆ ಬಾರಿಸುತ್ತಿದೆ. ಕಳೆದ 5 ವರ್ಷದ ಹಿಂದೆ ತುಂಗಾ ನದಿಗೆ ಅಡ್ಜಲಾಗಿ ಸುಂಕದಮಕ್ಕಿ ಸಂಪರ್ಕ ಕಲ್ಪಿಸಲು ಈ ತೂಗು ಸೇತುವೆ ನಿರ್ಮಿಸಲಾಗಿತ್ತು.
ಇದು ಯಡದಳ್ಳಿ, ಹರೆಬಿಳಲು, ಹೆಕ್ತೂರು, ಅವುಂಟು, ದ್ಯಾವುಂಟು, ಯಡದಳ್ಳಿ ಕಾಲನಿ, ಹುಲುಗಾರು ಬೈಲು, ಕಾರ್ಕಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕೆಲ ವರ್ಷಗಳಿಂದ ಈ ಜಾಗದಲ್ಲಿ ಕಾಲು ಸಂಕವೊಂದಿತ್ತು. ಜನರು ಅದರ ಮೇಲೆಯೇ ಓಡಾಡುತ್ತಿದ್ದರು. ನಂತರ ಇಲ್ಲಿ ತೂಗು ಸೇತುವೆಯೊಂದನ್ನು ನಿರ್ಮಿಸಲಾಯಿತು. ಆದರೆ ಅದು 5 ವರ್ಷಗಳಲ್ಲಿಯೇ ನಿರ್ನಾಮಗೊಂಡಿತು. ಅದರ ಪಕ್ಕದಲ್ಲಿಯೇ ನಿರ್ಮಿಸಿರುವ ಈ ಸೇತುವೆಯೂ ನಿರ್ನಾಮದಂಚಿಗೆ ಸಾಗಿದರೂ, ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿಲ್ಲ.
ಶಿಥಿಲಾವಸ್ಥೆ: ಕಬ್ಬಿಣದ ಸರಳುಗಳು ಬಣ್ಣ ಕಳಚಿ ತುಕ್ಕು ಹಿಡಿದಿದೆ. ತಡೆಬೇಲಿ ತುಂಡಾಗಿ ಹಂತಹಂತವಾಗಿ ನದಿಗೆ ಬೀಳುತ್ತಿದೆ. ಶಿಥಿಲಾವಸ್ಥೆಗೆ ತಲುಪಿ ಎರಡು ವರ್ಷಗಳು ಕಳೆಯುತ್ತಾ ಬಂದರೂ ಈ ಸೇತುವೆ ಮೇಲೆ ಸಂಚರಿಸುವವರು ಜೀವ ಭಯದಲ್ಲಿ ಓಡಾಡಬೇಕಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು ಇದರ ಮೇಲೆಯೇ ಓಡಾಡುತ್ತಾರೆ.  ಕಳೆದ 2 ವರ್ಷಗಳ ಹಿಂದೆ ಪ್ರವಾಹ ಬಂದಾಗ ಬೃಹತ್ ಮರವೊಂದು ಇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸೇತುವೆಯ ಸರಳುಗಳೇ ಬೆಂಡಾಗಿದೆ. ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರಿಗೆ ಓಡಾಡಲು ಇರುವುದು ಇದೊಂದೇ ಹತ್ತಿರದ ದಾರಿ. ಇದನ್ನು ಹೊರತುಪಡಿಸಿದರೆ ದಿಂದೊಡಿ ಯಡದಳ್ಳಿ, ತೋರಣಗದ್ದೆ ಹುಲುಗಾರು ಮಾರ್ಗವಾಗಿ ಸುಮಾರು 15 ಕಿಲೋಮೀಟರ್ ಹಾದು ಬರಬೇಕು.
ಹಿಂದೇಟು: ಅದೂ ರಸ್ತೆ ಸರಿಯಿಲ್ಲ. ರಸ್ತೆಯಲ್ಲಿ ವಾಹನಗಳು ಹೋಗಲು ಹಿಂದೇಟು ಹಾಕುತ್ತವೆ. ಮಳೆಗಾಲದಲ್ಲಿ ತುಂಗಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಪ್ರವಾಹ ಸೇತುವೆಯ ಸಮತಟ್ಟದಲ್ಲಿಯೇ ಹರಿಯುತ್ತದೆ. ಸೇತುವೆ ಮೇಲೆ ನಡೆದಾಡುವಾಗ ನಿಯಂತ್ರಣ ತಪ್ಪಿದರೆ ಅನಾಹುತ ಉಂಟಾಗುವುದರಲ್ಲಿ ಸಂಶಯವಿಲ್ಲ.
ನಿರ್ಲಕ್ಷ್ಯ: ಕಳೆದ 2 ವರ್ಷಗಳಿಂದ ಇದರ ಬಗ್ಗೆ ಸಾಕಷ್ಟು ಬಾರಿ ಗಮನಕ್ಕೆ ತಂದರೂ ಅಧಿಕಾರಿಗಳು, ಜನಪ್ರತಿನಿಧಿಗಳು  ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದಾರೆ. ಈಗಾಗಲೇ ಗ್ರಾಮಸಭೆ, ಜನಸ್ಪಂದನ ಸಭೆಗಳಲ್ಲಿ ಇದರ ಬಗ್ಗೆ ಸಾಕಷ್ಟು ಅರ್ಜಿ ನೀಡಿ, ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರಾದ ಶೇಷಾದ್ರಿ, ವೆಂಕಟರಾಮ, ಶ್ರೀನಿವಾಸ್, ವೆಂಕಟೇಶ್, ಶೃಂಗೇಶ್ವರ ಮೊದಲಾದವರು. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸೇತುವೆ ದುರಸ್ತಿಪಡಿಸಿ, ತಡೆಬೇಲಿ ನಿರ್ಮಿಸಿ ಆಗುವ ಅನಾಹುತ ತಪ್ಪಿಸಲು ಮುಂದಾಗಲಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.