ಚಿಕ್ಕಮಗಳೂರು

2 ಎಕರೆ ಒತ್ತುವರಿದಾರರಿಗೂ ನೋಟಿಸ್ ಶಾಸಕ ಜೀವರಾಜ್ ಅಸಮಾಧಾನ

Published On :

ನರಸಿಂಹರಾಜಪುರ: 10 ಎಕರೆವರೆಗಿನ ಒತ್ತುವರಿದಾರರನ್ನು ಒಕ್ಕೆಲೆಬ್ಬಿಸುವುದಿಲ್ಲ ಎಂದು ವಿಧಾನಸಭೆಯಲ್ಲೇ ಅರಣ್ಯ ಮಂತ್ರಿಗಳು ಸ್ಪಷ್ಟನೆ ನೀಡಿದ್ದರೂ ಮಲೆನಾಡು ಭಾಗದಲ್ಲಿ 2 ಎಕರೆ ಒತ್ತವರಿ ಮಾಡಿದವರಿಗೂ ನೋಟಿಸ್ ನೀಡುತ್ತಿದ್ದಾರೆ ಎಂದು ಶಾಸಕ ಡಿ.ಎನ್.ಜೀವರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆಯಲ್ಲಿ ನಾನೇ ಒತ್ತುವರಿ ಸಮಸ್ಯೆಯನ್ನು ಎಳೆ,ಎಳೆಯಾಗಿ ಬಿಡಿಸಿ ಹೇಳಿದ್ದೇನೆ. ಮಲೆನಾಡಿನ ಭಾಗದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರು 25 ರಿಂದ 50 ವರ್ಷದಿಂದ ಸರ್ಕಾರಿ ಜಾಗದಲ್ಲಿ ಒತ್ತವರಿ ಮಾಡಿ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ.
ಅರಣ್ಯ ಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿ ಯಾವುದೇ ಕಾರಣಕ್ಕೂ 10 ಎಕರೆವರೆಗಿನ ಒತ್ತುವರಿ ತೆರವು ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು.
ಆದರೆ, ಮಲೆನಾಡಿನಲ್ಲಿ ಕಾರ್ಯದರ್ಶಿ ಆದೇಶದಂತೆ ಎಂದು ನೋಟಿಸ್ ನೀಡಲಾಗುತ್ತಿದೆ. ಅರಣ್ಯ ಮಂತ್ರಿ ದೊಡ್ಡವರೊ, ಕಾರ್ಯದರ್ಶಿ ದೊಡ್ಡವರೊ ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕಾಗಿದೆ ಎಂದರು.
ರು. 5 ಕೋಟಿ ಪರಿಹಾರ:  ಶೃಂಗೇರಿ ಕ್ಷೇತ್ರದಲ್ಲಿ ಅತಿಯಾಗಿ ಮಳೆ ಬೀಳುತ್ತಿದ್ದು ಅತಿವೃಷ್ಟಿಯಿಂದ ರಸ್ತೆ, ಸೇತುವೆಗಳು ಹಾಳಾಗಿ ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದ್ದು ಪ್ರವಾಹಕ್ಕೆ ಪರಿಹಾರವಾಗಿ 5 ಕೋಟಿ ರುಪಾಯಿ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಮಲೆನಾಡಿನ ಭಾಗದಲ್ಲಿ ಮಳೆಯಿಂದ ಬತ್ತದ ಗದ್ದೆ, ಅಡಕೆ ತೋಟ ಬೆಳೆ ಹಾಳಾಗುತ್ತಿದೆ. ಕಳೆದ ವರ್ಷವೂ ಅತಿವೃಷ್ಟಿಗೆ ಪರಿಹಾರ ನೀಡಿರಲಿಲ್ಲ. ಈ ವರ್ಷವಾದರೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಶೃಂಗೇರಿಗೆ ರೈಲು -ಅಪಸ್ವರ ಬೇಡ: ಶಿವಮೊಗ್ಗ ಶೃಂಗೇರಿ, ಮಂಗಳೂರು ರೈಲು ಯೋಜನೆಗೆ ರೇಲ್ವೆ ಸಚಿವರು ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರುವುದಕ್ಕೆ ಅಪಸ್ವರ ಬೇಡ ಎಂದು ಶಾಸಕ ಜೀವರಾಜ್ ಹೇಳಿದರು.
ಇದೇ ಮೊದಲ ಬಾರಿಗೆ ಶೃಂಗೇರಿ ಕ್ಷೇತ್ರಕ್ಕೆ ರೇಲ್ವೆ ಯೋಜನೆಗೆ ಹಣ ಮೀಸಲಿಟ್ಟಿರುವುದನ್ನು ನಾನು ಸ್ವಾಗತಿಸುತ್ತೇನೆ. ಇದಕ್ಕಾಗಿ ರೇಲ್ವೆ ಮಂತ್ರಿ ಸದಾನಂದಗೌಡರನ್ನು ಅಭಿನಂದಿಸುತ್ತೇನೆ.
ಈ ರೇಲ್ವೆ ಮಾರ್ಗ ಶಿವಮೊಗ್ಗ-ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ಮಾರ್ಗದಲ್ಲೇ ಮಂಗಳೂರಿಗೆ ಹೋಗಲು ಯೋಜನೆ ತಯಾರಾಗಿದೆ.
ಮಾರ್ಗ ಮಧ್ಯೆ ಅರಣ್ಯ ಬರುತ್ತಿರುವುದರಿಂದ ಅರಣ್ಯ ಇಲಾಖೆ ಒಪ್ಪಿಗೆ ನೀಡುವುದು ಅನುಮಾನ ಎಂಬ ಬಗ್ಗೆ ಕೆಲವರು ಚರ್ಚೆ ಮಾಡುತ್ತಿದ್ದಾರೆ ಎಂದು ನುಡಿದರು.
ಬಿಜೆಪಿ ಮುಖಂಡ ಮುತ್ತಿನಕೊಪ್ಪ ಗೋಪಿ, ನೀಲೇಶ್, ಪಿ.ಜೆ.ಆಂಟೋನಿ, ಕೆಸುವೆ ಮಂಜುನಾಥ್, ಸಂಪತ್‌ಕುಮಾರ್, ವೈ.ಎಸ್.ಗಣೇಶ್,ಎನ್.ಜಿ,ನಾಗೇಶ್,ಜಯರಾಂ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.