ಜನಸಂಪರ್ಕ ಸಭೆ; ಖಾಲಿ ಕುರ್ಚಿ ದರ್ಶನ
ಕ.ಪ್ರ.ವಾರ್ತೆ, ಬೀರೂರು, ಫೆ.6
ಗ್ರಾಹಕರ ಕುಂದುಕೊರತೆ ಹಾಗೂ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ಇಲ್ಲಿನ ಮೆಸ್ಕಾಂ ಕಚೇರಿ ಆವರಣದಲ್ಲಿ ಕರೆದಿದ್ದ ಜನಸಂಪರ್ಕ ಸಭೆಯಲ್ಲಿ ಈ ತರಹದ ಸಭೆಗಳ ಅವಶ್ಯಕತೆ ಇಲ್ಲ ಎಂಬಂತೆ ಕಂಡುಬರುವ ಮೂಲಕ ಖಾಲಿ ಕುರ್ಚಿಗಳ ದರ್ಶನ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.
ಸಭೆಯಲ್ಲಿ ಸಾಮಾಜಿಕ ಹೋರಾಟಗಾರರ ಸಂಘದ ಮಾಜಿ ಅಧ್ಯಕ್ಷ ಹೇಮಂತ್ಕುಮಾರ್ ಸಾಕಷ್ಟು ವಿಷಯಗಳನ್ನು ಪ್ರಸ್ತಾಪಿಸಿ, ಬೀದಿದೀಪಗಳ ನಿಗಾ ವಹಿಸದಿರುವುದು, ಅಧಿಕಾರಿಗಳ ಬೇಜವ್ದಾರಿಯುತ ಉತ್ತರ, ಸಭೆಗಳ ಮಾಹಿತಿ ನೀಡದಿರುವುದು, ಬೀದಿದೀಪ ನಿರ್ವಹಣೆಯಲ್ಲಿ ತೋರಿರುವ ನಿರ್ಲಕ್ಷತನ, ಗ್ರಾಹಕರಿಗೆ ಕನಿಷ್ಠ ಮಾಹಿತಿ ನೀಡದಿರುವ ಬಗ್ಗೆ ಪ್ರಸ್ತಾಪಿಸಿದರು. ಆಗ, ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಎಂ. ರುದ್ರಸ್ವಾಮಿ ಇಲಾಖೆ ಗ್ರಾಹಕರಿಗೆ ಸಮರ್ಪಕ ಸೇವೆ ಹಾಗೂ ಮಾಹಿತಿ ನೀಡುವಲ್ಲಿ ಗಮನಹರಿಸಲು ಕ್ರಮ ಕೈಗೊಳ್ಳುತ್ತದೆ ಎಂದ ಭರವಸೆ ನೀಡಿದರು.
ಮುಂದಿನ ಸಭೆ ಕರೆಯುವ ಮೊದಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮಾಡಿ ಸಮಸ್ಯೆಗೆ ನೈಜ ಪರಿಹಾರ ದೊರಕುವಂತಾಗಬೇಕು. ಸುಮ್ಮನೆ ಕಡತಗಳಲ್ಲಿ ಸಭೆ ನಡೆಸಿ ಕಳಿಸಿದರೆ ಪ್ರಯೋಜನವೇನು ಎಂದು ಗ್ರಾಹಕರು ಪ್ರಶ್ನಿಸಿದರು.
ಗಾಳೀಹಳ್ಳಿಯಿಂದ ಆಗಮಿಸಿದ್ದ ತಿಮ್ಮೇಗೌಡ ಹಾಗೂ ಕೆಲ ಗ್ರಾಮಸ್ಥರು ಈ ಸಭೆ ಬಗ್ಗೆ ಮಾಹಿತಿಯಿಲ್ಲ. 3 ವರ್ಷದಿಂದ ಸಮರ್ಪಕ ಟ್ರಾನ್ಸ್ಫಾರ್ಮರ್ ಇಲ್ಲದೇ ಗ್ರಾಮಸ್ಥರ ಗೋಳು ಹೇಳತೀರದಾಗಿದೆ. ಕೆಲವರ ತಪ್ಪಿಗೆ ಗ್ರಾಮಸ್ಥರಿಗೆ ಶಿಕ್ಷೆ ನೀಡಬೇಕೇ? ದಯವಿಟ್ಟು ಅಗತ್ಯ ಟ್ರಾನ್ಸ್ಫಾರ್ಮರ್ ದೊರಕಿಸಬೇಕು. ಬೇಸಿಗೆ ಸಮೀಪಿಸುತ್ತಿದ್ದು 63 ಕೆವಿ ಟಿ.ಸಿ. ಸೌಲಭ್ಯ ಕಲ್ಪಿಸಿದರೆ ಕುಡಿಯುವ ನೀರು ಹಾಗೂ ಸಮರ್ಪಕ ವಿದ್ಯುತ್ ನೀಡಿದರೆ ಪರೀಕ್ಷಾ ಸಮಯದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನಾನುಕೂಲ ತಪ್ಪುತ್ತದೆ ಎಂದು ಅಳಲು ತೋಡಿಕೊಂಡರು.
ಸಹಾಯಕ ಕಾರ್ಯಪಾಲಕ ಅಭಿಯಂತರ ರುದ್ರಸ್ವಾಮಿ ಸ್ಥಳದಲ್ಲಿದ್ದು, ಇಲಾಖೆ ಅಧಿಕಾರಿಗಳಿಗೆ ಕೆಲ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ವಿಚಕ್ಷಣ ದಳದಿಂದ ಅನಧಿಕೃತವಾಗಿ ವಿದ್ಯುತ್ ಬಳಸುತ್ತಿರುವುದನ್ನು ಪತ್ತೆಹಚ್ಚಿ ದಂಡ ಸಹಿತ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಹಾಯಕ ಎಂಜಿನಿಯರ್ ಕರಿಬಸಪ್ಪ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಗ್ರಾಹಕರ ಕುಂದು ಕೊರತೆಗಳಿಗೆ ಇಲಾಖೆ ಸ್ಪಂದಿಸದಿದ್ದರೆ ದೂರವಾಣಿ ಸಂಖ್ಯೆ 9480833040 ಗೆ ಕರೆಮಾಡಿ ಎಂದರು.
ಸಭೆಯಲ್ಲಿ ಅಧಿಕಾರಿಗಳಾದ ಮಾರುತಿರಾವ್, ಹಿರೇನಲ್ಲೂರು ಜೆ.ಇ. ಗುರುಮೂರ್ತಿ, ಯಗಟಿಯ ಜೆ.ಇ.ಪ್ರಶಾಂತ್, ಸೀನಿಯರ್ ಎ.ಇ.ಗಂಗಾಧರ್ ಪಾಲ್ಗೊಂಡ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

