ಚಿಕ್ಕಮಗಳೂರು

ಇನಾಂ ಭೂಮಿ ತೆರವು: ಇಂದು ಪ್ರತಿಭಟನೆ

Published On :

ಚಿಕ್ಕಮಗಳೂರು: ಕಳಸದ ಇನಾಂ ಮೀಸಲು ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿರುವ ಕಾರ್ಯಾಚರಣೆಗೆ ಈಗಾಗಲೇ ಚಾಲನೆ ನೀಡಿರುವ ಅರಣ್ಯ ಇಲಾಖೆ ಸೋಮವಾರ ಎರಡನೇ ಹಂತದಲ್ಲಿ ತೆರವು ಕಾರ್ಯ ಮುಂದುವರಿಸಲು ಸಿದ್ಥತೆ ಮಾಡಿಕೊಂಡಿದೆ.
ಇದರಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಒತ್ತುವರಿ ತೆರವು ಖಂಡಿಸಿ ಜೆಡಿಎಸ್ ಕಳಸದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ, ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಪ್ರತಿಭಟನೆ ನೇತೃತ್ವ ವಹಿಸಲಿದ್ದಾರೆ.
ತೆರವಿಗೆ ಮುಂದಾಗಿರುವ ಇಲಾಖೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ 30 ಎಕರೆ ಮೇಲ್ಪಟ್ಟು 88 ಮಂದಿ ಮೀಸಲು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ಖುಲ್ಲಾಗೊಳಿಸುವ ಪ್ರಕ್ರಿಯೆ ಅರಣ್ಯ ಇಲಾಖೆ ಮುಂದುವರೆಸಿದೆ. ಇದರಲ್ಲಿ ಇನಾಂ ಮೀಸಲು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದ್ದ ಎರಡು ಪ್ರಕರಣಗಳಲ್ಲಿ ತೋಟಗಳನ್ನು ಖುಲ್ಲಾಗೊಳಿಸಲಾಗಿದ್ದು, ಮುಂದಿನ ಹಂತದಲ್ಲಿ 10 ಎಕರೆ ಮೇಲ್ಪಟ್ಟ ಒತ್ತುವರಿಯನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಇದರನ್ವಯ ಸೋಮವಾರ ಕಳಸದ ಇನಾಂ ಭೂಮಿಯಲ್ಲಿ ಮೀಸಲು ಅರಣ್ಯಕ್ಕೆ ಸೇರಿದ ಪ್ರದೇಶವನ್ನು ಅರಣ್ಯ ಇಲಾಖೆ ಖುಲ್ಲಾಗೊಳಿಸಲು ಭಾನುವಾರವೇ ಸಿದ್ಧತೆ ಮಾಡಿಕೊಂಡಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಇನಾಂ ಭೂಮಿ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ತೆರವು ಖಚಿತ: ಸೋಮವಾರದಂದು ಒತ್ತುವರಿ ತೆರವು ಕಾರ್ಯಾಚರಣೆಗೆ ಸ್ಥಳೀಯರು ಅಡ್ಡಪಡಿಸಿದ್ದೇ ಆದರೆ,  ಮುಂದಿನ ದಿನಗಳಲ್ಲಿ ಯಾವುದೇ ಕ್ಷಣದಲ್ಲಾದರೂ ತೆರವುಗೊಳಿಸುವುದು ಅರಣ್ಯ ಇಲಾಖೆಗೆ ಅನಿವಾರ್ಯವಾಗಿದೆ.
ಕಳಸದ ಕಳಸೇಶ್ವರ ದೇವಾಲಯಕ್ಕೆ ಸೇರಿದ 14,340 ಎಕರೆ ಭೂಮಿಯಲ್ಲಿ 6,777 ಎಕರೆ ಮೀಸಲು ಅರಣ್ಯ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ 340 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಇನ್ನುಳಿದಂತೆ 393 ಎಕರೆ ಸರ್ಕಾರ ಮಂಜೂರು ಮಾಡಿದೆ. ಇನಾಂ ಮೀಸಲು ಅರಣ್ಯದ ಗಡಿ ಗುರುತು ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು, ಪ್ರಥಮದಲ್ಲಿ 10 ಎಕರೆ ಮೇಲ್ಪಟ್ಟು ಇನಾಂ ಮೀಸಲು ಅರಣ್ಯವನ್ನು ಒತ್ತುವರಿ ಮಾಡಿರುವುದನ್ನು ಖುಲ್ಲಾಗೊಳಿಸಲಾಗುವುದು.
ಅರ್ಜಿ: ಇನಾಂ ಭೂಮಿ ಖುಲ್ಲಾಗೊಳಿಸುವ ಸಂಬಂಧ ನೀಡಿರುವ ತೀರ್ಪನ್ನು ಪುನರ್ ಪರಿಶೀಲನೆ ಮಾಡುವಂತೆ ಕೆಲವರು ಹೈಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಫೆ. 12ರಂದು ಈ ಅರ್ಜಿ ವಿಚಾರಣೆ ಬರಲಿದೆ. ಇನ್ನುಳಿದವರು ಮಾಡಿಕೊಂಡಿರುವ ಅರಣ್ಯ ಒತ್ತುವರಿ ತೆರವಿಗೆ ತಡೆಯಾಜ್ಞೆ ಇರುವುದಿಲ್ಲ. ಅದುದರಿಂದ ನ್ಯಾಯಾಲಯಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದವರ ಭೂಮಿಯನ್ನು ಬಿಟ್ಟು ಇನ್ನುಳಿದ ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಸ್ಥಗಿತಕ್ಕೆ ಆಗ್ರಹ
ಕಳಸಾ ಇನಾಂ ಭೂಮಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಎಂದು ಕಿಸಾನ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸಚಿನ್ ಮೀಗಾ ಒತ್ತಾಯಿಸಿದ್ದಾರೆ. ಸಣ್ಣ ಒತ್ತುವರಿದಾರರನ್ನು ತೆರವುಗೊಳಿಸುವುದರಿಂದ ಸಾಮಾಜಿಕ ಸಮಸ್ಯೆ ಉದ್ಭವಿಸುತ್ತದೆ. ಆ ಭಾಗದಲ್ಲಿ ಜೀವನಾಧಾರಿತವಾಗಿ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವ ವಿಚಾರದಿಂದ ರೈತರು ಹಾಗೂ ಕೂಲಿ ಕಾರ್ಮಿಕರು ಭಯಭಿತರಾಗಿದ್ದಾರೆ. ತೆರವು ಕಾರ್ಯ ಮುಂದುವರೆದರೆ ಕಾನೂನು ಸುವ್ಯವಸ್ಥೆಗೆ ಅಡ್ಡಿ ಆಗುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.