ಚಿಕ್ಕಮಗಳೂರು

ಇನಾಂ ಭೂಮಿಗಾಗಿ ಪ್ರತಿಭಟನೆ, ಹೊಡೆದಾಟ

Published On :

ಕ.ಪ್ರ.ವಾರ್ತೆ, ಮೂಡಿಗೆರೆ, ಫೆ.10
ಇನಾಂ ಭೂಮಿ ಒತ್ತುವರಿ ತೆರವುಗೊಳಿಸಬಾರದು ಎಂದು ಬಲಿಗೆ ಗ್ರಾಮದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೋಮವಾರದಂದು ಇನಾಂ ಭೂಮಿಯನ್ನು ಅರಣ್ಯ ಇಲಾಖೆಯವರು ತೆರವುಗೊಳಿಸುತ್ತಾರೆಂಬ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೆಳಗ್ಗೆಯೇ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಬಲಿಗೆ ಗ್ರಾಮದಲ್ಲಿ ರಸ್ತೆ ತಡೆ, ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇನಾಂ ಭೂಮಿ ಒತ್ತುವರಿಗೆ ಜೆಡಿಎಸ್ ಕಾರಣ ಎಂದು ಆರೋಪಿಸಿ ಧರಣಿಯ ಮಧ್ಯದಲ್ಲಿ ಪ್ರವೇಶ ಮಾಡಿದರು.
ರಾಜಕೀಯ ಲಾಭಕ್ಕೆ ನಾಟಕ: ಪ್ರತಿಭಟನೆಯಲ್ಲಿ ಜೆಡಿಎಸ್‌ಗೆ ಭಾಗವಹಿಸಲು ಯಾವುದೇ ಅರ್ಹತೆ ಇಲ್ಲ. ಚುನಾವಣೆ ಹತ್ತಿರವಾಗುತ್ತಿದ್ದು, ರಾಜಕೀಯ ಲಾಭ ಪಡೆಯಲು ನಾಟಕ ವಾಡುತ್ತಿದ್ದಾರೆ. ಇನಾಂ ಭೂಮಿ ತೆರವುಗೊಳ್ಳುವುದರ ಮೂಲಕ ಜನರನ್ನು ಬೀದಿಗೆ ತಳ್ಳಲು ಅಂದು ಆಡಳಿತರೂಢ ಜೆಡಿಎಸ್ ಕಾರಣವಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.
ಇಂದು ಇನಾಂ ಭೂಮಿಯನ್ನು ಉಳಿಸುವ ಯತ್ನ ಎಂದು ಗ್ರಾಮಸ್ಥರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಪಕ್ಷದ ವರ್ಚಸ್ಸು ಹೆಚ್ಚಿಸಲು ಹುನ್ನಾರ ನಡೆಸುತ್ತಿದೆ. ಜೆಡಿಎಸ್ ಮಾಡಿರುವ ತಪ್ಪನ್ನು ಆಡಳಿತ ರೂಢ ಕಾಂಗ್ರೇಸ್ ಸರ್ಕಾರದ ಮೇಲೆ ಹಾಕುವುದರೊಂದಿಗೆ ಘೋಷಣೆ ಕೂಗುವುದು ಸರಿಯಲ್ಲ ಎಂದು ಜೆಡಿಎಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡಾಗ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಸುವ ಹಂತಕ್ಕೆ ತಲುಪಿತು.
ಪ್ರತಿಯೊಬ್ಬರ ಹೋರಾಟ: ಅಲ್ಲಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕ ಸಿ.ಟಿ. ರವಿ. ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಅವರುಗಳು ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನಗೊಳಿಸಿ ಇದು ಪ್ರತಿಯೊಬ್ಬ ಜೀವನದ ಹಕ್ಕಿನ ಹೋರಾಟವಾಗಿದೆ. ಇದರಲ್ಲಿ ರಾಜಕೀಯ ತರುವುದು ಸರಿಯಲ್ಲ ಎಂದರು.
ಯಾವುದೋ ಒಂದು ಸಂದರ್ಭದಲ್ಲಿ ತಪ್ಪುಗಳಾಗಿದೆ. ಅದನ್ನು ಸರಿಪಡಿಸಲು ಮುಂದುವರಿಯಬೇಕೆ ಹೊರತು ಕೆದಕಲು ಹೋಗಬಾರದು ಎಂದು ಕಾಂಗ್ರೆಸ್ ಮುಖಂಡರನ್ನು ಸಮಾಧಾನ ಮಾಡಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಮಾಹಿತಿ ಕೊರತೆ: ಇದೇ ಸಂದರ್ಭದಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಇನಾಂ ಭೂಮಿ ಸಮಸ್ಯೆ ಇಂದು ಬಹುದೊಡ್ಡ ಸಮಸ್ಯೆಯಾಗಿದೆ. ಅಧಿಕಾರಿಗಳ ಮಾಹಿತಿ ಕೊರತೆಯಿಂದ ಇಂದು ಬಡ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಇನಾಂ ಭೂಮಿ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ನ್ಯಾಯಾಲಯದ ಆದೇಶವಿದೆ ಅದನ್ನು ಪಾಲಿಸುವುದು ನಮ್ಮ ಆದ್ಯ ಕರ್ತವ್ಯ. ಆದ್ದರಿಂದ ಇನಾಂ ಭೂಮಿ ತೆರವುಗೊಳಿಸುವುದು ಅನಿವಾರ್ಯ ಎಂದು ಅರಣ್ಯಾಧಿಕಾರಿಗಳು ಸ್ಥಳದಲ್ಲಿದ್ದ ಕುಮಾರಸ್ವಾಮಿ ಅವರಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ ಅವರು, ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇನೆ. ಇನಾಂ ಭೂಮಿ ತೆರವಿಗೆ ಕೈ ಹಾಕಿದ್ದಲ್ಲಿ ಹಲವಾರು ಬಡಾಪಾಯಿಗಳು ತಮ್ಮ ಪ್ರಾಣವನ್ನೇ ನೀಡಲು ಸಿದ್ದರಾಗಿದ್ದಾರೆ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ದೂರವಾಣಿ ಮಾತುಕತೆ: ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯವರೊಂದಿಗೆ ದೂರವಾಣಿ ಮುಖಾಂತರ ಮಾತುಕತೆ ನಡೆಸಿ ಫೆ. 12 ರಂದು ಇನಾಂ ಭೂಮಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತೀರ್ಪು ಹೊರಬೀಳಲಿದ್ದು,  ಗ್ರಾಮಸ್ಥರನ್ನು ನಿರಾಶ್ರಿತರನ್ನಾಗಿಸದಂತೆ ಕಾಲಾವಕಾಶ ಕೋರಿದರು.
ಇದಕ್ಕೆ ಸ್ಪಂದಿಸಿದ ಮುಖ್ಯ ಮಂತ್ರಿ, ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆಸಿ, ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ತಿಳಿಸಿದ್ದರ ಮೇರೆಗೆ ಅಧಿಕಾರಿಗಳು ತೆರವು ಕಾರ್ಯಾಚರಣೆಯಿಂದ ಹಿಂದಕ್ಕೆ ಸರಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.