ದಾಸಶ್ರೇಷ್ಠರ ಆರಾಧನಾ ಮಹೋತ್ಸವ
ಚಿಕ್ಕಮಗಳೂರು: ಕರ್ನಾಟಕ ಸಂಗೀತದ ಪಿತಾಮಹ ಸಂತ ಶ್ರೀತ್ಯಾಗರಾಜರು, ದಾಸಶ್ರೇಷ್ಠ ಶ್ರೀಪುರಂದರ ದಾಸರು ಮತ್ತು ಕನಕದಾಸರ ಆರಾಧನಾ ಮಹೋತ್ಸವ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಹಿರೇಮಗಳೂರಿನ ಇತಿಹಾಸ ಪ್ರಸಿದ್ಧ ಶ್ರೀಕೋದಂಡ ರಾಮಚಂದ್ರಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಸ್ಥಳೀಯ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಸಂಗೀತಗಾರರು ಪುರಂದರದಾಸರ ಪಿಳ್ಳಾರಿ ಗೀತೆಗಳು ಮತ್ತು ಉತ್ಸವ ಸಂಪ್ರದಾಯ ಕೀರ್ತನೆಗಳನ್ನು ಹಾಡುತ್ತಾ ಆರಾಧನೆ ಅಂಗವಾಗಿ ಬೆಳಗ್ಗೆ ಶ್ರೀತ್ಯಾಗರಾಜರು ಪುರಂದರದಾಸರು ಮತ್ತು ಕನಕದಾಸರ ವೇಷಧಾರಿಗಳೊಂದಿಗೆ ಗ್ರಾಮದಲ್ಲಿ ಊಂಛವೃತ್ತಿ ನಡೆಸಿದರು.
ದಾಸ ಶ್ರೇಷ್ಠರ ಭಾವಚಿತ್ರದೊಂದಿಗೆ ಕೀರ್ತನೆಗಳನ್ನು ಹಾಡುತ್ತಾ ದೇವಾಲಯದಿಂದ ಹೊರಟ ವೇಷಧಾರಿಗಳನ್ನು ಮನೆ ಮುಂದೆ ರಂಗವಲ್ಲಿ ಹಾಕಿ ಸ್ವಾಗತಿಸಿದ ಗ್ರಾಮಸ್ಥರು ಅವರ ಪಾದ ಪೂಜೆ ನೆರವೇರಿಸಿ ಪಡಿ ನೀಡಿ ಆರತಿ ಎತ್ತಿ ಬೀಳ್ಕೊಟ್ಟರು.
ಊಂಛವೃತ್ತಿ ನಂತರ ಶ್ರೀಕೋದಂಡ ರಾಮಚಂದ್ರಸ್ವಾಮಿ ಸನ್ನಿಧಿಯಲ್ಲಿ ಸಂಗೀತಗಾರರು ಶ್ರೀತ್ಯಾಗರಾಜರ ಪಂಚ ರತ್ನ ಕೃತಿಗಳನ್ನು ಸಾಮೂಹಿಕವಾಗಿ ಹಾಡುವುದರ ಜೊತೆಗೆ ಸಂಗೀತ ಸೇವೆ ಸಲ್ಲಿಸಿದರು. ಸಂಗೀತ ಸೇವೆಯ ನಡುವೆ ಶ್ರೀಕೋದಂಡ ರಾಮಚಂದ್ರಸ್ವಾಮಿಗೆ ಅಭಿಷೇಕ ವಿಶೇಷ ಪೂಜೆ ನಡೆಯಿತು. ಮಹಾ ಮಂಗಳಾರತಿ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.
ಇದೇ ವೇಳೆ ಸಂಗೀತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸಂಘದ ವತಿಯಿಂದ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ, ಖಜಾಂಚಿ ಆರ್. ಸಿಂಗ್, ನಿರ್ದೇಶಕರಾದ ಗಿರಿಧರ್ ಯತೀಶ್, ಆನಂದ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಆರಾಧನೆ ಅಂಗವಾಗಿ ಶನಿವಾರ ಸಂಜೆ ನಗರದ ಶ್ರೀಶಂಕರಮಠದ ಸಭಾಂಗಣದಲ್ಲಿ ನಾದ ಚೈತನ್ಯ ಸಂಗಿತ ಶಾಲೆಯ ವಿದ್ಯಾರ್ಥಿಗಳು ಮತ್ತು ಹಾಸನದ ವಿದ್ವಾನ್ ಬಿಎನ್ಎಸ್ ಮುರಳಿ ಅವರಿಂದ ಶ್ರೀವಾದಿರಾಜ ದರ್ಶನ ವಿಶೇಷ ಕಾರ್ಯಕ್ರಮ ನಡೆಯಿತು.
ಹಿರೇಮಗಳೂರಿನಲ್ಲಿ ತ್ಯಾಗರಾಜರು ಪುರಂದರದಾಸರು ಮತ್ತು ಕನಕದಾಸರ ವೇಷಧಾರಿಗಳೊಂದಿಗೆ ಊಂಛ ವೃತ್ತಿ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

