ಚಿಕ್ಕಮಗಳೂರು

ಸುವರ್ಣಗ್ರಾಮ' ಹಣ ಬಿಡುಗಡೆಯಾಗಿಲ್ಲ

Published On :

ನರಸಿಂಹರಾಜಪುರ: ಸರ್ಕಾರದ ಹೊಸ ಬಜೆಟ್ ಮಂಡಿಸುವ ಸಮಯ ಹತ್ತಿರ ಬರುತ್ತಿದ್ದರೂ ಕಳೆದ ವರ್ಷದ ಬಜೆಟ್‌ನಲ್ಲಿನ ಲೋಕೋಪಯೋಗಿ ಇಲಾಖೆ, ಸುವರ್ಣ ಗ್ರಾಮದ ಹಣ ಇನ್ನೂ ಬಿಡುಗಡೆಯಾಗದೆ ಅಭಿವೃದ್ಧಿ ಕಾರ್ಯಕ್ಕೆ ಹಿನ್ನೆಡೆ ಉಂಟಾಗುತ್ತಿದೆ ಎಂದು ಶಾಸಕ ಡಿ.ಎನ್. ಜೀವರಾಜ್ ಆರೋಪಿಸಿದರು.  
ಅವರು ಬುಧವಾರ ನಾಗಾಲಾಪುರ ಗ್ರಾಮ ಪಂಚಾಯ್ತಿಯ 23 ಲಕ್ಷ  ವೆಚ್ಚದ ನೂತನ ಗ್ರಾಮ ಪಂಚಾಯ್ತಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಮಾರ್ಚ್ ತಿಂಗಳಲ್ಲಿ ಹಣ ಬಿಡುಗಡೆ ಮಾಡಿದರೂ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದರೆ ಹಣ ಖರ್ಚು ಮಾಡುವಂತಿಲ್ಲ. ಇದರಿಂದ ಕಾಮಗಾರಿ ಮಾಡಿದ ಗುತ್ತಿಗೆದಾರರು ನಷ್ಟ ಅನುಭವಿಸಲಿದ್ದಾರೆ ಎಂದರು.
ನಾಗಲಾಪುರ ಗ್ರಾಮ ಪಂಚಾಯ್ತಿಯು ನರಸಿಂಹರಾಜಪುರ ಪಟ್ಟಣದ ಹೃದಯ ಭಾಗದಲ್ಲಿದ್ದು ಉತ್ತಮ ಗುಣ ಮಟ್ಟದ ಕಚೇಯ ಕಟ್ಟಡ ಕಟ್ಟಲಾಗಿದೆ. ನಾಗಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಂಡೊಳ್ಳಿ, ಸೀಗುವಾನಿ, ಇಂದಿರಾ ನಗರ, ಸುಗ್ಗಪ್ಪನಮಠದ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ಮಾಡಲು ಅನುದಾನ ನೀಡಿದ್ದೇನೆ ಎಂದು ಅವರು ತಿಳಿಸಿದರು.
ರಸ್ತೆಗೆ 70 ಕೋಟಿ: ಶೃಂಗೇರಿ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗಾಗಿ 65 ರಿಂದ 70 ಕೋಟಿ ಅನುದಾನ ಬಿಡುಗಡೆಯಾಗಿದೆ. ಆಲ್ದೂರು- ಬಿದಿರುಗೋಡು ರಸ್ತೆಗೆ 23.50 ಕೋಟಿ ಮಂಜೂರಾಗಿದ್ದು ಇದರಿಂದ ಜಯಪುರ, ಬಾಳೆಹೊನ್ನೂರು ಪಟ್ಟಣದ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಲಿವೆ. ಸಿ.ಆರ್.ಎಫ್ ಯೋಜನೆಯಡಿ ಕುದುರೆಗುಂಡಿ- ಮುತ್ತಿನಕೊಪ್ಪ ರಸ್ತೆಗೆ 7 ಕೋಟಿ, ಅಪೆಕ್ಸ್ ಯೋಜನೆಯಡಿ 14 ಕೋಟಿ ಮಂಜೂರಾಗಿದೆ. ಈ ಹಿಂದೆ ಶೃಂಗೇರಿ ಕ್ಷೇತ್ರಕ್ಕೆ ವಿಶೇಷ ಅನುದಾನ 15 ಕೋಟಿ ಮಂಜೂರಾಗಿದ್ದರೂ ಅದನ್ನು ತಡೆ ಹಿಡಿಯಲಾಗಿತ್ತು. ಈಗ ಆ 15 ಕೋಟಿ ಬಿಡುಗಡೆಯಾಗಿದೆ.
ಕೊಪ್ಪ, ನ.ರಾ.ಪುರ ಹಾಗೂ ಶೃಂಗೇರಿ ಪಟ್ಟಣ ಅಭಿವೃದ್ಧಿಗೆ ತಲಾ 5 ಕೋಟಿ ಬಿಡುಗಡೆಯಾಗಿದ್ದು ಕಾಮಗಾರಿ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಕನಸು ನನಸಾಗಿದೆ: ಗ್ರಾಪಂ ಕಚೇರಿ ಕೊಠಡಿಯನ್ನು ನಾಗಲಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಿನಾ ಬೆನ್ನಿ ಉದ್ಘಾಟಿಸಿ ಮಾತನಾಡಿ, ಹಲವು ವರ್ಷಗಳ ಹಿಂದೆ ರಂಗೇಗೌಡರು ಎಂಬ ದಾನಿಗಳ ನೀಡಿದ ನಿವೇಶನದಲ್ಲಿ ನೂತನ ಗ್ರಾಮ ಪಂಚಾಯ್ತಿ ಕಟ್ಟಡ ಕಟ್ಟಲಾಗಿದ್ದು, ಗ್ರಾಮ ಪಂಚಾಯ್ತಿ ಸದಸ್ಯರ ಕನಸು ನನಸಾಗಿದೆ ಎಂದರು.
ಮುಖ್ಯ ಅತಿಥಿ ಜಿಪಂ ಮಾಜಿ ಅಧ್ಯಕ್ಷ ಪಿ.ಜೆ. ಆಂಟೋನಿ ಮಾತನಾಡಿ, ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಪಂಗಳ ಜವಾಬ್ದಾರಿ ಹೆಚ್ಚಾಗಿದೆ. ನಾಗಲಾಪುರ ಗ್ರಾಪಂ ನೂತನ ಕಟ್ಟಡ ಅತ್ಯಂತ ಸುಸಜ್ಜಿತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಜಿಪಂ ಉಪಾಧ್ಯಕ್ಷೆ ಸುಜಾತ, ನಾಗಲಾಪುರ ಗ್ರಾಪಂ ಉಪಾಧ್ಯಕ್ಷ ಸತೀಶ್ ಕುಮಾರ್, ಸದಸ್ಯರಾದ ವಿ.ಜೆ. ಜೇಮ್ಸ್, ಹರೀಶ್ ಶೆಟ್ಟಿ, ಸೈಯದ್ ಫಾರೂಕ್, ಮಂಜುಳಾ, ಜಯಮ್ಮ, ಕಮಲಾಕ್ಷಿ, ಮಾಜಿ ಗ್ರಾಪಂ ಸದಸ್ಯ ಇ.ಸಿ. ಜೋಯಿ, ತಾಪಂ ಸಿಒ ಎಸ್. ಜಗದೀಶ್, ಜಿ ಪಂ  ಇಂಜಿನಿಯರ್ ಅಹಮ್ಮದ್ ಹುಸೈನ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.