ಚಿಕ್ಕಮಗಳೂರು

ಕಾಮಗಾರಿ ಬಳಿಕ ಹಣ ಬಿಡುಗಡೆ ಮಾಡಿ

Published On :

ಕ.ಪ್ರ.ವಾರ್ತೆ, ತರೀಕೆರೆ, ಫೆ.15
ಮೇಲಧಿಕಾರಿಗಳಿಂದ ಯೋಜನೆ ಮಂಜೂರು ಮಾಡಿಸಿಕೊಂಡು ಬರುವ ಜವಾಬ್ದಾರಿ ನನ್ನದು. ಇಲಾಖಾವಾರು ಅವಶ್ಯಕತೆಗಳು ಯಾವುದೇ ಇರಲಿ ಕೂಡಲೇ ಅದನ್ನು ನನ್ನ ಗಮನಕ್ಕೆ ತರಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕುಡಿವ ನೀರಿನ ಹಲವಾರು ಕಾಮಗಾರಿಗಳು ಅಪೂರ್ಣವಾಗಿದೆ. ಮತ್ತೆಷ್ಟೋ ನೀರಿನ ಟ್ಯಾಂಕ್ಗಳು ನಿರ್ಮಾಣವಾಗಿ ಅನೇಕ ವರ್ಷಗಳು ಕಳೆದಿವೆ. ನೀರು ಸೌಲಭ್ಯ ಕಲ್ಪಿಸಲು ಇನ್ನೂ ಕಾಮಗಾರಿಗಳೇ ಪೂರ್ಣಗೊಂಡಿಲ್ಲ ಎಂದರು.
ಹಣ ಕೊಡಬೇಡಿ:  ಬೇಸಿಗೆ ಸಮೀಪಿಸುತ್ತಿದೆ. ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲೂ ಎಲ್ಲೂ ಸಮಸ್ಯೆ ಉಂಟಾಗಬಾರದು. ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಬಹು ಮುಖ್ಯವಾದ ಕೆಲಸಗಳನ್ನು ಮುಗಿಸಿಕೊಂಡ ನಂತರವೆ ಹಂತ ಹಂತವಾಗಿ ಗುತ್ತಿಗೆದಾರರಿಗೆ ಹಣ ಪಾವತಿಸಬೇಕು. ಒಂದೇ ಬಾರಿಗೆ ಪೂರ್ತಿ ಹಣ ಕೊಡಬೇಡಿ ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹರಿಪ್ರಸಾದ್ ಮಾತನಾಡಿ, ಕರಕುಚ್ಚಿ ಮತ್ತು ಬಾವಿಕೆರೆ ಶಾಲಾ ಅವರಣದಲ್ಲಿ ಬೆಳೆದಿರುವ ಮರಗಳಿಂದ ಶಾಲೆಗೆ ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ, ಶಾಲಾ ಆವರಣದಲ್ಲಿ ಬೆಳೆದಿರುವ 990 ಮರ-ಗಿಡಗಳನ್ನು ಕಡಿದು ಹಾಕಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಶುಚಿ ಮತ್ತು ನೈರ್ಮಲ್ಯ ಕಾಪಾಡಲು ಅಡಿಗೆ ಸಿಬ್ಬಂದಿಗೆ ತರಬೇತು ನೀಡಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಜಿ.ಪಂ. ಸದಸ್ಯ ಎಸ್.ಬಿ. ಆನಂದಪ್ಪ ಮಾತನಾಡಿ, ಶಿವನಿ ಹೈಸ್ಕೂಲಿನ ಸುತ್ತಮುತ್ತ ಹಂದಿಗಳ ಕಾಟ ಮಿತಿ ಮೀರಿದೆ. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ವೇಳೆ ಏಕಾಏಕಿ ಬಂದು ತಟ್ಟೆಗಳಿಗೆ ಬಾಯಿ ಹಾಕುತ್ತಿವೆ. ಆದರೆ, ಈ ಸಮಸ್ಯೆ ಬಗ್ಗೆ ಅಧಿಕಾರಿಗಳ್ಯಾರೂ ಗಮನಹರಿಸುತ್ತಿಲ್ಲ ಎಂದು ದೂರಿದರು. ಆಗ ಶಾಸಕ ಜಿ.ಎಚ್.ಶ್ರೀನಿವಾಸ್ ಅವರು, ಈ ಬಗ್ಗೆ ಇಲಾಖೆ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು. ಹಂದಿಗಳ ಕಾಟವನ್ನು ತಪ್ಪಿಸಬೇಕು ಎಂದು ಸೂಚಿಸಿದರು.
ರಂಗೇನಹಳ್ಳಿ, ಲಕ್ಕವಳ್ಳಿಯಲ್ಲಿ ಅಕ್ಷರದಾಸೋಹ ಕೊಠಡಿಗಳು ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಜಿ.ಪಂ. ಸದಸ್ಯ ಕೆ.ಪಿ.ಕುಮಾರ್ ತಿಳಿಸಿದರು.
ಕಳಪೆ ಕಾಮಗಾರಿ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಜಿ.ಪಂ. ಸದಸ್ಯೆ ಹೇಮಾವತಿ ಕೃಷ್ಣಪ್ಪ ಅಧಿಕಾರಿಗಳನ್ನು ಪ್ರಶ್ನಿಸಿದರು.
ಶಾಸಕ ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಎಷ್ಟು ಅಕ್ಷರ ದಾಸೋಹ ಕಟ್ಟಡಗಳು ಕಳಪೆ ಕಾಮಗಾರಿಯಿಂದ ಕೂಡಿದೆ ಎಂಬ ಬಗ್ಗೆ ಪೂರ್ಣ ವರದಿ ತಯಾರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಜ್ಜಂಪುರ ಅಮೃತಮಹಲ್ ಕಾವಲಿನಲ್ಲಿರುವ ಮೇವಿನ ಬಗ್ಗೆ ತಾವು ಜಿಲ್ಲಾದಿಕಾರಿ ಅವರೊಡನೆ ಶೀಘ್ರದಲ್ಲೇ ಚರ್ಚಿಸುವುದಾಗಿ ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದರು.
ಕಾಗದದಲ್ಲಿ ಮಾತ್ರ ಪ್ರಗತಿ:  ತಾಲೂಕಿನ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರಿನ ಸರಬರಾಜು ಕಾಮಗಾರಿಗಳ ಅಪೂರ್ಣತೆ ಬಗ್ಗೆ ಸಭೆಯಲ್ಲಿ ಸುಮಾರು 2 ಗಂಟೆಗಳ ಕಾಲ ವಿಸ್ತೃತ ಚರ್ಚೆ ನಡೆಯಿತು. ಕುಡಿಯುವ ನೀರು ಸರಬರಾಜು ಮಾಡಲು ಬೇಲೇನಹಳ್ಳಿ ಮತ್ತು ಇತರ 11 ಹಳ್ಳಿಗಳ ಕುಡಿಯುವ ನೀರು ಯೋಜನೆ ಮತ್ತಿತರ ಯೋಜನೆಗಳಿಗೆ ಸರ್ಕಾರ ಕೋಟ್ಯಂತರ ರು. ವೆಚ್ಚ ಮಾಡಿದೆ. ಆದರೆ, ಆ ಯೋಜನೆಗಳ ಪ್ರಗತಿ ಕೇವಲ ಕಾಗದದಲ್ಲಿ ಮಾತ್ರ ಇದೆ. ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಈ ಯೋಜನೆಗಳು ಪ್ರಗತಿಯಲ್ಲಿದೆ ಎಂದು ತಿಳಿಸುತ್ತಾರೆ. ಆದರೆ, ವಾಸ್ತವವಾಗಿ ಯೋಜನೆಯಲ್ಲಿ ನಿರ್ಮಾಣವಾದ ನೀರಿನ ಎಷ್ಟೋ ಟ್ಯಾಂಕುಗಳು ನೀರಿಲ್ಲದೆ ಒಣಗುತ್ತಿವೆ ಎಂದು ಜಿ.ಪಂ. ಸದಸ್ಯರು ಸಭೆಯಲ್ಲಿ ತೀವ್ರವಾಗಿ ಆಕ್ಷೇಪಿಸಿದರು.
ವಿವಿಧ ಇಲಾಖೆಗಳ ಚರ್ಚೆಯಲ್ಲಿ ಜಿ.ಪಂ. ಸದಸ್ಯರಾದ ಹೇಮಾವತಿ ಕೃಷ್ಣಪ್ಪ, ಎಸ್.ಬಿ. ಆನಂದಪ್ಪ, ಕೃಷ್ಣಮೂರ್ತಿ, ಕೆ.ಆರ್. ಆನಂದಪ್ಪ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.