15ರಂದು ಸಹಕಾರ ಸಂಘದ ಶತಮಾನೋತ್ಸವ
ಚಿಕ್ಕಮಗಳೂರು: ಹಿರೇಮಗಳೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜನವರಿ 15 ರಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ.
ಈ ಸಹಕಾರ ಸಂಘ 1913ರ ಮಾರ್ಚ್ 15 ರಂದು ಸ್ಥಾಪನೆಗೊಂಡಿದ್ದು, ನೂರು ವರುಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಸಂಘದ ಏಳಿಗೆಗೆ ಶ್ರಮಿಸಿದ ಹಿರಿಯರನ್ನು ಸ್ಮರಿಸಲು ಶತಮಾನೋತ್ಸವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಂ.ಸಿ. ಬಸವರಾಜು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.
ಸಂಘವು ಶತಮಾನೋತ್ಸವದ ಸ್ಮರಣೆಗೆ ಒಂದು ಸಾಧನೆಯ ಸವಿನೆನಪು ಎಂಬ ಸ್ಮರಣ ಸಂಚಿಕೆಯನ್ನು ಹೊರ ತರುತ್ತಿದ್ದು, ಸಂಘದ ಅಭಿವೃದ್ಧಿ ಮತ್ತು ಶೀಘ್ರ ಸೇವೆಗೆ ಅನುಕೂಲವಾಗುವಂತೆ ಹಿರೇಮಗಳೂರಿನಲ್ಲಿ ಒಂದು ಸುಸಜ್ಜಿತವಾದ ಕಚೇರಿ ಕಟ್ಟಡ, ಮಲ್ಲೇದೇವರಹಳ್ಳಿಯಲ್ಲಿ ಒಂದು ಶಾಖಾ ಕಟ್ಟಡ ಮತ್ತು ಗೋದಾಮು, ಕುರುವಂಗಿ ಗ್ರಾಮದಲ್ಲಿ ಶಾಖಾ ಕಚೇರಿ ಮತ್ತು ಗೋದಾಮು ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
11 ಕೋಟಿ ವಹಿವಾಟು: ಸಂಘ ಸ್ಥಾಪನೆಗೊಂಡ ಸಂದರ್ಭದಲ್ಲಿ ಬೆರಳೆಣಿಕೆಯಷ್ಟು ಷೇರುದಾರರನ್ನು ಹೊಂದಿತ್ತು. ಇಂದು 3200 ಕ್ಕೂ ಹೆಚ್ಚು ಮಂದಿಯನ್ನು ಹೊಂದಿದೆ. ಹಿರೇಮಗಳೂರು, ಮಲ್ಲೇದೇವರಹಳ್ಳಿ, ಕುರುವಂಗಿ, ಲಕ್ಷ್ಮೀಪುರ, ಚಿಕ್ಕಮಗಳೂರು ಸೇರಿದಂತೆ 36ಕ್ಕೂ ಹೆಚ್ಚು ಗ್ರಾಮಗಳು ಈ ಸಂಘದ ವ್ಯಾಪ್ತಿಗೆ ಒಳಪಡುತ್ತವೆ. ವಾಣಿಜ್ಯ ಬ್ಯಾಂಕುಗಳ ರೀತಿಯಲ್ಲೇ ಸಂಘ ವಾಹನ ಸಾಲ, ವ್ಯಾಪಾರ ಸಾಲ, ಕೃಷಿ ಸಾಲದೊಂದಿಗೆ ಸ್ವಸಹಾಯ ಸಂಘಗಳಿಗೆ ಸಾಲವನ್ನು ನೀಡಲಾಗುತ್ತಿದೆ. ವಾರ್ಷಿಕ 11 ಕೋಟಿ ವಹಿವಾಟು ನಡೆಯುತ್ತಿದ್ದು, ಒಂದು ಕೋಟಿ ರೂ.ಗಳ ಕೃಷಿ ಸಾಲ ನೀಡಲಾಗಿದೆ. ಸಂಘದ ಎಲ್ಲರ ಪರಿಶ್ರಮದಿಂದಾಗಿ ಸಾಲ ವಸೂಲಾತಿ ಶೇ.80 ರಷ್ಟಿದೆ ಎಂದರು.
ಅನೇಕ ದಶಕಗಳಿಂದ ನಷ್ಟದಲ್ಲಿದ್ದ ಸಂಘ ಇಂದು ಹತ್ತು ಲಕ್ಷ ರು. ಲಾಭ ಗಳಿಸಿರುವುದು ದೊಡ್ಡ ಸಾಧನೆ. ಅದಕ್ಕೆ ಆಡಳಿತ ಮಂಡಳಿಯ ಶ್ರಮ ಮತ್ತು ಷೇರುದಾರರು ಕಾರಣರಾಗಿದ್ದಾರೆ. 23 ಲಕ್ಷ ನಷ್ಟವನ್ನು ಅಳಿಸಿ ಲಾಭ ಗಳಿಸುವಂತೆ ಮಾಡಿರುವುದು ಮರೆಯಲಾಗದ ಮತ್ತು ಎಲ್ಲರೂ ಮೆಚ್ಚುವಂತ ಸಾಧನೆ ಇದಾಗಿದೆ ಎಂದು ಹೇಳಿದರು.
ಶತಮಾನೋತ್ಸವ ಭವನ: ಶತಮಾನೋತ್ಸವದ ಸವಿನೆನಪಿಗಾಗಿ 35 ಲಕ್ಷ ವೆಚ್ಚದಲ್ಲಿ ಶತಮಾನೋತ್ಸವ ಭವನವನ್ನು ನಿರ್ಮಿಸಲು ಯೋಜನೆ ತಯಾರಿಸಲಾಗಿದೆ. ಇತ್ತೀಚೆಗೆ ರಾಜ್ಯ ಸಹಕಾರ ಸಚಿವ ಮಹದೇವಪ್ರಸಾದ್ ಸಂಘಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ 10 ಲಕ್ಷ ನೆರವನ್ನು ಪ್ರಕಟಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ಮರಣಾ ಸಂಚಿಕೆಯ ಸಂಪಾದಕ ಎಚ್.ಎಸ್. ಪುಟ್ಟಸ್ವಾಮಿ, ಸಂಘದ ನಿರ್ದೇಶಕರುಗಳಾದ ರಾಜಶೇಖರ್, ಚೆನ್ನಶೆಟ್ಟಿ, ಕುಮಾರಸ್ವಾಮಿ, ಅಕ್ಕಮ್ಮ ಹಾಗೂ ಮುಖ್ಯ ಕಾರ್ಯನಿರ್ವಾಹಕ ಎಂ.ಸಿ. ಸುರೇಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

