ಅಭಿವೃದ್ಧಿ ನುಂಗಿದ ಮೀಸಲು
ಕ.ಪ್ರ.ವಾರ್ತೆ, ಹರಪನಹಳ್ಳಿ, ಜ.1
ಚುನಾವಣೆ ನಡೆದು 10 ತಿಂಗಳು ಕಳೆದರೂ ಚುನಾಯಿತ ಸಮಿತಿ ಅಸ್ತಿತ್ವಕ್ಕೆ ಬಾರದೆ, ಜನಪ್ರತಿನಿಧಿಗಳ ಆಕ್ರೋಶಕ್ಕೆ ಗುರಿಯಾಗಿರುವ ಇಲ್ಲಿಯ ಪುರಸಭೆಯ ಅತಂತ್ರ ಸ್ಥಿತಿ ಹಾಗೆ ಮುಂದುವರಿದಿದೆ.
ಕಳೆದ ವರ್ಷ ಮಾರ್ಚ್ 7ರಂದು ಪಟ್ಟಣದ 27 ವಾರ್ಡ್ಗಳಿಗೆ ಕೌನ್ಸಿಲರ್ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಬಿಜೆಪಿ -10, ಕಾಂಗ್ರೆಸ್ -7, ಬಿಎಸ್ಆರ್ ಕಾಂಗ್ರೆಸ್- 6, ಜೆಡಿಎಸ್- 1, ಕೆಜೆಪಿ -1, ಪಕ್ಷೇತರರು- 2 ಸ್ಥಾನದಲ್ಲಿ ಜಯಗಳಿಸಿತು. ಇದರಿಂದ ಪುರಸಭೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೇ ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಇಬ್ಬರು ಪಕ್ಷೇತರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಾರದ ತೀರ್ಪು: ಆಗ ಅಧ್ಯಕ್ಷ ಸ್ಥಾನ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ- ಓಬಿಸಿಗೆ ಮೀಸಲಾಗಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಇನ್ನೇನು ಚುನಾವಣೆ ನಡೆಯಬೇಕು ಎಂಬುವಷ್ಟರಲ್ಲಿ ಮೀಸಲಾತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪುರಸಭಾ ಸದಸ್ಯರೂ ಹಾಗೂ ನ್ಯಾಯವಾದಿ ಎಚ್.ಕೆ. ಹಾಲೇಶ್ ರಾಜ್ಯ ಉಚ್ಚ ನ್ಯಾಯಾಲಯ ಮೊರೆ ಹೋದರು. ಈವರೆಗೂ ಸಮಸ್ಯೆ ಬಗೆಹರಿದಿಲ್ಲ. ನ್ಯಾಯಾಲಯದ ಅಂತಿಮ ತೀರ್ಪು ಬಂದಿಲ್ಲ.
ಕೌನ್ಸಿಲರ್ಗಳು ಇದ್ದರೂ ಅಧ್ಯಕ್ಷ- ಉಪಾಧ್ಯಕ್ಷರನ್ನೊಳಗೊಂಡ ಸಮಿತಿ ಅಸ್ತಿತ್ವಕ್ಕೆ ಬಾರದ ಕಾರಣ ಆಡಳಿತಾಧಿಕಾರಿಗಳ ಉಸ್ತುವಾರಿಯಲ್ಲಿ ಪುರಸಭೆಯ ಆಡಳಿತ ನಡೆಯುತ್ತಿದೆ. ನೀರು, ಸ್ವಚ್ಛತೆ ಮುಂತಾದ ಸಣ್ಣ- ಪುಟ್ಟ ಕೆಲಸ ಬಿಟ್ಟರೆ ಮಹತ್ವದ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ.
ಮಾಜಿ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಪ್ರತಿಕ್ರಿಯಿಸಿ, ಕೋರ್ಟು ತೀರ್ಪು ವಿಳಂಬವಾಗಿದೆ. ಸರ್ಕಾರ ಮಧ್ಯಪ್ರವೇಶಿಸಿ ಜನಪ್ರತಿನಿಧಿಗಳಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಪುರಸಭೆಯ ಆಡಳಿತ ಚುರುಕಾಗಿ ನಡೆಯುತ್ತಾ ಇಲ್ಲ ಎಂದು ಹೇಳಿದರು.
8ನೇ ವಾರ್ಡಿನ ಬಿಜೆಪಿ ಕೌನ್ಸಿಲರ್ ಬೂದಿ ನವೀನ ಮಾತನಾಡಿ, ಪುರಸಭೆಯಲ್ಲಿ ನೌಕರರು ಏನು ಕೇಳಿದರೂ ಸಮಿತಿ ಬರಲಿ ಎನ್ನುತ್ತಾರೆ. ನಮ್ಮ ಮಾತನ್ನು ಅಲ್ಲಿಯ ಅಧಿಕಾರಿಗಳು ಕೇಳುತ್ತಿಲ್ಲ. ಜನರಿಗೆ ಬಹಳ ಸಮಸ್ಯೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
7 ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಪ್ರಭಾ ಅಜ್ಜಣ್ಣ ಮಾತನಾಡಿ, ಚುನಾವಣೆಯಲ್ಲಿ ಗೆದ್ದರೂ ನಾವು ಅನಾಥರಾಗಿದ್ದೇವೆ. ವಾರ್ಡ್ಗಳಲ್ಲಿ ನೀರು, ಸ್ವಚ್ಛತೆ ಹೊರತುಪಡಿಸಿ ಬೇರೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ನೌಕರರು ನಿರಂಕುಷರಾಗಿದ್ದಾರೆ ಎಂದು ಹೇಳುತ್ತಾರೆ.
ಹದಗೆಟ್ಟ ರಸ್ತೆಗಳು: ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಆಮೆಗತಿಯಲ್ಲಿ ನಡೆದಿದ್ದು, ಪೈಪು ಅಳವಡಿಸಲು, ಚೇಂಬರ್ ಮಾಡಲು ಇದ್ದ ಕಾಂಕ್ರಿಟ್ ಹಾಗೂ ಡಾಂಬರು ರಸ್ತೆ ಒಡೆದು ಹಾಕಿ 3 ವರ್ಷಗಳೇ ಕಳೆದಿವೆ. ಪಟ್ಟಣದ ಒಳಗಿನ ರಸ್ತೆಗಳು ಹಾಳಾಗಿ ಹೋಗಿವೆ. ಪುರಸಭೆಯ ಅತಂತ್ರ ಸ್ಥಿತಿ ಮುಂದುವರಿದಿದೆ.
ಒಂದು ಕಡೆ ಚುನಾಯಿತ ಸಮಿತಿ ಅಸ್ತಿತ್ವಕ್ಕೆ ಬಂದಿಲ್ಲ. ಪುರಸಭಾ ಮುಖ್ಯಾಧಿಕಾರಿ ಲಕ್ಷ್ಮೀ ಅವರು ಹೆರಿಗೆ ರಜೆ ಹೋಗಿದ್ದು, ಪ್ರಭಾರಿಯಾಗಿ ಕಂದಾಯ ಅಧಿಕಾರಿ ಸುಂಕಪ್ಪ ಕಾರ್ಯ ನಿರ್ವಹಿಸುತ್ತಾರೆ. ಒಟ್ಟಿನಲ್ಲಿ ಬೇಗ ಚುನಾಯಿತ ಸಮಿತಿ ಅಸ್ತಿತ್ವಕ್ಕೆ ಬರಬೇಕು. ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯಬೇಕು ಎಂಬುದು ಜನರ ಆಶಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

