ಚಿಕ್ಕಮಗಳೂರು

ಮಾತುಕತೆ ವಿಫಲ: ಭದ್ರಾ ಯೋಜನೆ ಕಾಮಗಾರಿ ತಡೆಗೆ ರೈತ ಸಂಘ ನಿರ್ಧಾರ

Published On :

ಕ.ಪ್ರ.ವಾರ್ತೆ, ತರೀಕೆರೆ, ಜ.4
ಅಜ್ಜಂಪುರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ನಿರಾವರಿ ಇಲಾಖೆ ಅಧಿಕಾರಿಗಳು ಮತ್ತು ರೈತರ ನಡುವೆ ನೆಡೆದ ಮಾತುಕತೆ ವಿಫಲವಾಗಿದೆ. ಇದರಿಂದ ಯೋಜನೆ ಕಾಮಗಾರಿ ಕಾರ್ಯವನ್ನು ತಡೆಹಿಡಿಯಲು ರೈತ ಸಂಘ ನಿರ್ಧರಿಸಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆ ಅಧ್ಯಕ್ಷ ಡಿ.ಸಿ. ಸುರೇಶ್ ತಿಳಿಸಿದ್ದಾರೆ.
ಇಲ್ಲಿಗೆ ಸಮೀಪದ ಅಜ್ಜಂಪುರದ ಅತ್ತಿಮೊಗ್ಗೆ ಬಳಿಯ ಭದ್ರಾ ಮೇಲ್ದಂಡೆ ಯೋಜನೆಯ ಸುರಂಗ ಮಾರ್ಗದ ಬಳಿ ರೈತ ಸಂಘ ನಡೆಸುತ್ತಿರುವ ಯೋಜನೆ ಕಾಮಗಾರಿ ತಡೆ ಹಿಡಿಯವ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರತ್ಯೇಕ ನೀರಾವರಿ:  2013ರ ಜೂ.16ರಂದು ನೀರಾವರಿ ಸಚಿವ ಎಂ.ಬಿ.ಪಾಟೀಲ್, ಸಂಸದ ಜಯಪ್ರಕಾಶ್ ಹೆಗಡೆ, ಶಾಸಕ ಜಿ.ಎಚ್. ಶ್ರೀನಿವಾಸ್ ಹಾಗೂ ರೈತ ಸಂಘದ ನಡುವೆ ನಡೆದ ಮಾತುಕತೆಯಲ್ಲಿ ತರೀಕೆರೆ ತಾಲೂಕಿಗೆ ಪ್ರತ್ಯೇಕ ನೀರಾವರಿ ಯೋಜನೆ ಮಾಡುವ ಮೂಲಕ ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಮತ್ತು ಪಟ್ಟಣಕ್ಕೆ ಕುಡಿಯಲು ಹಾಗೂ ವ್ಯವಸಾಯಕ್ಕೆ ಸಮಗ್ರ ಮತ್ತು ಶಾಶ್ವತ ನೀರಾವರಿ ಯೋಜನೆ ಮಾಡುವುದಾಗಿಯೂ, ಅದಕ್ಕೆ ಬೇಕಾದ ನೀರಿನ ಹಕ್ಕನ್ನು ಕಾಯ್ದಿರಿಸುವುದಾಗಿ ಹೇಳಿದ್ದು, ವಾರದೊಳಗಾಗಿ ಸರ್ವೆ ಕಾರ್ಯವನ್ನು ಆರಂಭಿಸಲು ಅಧಿಕಾರಿಗಳಿಗೂ ಸೂಚಿಸಿದ್ದರು.
ಜೂ.16ರಂದು ಅಜ್ಜಂಪುರದಲ್ಲಿ ಯೋಜನೆಯ ಚಾಲನೆ ನೀಡಲು ಸಚಿವರು ಬಂದಾಗ ರೈತರು ಪ್ರತಿಭಟನೆ ನಡೆಸಿ ಮಾತುಕತೆಯ ನಡಾವಳಿ ಪತ್ರ ನೀಡದೆ ಕಾಮಗಾರಿ ಆರಂಭಿಸಬಾರದು ಎಂದು ತಡೆದಾಗ, ಒಂದು ವಾರದೊಳಗಾಗಿ ನಡಾವಳಿ ಪತ್ರ ನೀಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದರು.
ಆದರೆ, ಇಲ್ಲಿಯವರೆಗೂ ನಡಾವಳಿ ಪತ್ರವಾಗಲಿ, ನೀರು ಕಾಯ್ದಿರಿಸುವ ಕಾರ್ಯವನ್ನು ಮಾಡಲಿಲ್ಲ. ಏಕೆ ಹೀಗೆ ಎಂದು ಸಭೆಯಲ್ಲಿ ರೈತರು ಪ್ರಶ್ನಿಸಿದಾಗ ಅಧಿಕಾರಿಗಳು ಉತ್ತರ ಕೊಡಲಾಗಲಿಲ್ಲ.
ಪುನಹ ಸಭೆ:  ಶನಿವಾರ ಅಜ್ಜಂಪುರದ ಅತ್ತಿಮೊಗ್ಗೆ ಬಳಿಯ ಯೋಜನೆ ಕಾಮಗಾರಿ ಸ್ಥಳದಲ್ಲಿ ರೈತ ಸಂಘ ಮತ್ತು ಉಪವಿಭಾಗಾಧಿಕಾರಿ ಅನುರಾಧ, ನೀರಾವರಿ ಇಲಾಖೆ ಅಧಿಕಾರಿ ಮೋಹನ್ ಮತ್ತಿತರ ಅಧಿಕಾರಿಗಳ ಸಭೆ ನಡೆಯಿತು.
ಉಪವಿಭಾಗಾಧಿಕಾರಿ ಅನುರಾಧ ಮಾತನಾಡಿ, ನೀರು ಕಾಯ್ದಿರಿಸುವ ಅಧಿಕಾರ ನಮಗಿಲ್ಲ. ಈ ವಿಚಾರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಡಿ.ಸಿ.ಸುರೇಶ್, ಕಾರ್ಯಾಧ್ಯಕ್ಷ ಎಚ್.ಎಸ್. ಸೋಮಶೇಖರಯ್ಯ ಹಳೆಯೂರು, ಉಪಾಧ್ಯಕ್ಷ ಜಯಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಸೊಕ್ಕೆ ನವೀನ್, ಸುತ್ತಮುತ್ತಲ ಗ್ರಾಮದ ರೈತರು ಸಭೆಯಲ್ಲಿ ಭಾಗವಹಿಸಿದ್ದರು.
ಯೋಜನೆ ಕಾಮಗಾರಿ ಕಾರ್ಯಕ್ಕೆ ಶಾಂತಿಯುತವಾಗಿ ತಡೆಯೊಡ್ಡುವ ಮೂಲಕ ಪ್ರತಿಭಟನೆ ಮುಂದುವರಿಸಲು ಸಂಘ ನಿರ್ಧರಿಸಿದ, ತಾಲೂಕಿನ ಸಮಸ್ತೆ ಜನತೆ, ಸಂಘ ಸಂಸ್ಥೆಗಳು, ಯುವಕರು ವಿದ್ಯಾರ್ಥಿಗಳು ಸಹಕರಿಸಬೇಕೆಂದು ಸಂಘದ ಅಧ್ಯಕ್ಷ ಡಿ.ಸಿ. ಸುರೇಶ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.