ಚಿಕ್ಕಮಗಳೂರು

ಸುದ್ದಿ ಸಂಕ್ಷೇಪ

Published On :

ಪ್ರತ್ಯೇಕ ಹಾಲು ಒಕ್ಕೂಟ: ಸಂಪುಟ ಅನುಮೋದನೆ  
ಚಾಮರಾಜನಗರ: ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ 83 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿರುವುದನ್ನು ಮೈಸೂರು-ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಎಚ್.ಎಸ್. ಬಸವರಾಜು ಸ್ವಾಗತಿಸಿದ್ದಾರೆ.   
 ಮೈಸೂರು ಹಾಲು ಒಕ್ಕೂಟವನ್ನು ಪ್ರತ್ಯೇಕಗೊಳಿಸಿ ಗಡಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಬಂದ  ಸ್ವಲ್ಪ ದಿನದಲ್ಲೇ ಜಿಲ್ಲೆಯಲ್ಲಿ ಹಾಲು ಒಕ್ಕೂಟ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಜಿಲ್ಲಾ ಕೇಂದ್ರದ ಸಮೀಪ  ಜಮೀನು ಕಾಯ್ದಿರಿಸುವ ಪ್ರಕ್ರಿಯೆ ಚಾಲನೆ  ನೀಡಲಾಗಿತ್ತು.
 ಶುಕ್ರವಾರ ನಡೆದ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ  ಪ್ರತ್ಯೇಕ ಹಾಲು ಒಕ್ಕೂಟ ರಚನೆಯ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಪ್ರಥಮ ಹಂತವಾಗಿ 83 ಕೋಟಿ ರು.ಗಳ ಪ್ರಸ್ತಾವನೆ ಮಂಡಿಸಿ, ಸಚಿವ ಸಂಪುಟದ ಒಪ್ಪಿಗೆಯನ್ನು ಪಡೆಯುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಸಚಿವರು ಆದ ಎಚ್.ಎಸ್. ಮಹದೇವಪ್ರಸಾದ್ ಕಾರಣಕರ್ತರಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ ಎಂದು ಬಸವರಾಜು ಅಭಿನಂದಿಸಿದ್ದಾರೆ.
  ಬರಪೀಡಿತ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಹಿಂದುಳಿದ ಪ್ರದೇಶವೆಂದು ಹಣೆಪಟ್ಟೆ  ಹೊಂದಿರುವ ಜಿಲ್ಲೆಯಲ್ಲಿ ಒಕ್ಕೂಟ ಸ್ಥಾಪನೆಯಿಂದ ರೈತರಿಗೆ  ವರದಾನವಾಗಲಿದೆ. ಒಕ್ಕೂಟ ಸ್ಥಾಪನೆಯಿಂದ ಜಿಲ್ಲೆಯ ಅಭಿವೃದ್ಧಿಯಾಗುವುದರ  ಜೊತೆಗೆ ಹಾಲಿನ ಗುಣಮಟ್ಟ ಹೆಚ್ಚಿಸಲು ಸಹಕಾರ ವಾಗುತ್ತಿದೆ.
  ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹಾಲಿನ ಸಂಗ್ರಹವಾಗಲಿದೆ. ಮಳೆ ಇಲ್ಲದೇ ವ್ಯವಸಾಯ ಲಾಭದಾಯಕವಾಗದ ಕಾರಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಸರ್ಕಾರ ಹಾಲಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡುತ್ತಿರುವುದರಿಂದ ಹಾಲಿನ ಶೇಖರಣೆ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಒಕ್ಕೂಟದ ರಚನೆ ಜೊತೆಗೆ  ಮಾರುಕಟ್ಟೆ ವಿಸ್ತರಣೆಗೆ  ಹೆಚ್ಚಿನ ಒತ್ತು ನೀಡಬೇಕು ಎಂದು  ಮನವಿ ಮಾಡಿದ್ದಾರೆ.
'ವಿವೇಕಾನಂದರ ವಿಚಾರಧಾರೆ ಸಾರ್ವಕಾಲಿಕ'
ಕೊಳ್ಳೇಗಾಲ: ವಿವೇಕಾನಂದರ ಮೌಲ್ಯಗಳು ಸರ್ವಕಾಲಿಕವಾದುವು. ವಿವೇ ಕ ತತ್ವ, ಆದ ರ್ಶ ಗುಣಗಳು ಹಾಗೂ  ವಿಚಾರಧಾರೆಗಳು ಇಂದಿನ ಯು ವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ನಿವೃತ್ತ  
ಮುಖ್ಯ ಶಿಕ್ಷಕ ಚನ್ನಮಾದೇಗೌಡ  ಹೇಳಿದರು.
 ಪಟ್ಟಣದ ಮಾನಸ ಕಾಲೇಜಿನಲ್ಲಿ ಭಾರತ್ ವಿಕಾಸ್ ಪರಿಷತ್‌ನಿಂದ ಆಯೋಜಿಸಲಾಗಿದ್ದ  ವಿವೇಕಾನಂದರ 150ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಯುವ ಜನತೆ ವಿವೇಕಾನಂದರ ತತ್ವ, ಗುಣಗಳನ್ನು ಅಳವಡಿಸಿ ಕೊಳ್ಳಬೇಕು.
 ವಿವೇಕಾನಂದರು ಕೇವಲ ವ್ಯಕ್ತಿಯಾಗಿರಲಿಲ್ಲ,ದೇಶದ ಶಕ್ತಿಯಾಗಿ ಹೊರಹೊಮ್ಮಿದ್ದರು ಎಂಬುದನ್ನು ಅರಿಯಬೇಕು ಎಂದರು.
 ಭಾರತ್ ವಿಕಾಸ್ ನವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಗೊಂಬೆಗಳ ಪ್ರದರ್ಶನ ಸ್ಪರ್ಧಾ ವಿಭಾಗದಲ್ಲಿ ಕೊಳ್ಳೇಗಾಲದ ಶಾರದಾ ಚಂದ್ರಶೇಖರ್ ಪ್ರಥಮ ಬಹುಮಾನ, ಕೃಷ್ಣವೇಣಿ ದ್ವಿತೀಯ ಹಾಗೂ ಭ್ರಮರಾಂಭ  ತೃತೀಯ ಬಹುಮಾನ ಗಳಿಸಿದ್ದು, ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
  ಭಾರತ್ ವಿಕಾಸ್ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಜಿ.ಪಿ.ನಾಗರಾಜಪ್ಪ, ಅಧ್ಯಕ್ಷ ಶಿವಶಂಕರ್, ಡಾ.ಶಿವರುದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಶಂಕರ್, ಮುಡಿಗುಂಡಸುಂದ್ರಪ್ಪ, ಪ್ರಕಾಶ್‌ಮೂರ್ತಿ ಗಿಣಿರಮೇಶ,ಮಧುಸೂದನ್ ಇದ್ದರು.
ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಯಳಂದೂರು: ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಿಂದ ವಾಜಪೇಯಿ ಆರೋಗ್ಯಶ್ರೀ ಫಲಾನುಭವಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜ. 7ರಂದು ಮಂಗಳವಾರ ಬೆಳಗ್ಗೆ 10ರಿಂದ ಪಟ್ಟಣದ ತಾಲೂಕು ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಹೃದ್ರೋಗ, ನರರೋಗ, ಮೂತ್ರ ಪಿಂಡ ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ನವಜಾತ ಶಿಶು ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ ಇನ್ನಿತರ ಸಮಸ್ಯೆಗಳಿಗೆ ಉಚಿತ ಸಲಹೆ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆ ಆಡಳಿತ ವಿಭಾಗ ತಿಳಿಸಿದೆ. ಮಾಹಿತಿಗಾಗಿ 0821-2548364, 2548363 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.