ಅರಣ್ಯವಾಸಿಗಳ ಹಕ್ಕುಪತ್ರ ಪರಾಮರ್ಶೆಗೆ ಸೂಚನೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.7
ಪಾರಂಪರಿಕ ಅರಣ್ಯ ನಿವಾಸಿಗರ ಹಕ್ಕು ಕಾಯ್ದೆಯ ಪ್ರಯೋಜನಾ ಪಡೆದುಕೊಳ್ಳಲು ಬಂದಿರುವ ಅರ್ಜಿಗಳನ್ನು ಪರಾಮರ್ಶಿಸಿ ಕ್ರಮ ವಹಿಸಲು ಸಚಿವ ಸಂಪುಟದ ಉಪ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಪರಿಸರ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಕಾಡಾನೆಗಳ ಹಾವಳಿಯಿಂದ ಹಾನಿಗೊಳಗಾದ ಮೂಡಿಗೆರೆ ತಾಲೂಕಿನ ಕೆಲವು ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಾರಂಪರಿಕ ಅರಣ್ಯ ವಾಸಿಗಳ ಹಕ್ಕುಕಾಯ್ದೆ ಕರ್ನಾಟಕ ರಾಜ್ಯದಲ್ಲಿ ಹಿಂದಿನ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತಂದಿಲ್ಲ ಎಂದರು.
ಅಧಿಕಾರಿಗಳಿಗೆ ಸೂಚನೆ: ಈ ಕಾಯ್ದೆಯ ಪ್ರಯೋಜನ ಪಡೆದುಕೊಳ್ಳಲು ಕರ್ನಾಟಕ ರಾಜ್ಯದಲ್ಲಿ 1.80 ಲಕ್ಷ ಅರ್ಜಿಗಳು ಬಂದಿದ್ದವು. ಆದರೆ, ವಿಲೇವಾರಿಯಾಗಿದ್ದು, ಶೇ.16ರಷ್ಟು ಮಾತ್ರ. ಆದರೆ, ನೆರೆಯ ಆಂಧ್ರಪ್ರದೇಶದಲ್ಲಿ ಶೇ.80ರಷ್ಟು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಕರ್ನಾಟಕ ರಾಜ್ಯದ ಅರಣ್ಯವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಸಚಿವ ಸಂಪುಟದ ಉಪ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಂಡು, ಅರ್ಜಿಗಳನ್ನು ಪರಾಮರ್ಶಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಅಂಚಿನಲ್ಲಿ ಹಳಿ: ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗಿದೆ. ಕಳೆದೆರಡು ವರ್ಷಗಳ ಹಿಂದೆ ಕರ್ನಾಟಕ ರಾಜ್ಯದಲ್ಲಿ 3000 ಆನೆಗಳಿದ್ದವು. ಇದೀಗ ಈ ಸಂಖ್ಯೆ 6,500ಕ್ಕೆ ಏರಿದೆ. ಆನೆಗಳಿಂದ ಬೆಳೆಹಾನಿ ಹಾಗೂ ಮಾನವ ಪ್ರಾಣ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಅರಣ್ಯದ ಅಂಚಿನಲ್ಲಿ ರೇಲ್ವೆ ಹಳಿಗಳನ್ನು ಹಾಕಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಪ್ರಾಯೋಗಿಕವಾಗಿ ನಾಗರಹೊಳೆಯ ಅಭಯಾರಣ್ಯದಲ್ಲಿ ಸುಮಾರು 14 ಕಿ.ಮೀ. ಹಳಿಗಳನ್ನು ಹಾಕಲಾಗಿದೆ. ಈ ಪ್ರಯತ್ನ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಸಬ್ಸಿಡಿ: ಕಾಡಿನ ಆಸುಪಾಸಿನ ತೋಟ ಹಾಗೂ ಗದ್ದೆಗಳಿಗೆ ಕಾಡು ಪ್ರಾಣಿಗಳಿಂದ ಹಾನಿಯಾಗುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಸೋಲಾರ್ ತಂತಿಗಳನ್ನು ಹೊಲಗಳಿಗೆ ಅಳವಡಿಸಲು ರೈತರು ಮುಂದೆ ಬಂದರೆ ಶೇ. 50ರಷ್ಟು ಸಬ್ಸಿಡಿಯನ್ನು ಸರ್ಕಾರದಿಂದ ಭರಿಸಲು ಚಿಂತನೆ ನಡೆಸಲಾಗಿದೆ. ಕಾಡು ಪ್ರಾಣಿಗಳಿಂದ ಪ್ರಾಣ ಹಾನಿ ಆದವರಿಗೆ 5 ಲಕ್ಷವರೆಗೆ ಪರಿಹಾರ ಹಣ ನೀಡಲಾಗುತ್ತಿದೆ. ಬೆಳೆಹಾನಿಗೆ ಹೆಚ್ಚಿನ ಪರಿಹಾರ ನೀಡಲು ಕೃಷಿ ಇಲಾಖೆಯ ಅಧಿಕಾರಿಗಳಿಂದ ವರದಿ ಬಂದ ನಂತರ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಸಕಲೇಶಪುರದ ಅರಣ್ಯ ಭಾಗದಲ್ಲಿ 26 ಆನೆಗಳನ್ನು ಸೆರೆ ಹಿಡಿಯಲು ಉಚ್ಚನ್ಯಾಯಾಲಯದ ಅನುಮತಿ ನೀಡಿದ್ದು, ಈಗಾಗಲೇ ಒಂದು ಪುಂಡಾನೆ ಸೆರೆಹಿಡಿಯಲಾಗಿದೆ. ಅದೇ ರೀತಿ ಈ ಭಾಗದಲ್ಲಿಯೂ ಆನೆಗಳ ಹಾವಳಿ ತಪ್ಪಿಸಲು ಪ್ರಾಧಿಕಾರದ ಅನುಮತಿ ಪಡೆದು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭ ವಿಧಾನಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಚಿವ ರಮಾನಾಥ ರೈ ಮಾತನಾಡಿದರು.
'ಬೆಳೆ ಹಾನಿ: ಶೀಘ್ರ ಪರಿಹಾರ'
ಮೂಡಿಗೆರೆ: ಮಲೆನಾಡು ಪ್ರದೇಶಗಳಲ್ಲಿ ಕಾಡಾನೆ ಹಾವಳಿಯಿಂದ ಹೆಚ್ಚಿನ ಬೆಳೆ ಹಾನಿಯಾಗಿರುವ ಬಗ್ಗೆ ಅರ್ಜಿಗಳು ಬಂದಿದ್ದು, ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಂಡಿದೆ ಎಂದು ಅರಣ್ಯ ಸಚಿವ ಬಿ. ರಮಾನಾಥ್ ರೈ ತಿಳಿಸಿದರು.
ತಾಲೂಕಿನ ಕೊಟ್ಟಿಗೆಹಾರದ ಅರಣ್ಯ ವಲಯದ ಮಲಯಮಾರುತ ವಿಶ್ರಾಂತಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆ ಹಾವಳಿ ನಿಯಂತ್ರಣದ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುವುದಾಗಿ ತಿಳಿಸಿದರು.
ತೆರವು ಅನುವಾರ್ಯ: ಕಂದಾಯ ಇಲಾಖೆಗಳ ಲೋಪದ ವರದಿ ನೀಡಿದ್ದರ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸುವುದು ಅನಿವಾರ್ಯವಾಗಿದೆ. ಕಳಸ ಕಳಸೇಶ್ವರ ಇನಾಂ ಭೂಮಿ ಸಮಸ್ಯೆ ನ್ಯಾಯಾಲಯದಲ್ಲಿದ್ದು, ಸದನದಲ್ಲಿ ಚರ್ಚಿಸಿದ ಬಳಿಕವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಡೀಮ್ಡ್ ಫಾರೆಸ್ಟ್, ಕಂದಾಯ ಮತ್ತು ಅರಣ್ಯ ಪ್ರದೇಶಗಳಲ್ಲಿನ ಒತ್ತುವರಿ ಸಮಸ್ಯೆ ವೈಜ್ಞಾನಿಕವಾಗಿ ದೃಢಪಟ್ಟಲ್ಲಿ ಸದನದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು,
ಕೆಜಿಎಫ್ ಅಧ್ಯಕ್ಷ ಬಿ.ಎಸ್. ಜಯರಾಮ್ ಮಾತನಾಡಿ, ಆನೆ ಹಾವಳಿಯಿಂದ ಬೆಳೆ ನಾಶಗೊಂಡ ರೈತರು ಮತ್ತು ಬೆಳೆಗಾರರಿಗೆ ನೀಡುತ್ತಿರುವ ಪರಿಹಾರ ಏನೇನೂ ಸಾಲದು ಪರಿಹಾರದ ಮೊತ್ತ ಹೆಚ್ಚಿಸುವಂತೆ ಸಚಿವರಲ್ಲಿ ಮನವಿ ಮಾಡಿರು.
ಸವಲತ್ತು ನೀಡಿ: ಅರಣ್ಯ ಪ್ರೇರಕರನ್ನು ಖಾಯಂಗೊಳಿಸಿ ಸರ್ಕಾರದ ಸವಲತ್ತು ಒದಗಿಸುವಂತೆ ಅರಣ್ಯ ಪ್ರೇರಕ ಸಂಘದ ಸ ದಸ್ಯ ಟಿ.ಪಿ. ಮಲ್ಲೇಶ್ ಮನವಿ ಅರ್ಪಿಸಿದರು.
ಶಾಸಕ ಬಿ.ಬಿ. ನಿಂಗಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಎಲ್. ವಿಜಯಕುಮಾರ್, ವಿಪ ಸದಸ್ಯೆ ಗಾಯತ್ರಿ ಶಾಂತೇಗೌಡ, ಮುಖಂಡ ಬಿ.ಎಲ್.ರಾಮದಾಸ್, ಟಿ.ಡಿ. ರಾಜೇಗೌಡ, ಪ್ರಭಾಕರ್, ಬಿ.ಎಸ್. ಜಯರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು, ಜಿಪಂ ಸದಸ್ಯ ಸ್ಯ ಎಂ.ಎಸ್. ಅನಂತ್, ತಾಪಂ ಸದಸ್ಯ ದೇವರಾಜ್ ಸಬ್ಲಿ, ತಹಸೀಲ್ದಾರ್ ಶಿವರಂಗಪ್ಪ, ರಾಜಸ್ವ ನಿರೀಕ್ಷಕ ಎಂ. ಗಂಗಾಧರ್, ಜಿಲ್ಲಾ ಅರಣ್ಯ ಸಂರ ಕ್ಷಣಾಧಿಕಾರಿ ರವಿರಾಜ್ ನಾರಾಯಣ್, ಭದ್ರ ವೈಲ್ಡ್ ಲೈಫ್ ನಿರ್ದೇಶಕ ವೆಂಕಟೇಶನ್, ಸಿ.ಸಿ.ಎಫ್ ಒ ಜಿ.ಎಚ್. ಯಾದವ್, ಮೂಡಿಗೆರೆ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ರಮೇಶ್ ಬಾಬು, ಅರಣ್ಯ ವ ಲಯಾಧಿಕಾರಿ ಸುದರ್ಶನ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ನೆಡುತೋಪು ವೀಕ್ಷಣೆ: ಅರಣ್ಯ ಸಚಿವ ಬಿ. ರಮಾನಾಥ್ ರೈ ಅಲೇಖಾನ್ ಹೊರಟ್ಟಿಯಲ್ಲಿ ನೆಡುತೋಪು ವೀಕ್ಷಿಸಿ ನಂತರ ಬೆಳಗೋಡಿನ ಕಾಡಾನೆ ಹಾವಳಿ ಇರುವ ಪ್ರದೇಶಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿ ಕಾಡಾನೆಗಳ ಬೆದರಿಸುವ ಶಿಬಿರ ಪರಿಶೀಲನೆ ನಡೆಸಿದರು.
ನಂತರ ಆನೆ ನಿರೋಧಕ ಕಂದಕ ನಿರ್ಮಾಣ ಕಾಮಗಾರಿ ವೀಕ್ಷಿಸಿ, ಬಾಳೇಹಳ್ಳಿ, ಬಿದರಹಳ್ಳಿ, ಕೆಂಜಿಗೆ ಗ್ರಾಮಕ್ಕೆ ಭೇಟಿ ನೀಡಿ ಆನೆ ಹಾವಳಿಗೆ ತುತ್ತಾಗಿದ್ದ ಗದ್ದೆ ಮತ್ತು ತೋಟಗಳ ಪರಿಶೀಲನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

