ಚಿಕ್ಕಮಗಳೂರು

ದೊಡ್ಡ ಮಟ್ಟದ ಅರಣ್ಯ ಒತ್ತುವರಿ ತೆರವುಗೊಳಿಸಿ: ಸುಮಾ ನಾಗೇಶ್

Published On :

ಚಿಕ್ಕಮಗಳೂರು: ದೊಡ್ಡ ಮಟ್ಟದಲ್ಲಿ ಅರಣ್ಯ ಒತ್ತುವರಿ ಮಾಡಿರುವವರನ್ನು ತೆರವುಗೊಳಿಸುವಂತೆ ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ಕಾರ್ಯಕರ್ತೆ ಸುಮಾ ನಾಗೇಶ್ ಅರಣ್ಯ ಇಲಾಖೆಯನ್ನು ಆಗ್ರಹಿಸಿದರು.
ಸರ್ಕಾರದ ಮಾತನ್ನು ಕೇಳಿ ಅರಣ್ಯ ಇಲಾಖೆ ನಿಧಾನಗತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಉಚ್ಚ ನ್ಯಾಯಾಲಯದ ಆದೇಶ ಮತ್ತು ನಿರ್ದೇಶನದಂತೆ ಅರಣ್ಯ ಇಲಾಖೆಯು 30 ಎಕರೆಗಿಂತ ಮೇಲ್ಪಟ್ಟ 88 ಅರಣ್ಯ ಒತ್ತುವರಿದಾರರ ಪಟ್ಟಿ ಸಿದ್ಧಪಡಿಸಿ ಈ ಭೂಮಿ ವಶಪಡಿಸುವುದಾಗಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ 2012ರ ಅಕ್ಟೋಬರ್ 6 ರೊಳಗೆ ತೆರವು ಕಾರ್ಯ ಕೈಗೊಂಡು ವರದಿ ನೀಡುವಂತೆ ತಿಳಿಸಿತ್ತು.
ಸರ್ಕಾರ ರಕ್ಷಣೆ: ಅರಣ್ಯ ಇಲಾಖೆ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಈ ಕ್ರಮಕ್ಕೆ ಮುಂದಾದರೆ ಅರಣ್ಯ ಇಲಾಖೆ ಇಕ್ಕಟ್ಟಿಗೆ ಸಿಲುಕಲಿದೆ ಎಂದಿರುವ ಅವರು, ಅರಣ್ಯ ಇಲಾಖೆ 88 ಒತ್ತುವರಿದಾರರನ್ನು ಗುರುತಿಸಿರುವುದು ಅವೈಜ್ಞಾನಿಕವಾಗಿದ್ದು, ವಾಸ್ತವಿಕವಾಗಿ ಇದಕ್ಕೂ 10 ಪಟ್ಟು ಹೆಚ್ಚು 30 ಎಕರೆ ಮೇಲ್ಪಟ್ಟ ಒತ್ತುವರಿದಾರರು ಜಿಲ್ಲೆಯಲ್ಲಿದ್ದಾರೆ. 20 ಸಾವಿರ ಕೋಟಿಗೂ ಅಧಿಕ ಮೌಲ್ಯದ ಜಿಲ್ಲೆಯ ಭೂ ಅಕ್ರಮ ಒತ್ತುವರಿಯನ್ನು ಸರ್ಕಾರವೇ ರಕ್ಷಿಸುತ್ತಿದೆ ಎಂದು ಹೇಳಿದರು.
ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿರುವ ಖಾಸಗಿ ಕಂಪನಿ ಒಡೆತನಗಳಲ್ಲಿರುವ ಕಾಫಿ, ಟೀ, ರಬ್ಬರ್ ಮತ್ತು ಏಲಕ್ಕಿ ಪ್ಲಾಂಟೇಷನ್‌ಗಳ ಮರು ಸರ್ವೆಗೆ ಆದೇಶಿಸುವುದರ ಮೂಲಕ ಜಿಪಿಎಸ್ ಅಥವಾ ಸೆಟ್‌ಲೈಟ್ ಸರ್ವೆ ನಡೆಸಿ ನಿಖರ ಒತ್ತುವರಿ ಪತ್ತೆ ಹಚ್ಚುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ವಿನಂತಿಸಲಾಗಿದೆ ಎಂದು ತಿಳಿಸಿದರು.
ಪ್ರಮಾಣಪತ್ರ: ಈಗಾಗಲೇ ಸರ್ಕಾರವೇ ನೇಮಿಸಿರುವ ಎ.ಟಿ. ರಾಮಸ್ವಾಮಿ ಮತ್ತು ಡಾ. ಬಾಲಸುಬ್ರಹ್ಮಣ್ಯಂ ಸಮಿತಿಗಳು ಭೂ ಒತ್ತುವರಿಯ ಬಗ್ಗೆ ಗಂಭೀರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇದೀಗ ಸರ್ಕಾರವು ಒತ್ತುವರಿ ತೆರವು ಪ್ರಕ್ರಿಯೆಗೆ ಮತ್ತೊಂದು ಸಮಿತಿ ನೇಮಿಸುತ್ತೇವೆಂದು ರಾಜ್ಯದ ಕಂದಾಯ ಸಚಿವರು ಹೇಳಿರುವುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದ್ದು, ಪರೋಕ್ಷವಾಗಿ ನ್ಯಾಯಾಲಯದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರಗಾರಿಕೆಯಾಗಿದೆ. ಸರ್ಕಾರದ ಈ ನಡೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದು ಹೇಳಿದರು.
ಸಣ್ಣ ಒತ್ತುವರಿದಾರರನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಸಣ್ಣ ಒತ್ತುವರಿದಾರರ ತೆರವಿಗೂ ಮುನ್ನ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಸಿಎಫ್ ಈ ಮೂರು ಅಧಿಕಾರಿಗಳ ಸಮಿತಿ ರಚಿಸಿ ಆ ಸಮಿತಿಯ ಮೂಲಕ ಸಣ್ಣ ಒತ್ತುವರಿದಾರರ ಹಿತ ಕಾಯಲು ಮುಂದಾಗುವಂತೆ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕಾಗಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಾಗೇಶ್ ಅಂಗಿರಸ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.