ಚಿಕ್ಕಮಗಳೂರು

ಕಾಫಿ ನಾಡಿಗೆ ಪ್ರವಾಸಿಗರ ಇಳಿಮುಖ

Published On :

ಕ.ಪ್ರ.ವಾರ್ತೆ  ಚಿಕ್ಕಮಗಳೂರು  ಜ.9
ಪ್ರತಿಕೂಲ ಹವಮಾನ ಹಾಗೂ ಜಿಲ್ಲೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಅಶಾಂತಿಯ ವಾತಾವರಣ ಪ್ರವಾಸಿಗರ ಮೇಲೆ ಪರೋಕ್ಷವಾಗಿ ದುಷ್ಪರಿಣಾಮ ಬೀರುತ್ತಿವೆ.
ಚಿಕ್ಕಮಗಳೂರು ಪ್ರವಾಸಿಗರ ಅಚ್ಚುಮೆಚ್ಚಿನ ಜಿಲ್ಲೆ. ಇದು, ಎಲ್ಲಾ ಕಾಲದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಗುಣವನ್ನು ಹೊಂದಿದೆ.
ಚಳಿಗಾಲದಲ್ಲಿ ಗಿರಿ ಪ್ರದೇಶಗಳಲ್ಲಿ ಕಾಲ ಕಳೆಯುವುದೆಂದರೆ ಮನಸ್ಸಿಗೆ ಹಿತ ಎನಿಸುತ್ತದೆ. ಇನ್ನು ಮುಂಗಾರು ಮಳೆಯಲ್ಲಿ ಮಲೆನಾಡಿನ ಸೊಬಗು ನೋಡಲು ಬಹಳಷ್ಟು ಮಂದಿ ಇಷ್ಟಪಡುತ್ತಾರೆ.  ಬೇಸಿಗೆ ಕಾಲದಲ್ಲಿ ಇಲ್ಲಿಗೆ ಪ್ರವಾಸಿಗರು ಬಂದರೆ ಬಿಸಿಲಿನ ಝಳ ಮೈಗೆ ತಾಗುವುದಿಲ್ಲ. ಹೀಗೆ ವಿಶಿಷ್ಟ ಗುಣವನ್ನು ಹೊಂದಿರುವ ಚಿಕ್ಕಮಗಳೂರು ಎಲ್ಲಾ ಕಾಲದಲ್ಲೂ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಆದರೆ, ಇಲ್ಲಿ ಆಗಾಗ ಕಿಡಿಗೇಡಿಗಳಿಂದ ಸಂಭವಿಸುತ್ತಿರುವ ಅಶಾಂತಿಯ ವಾತಾವರಣ ಪ್ರವಾಸಿಗರ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಕಳೆದ ಐದರೂ ವರ್ಷಗಳ ಅಂಕಿ ಅಂಶ ನೋಡಿದರೆ ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಬಂದಿರುವ ಪ್ರವಾಸಿಗರ ಸಂಖ್ಯೆ ತೀರಾ ಇಳಿಮುಖವಾಗಿದೆ.
2011 ರಲ್ಲಿ ಜಿಲ್ಲೆಗೆ ಬಂದ ಭಾರತೀಯ ಪ್ರವಾಸಿಗರ ಸಂಖ್ಯೆ 93 ಲಕ್ಷ, 2012ರಲ್ಲಿ ಈ ಸಂಖ್ಯೆ 98 ಲಕ್ಷಕ್ಕೆ ಏರಿತ್ತು. ಆದರೆ, 2013ರಲ್ಲಿ ಈ ಸಂಖ್ಯೆ 89 ಲಕ್ಷಕ್ಕೆ ಇಳಿದಿದೆ. ಕಳೆದ ವರ್ಷ ಸತತವಾಗಿ ಎರಡು ತಿಂಗಳ ಕಾಲ ಸುರಿದ ಮಳೆಯಿಂದಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭೂ ಕುಸಿತ ಉಂಟಾಗಿತ್ತು.
 ಕೇದಾರನಾಥದಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಅವಘಡವನ್ನು ದೃಶ್ಯ ಮಾಧ್ಯಮದಲ್ಲಿ ನೋಡಿದ ಪ್ರವಾಸಿಗರು, ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಗೆ ಭೂ ಕುಸಿತ ಉಂಟಾಗಿರುವುದನ್ನು ತಿಳಿದು ಇಲ್ಲಿಗೆ ಬರಲು ಹಿಂದೇಟು ಹಾಕಿದರು.
ಘರ್ಷಣೆ ಕಾರಣ: ಯಾವುದೇ ಒಂದು ಸ್ಥಳದಲ್ಲಿ ಗುಂಪು ಘರ್ಷಣೆ ನಡೆದರೆ, ಅಲ್ಲಿಗೆ ಪ್ರವಾಸಿಗರು ಬರಲು ಇಷ್ಟ ಪಡುವುದಿಲ್ಲ. ಈ ರೀತಿಯ ಸಮಸ್ಯೆಯನ್ನು ಚಿಕ್ಕಮಗಳೂರು ಜಿಲ್ಲೆ ಕಳೆದ ವರ್ಷ ಅನುಭವಿಸಿತು.
ಜಿಲ್ಲೆಯಲ್ಲಿ ಒಂದೆಡೆ ನಕ್ಸಲ್ ಸಮಸ್ಯೆ, ಇನ್ನೊಂದೆಡೆ ಭಯೋತ್ಪದನೆಯ ನಂಟಿದೆ ಎಂಬುದು ಯಾಸೀನ್ ಭಟ್ಕಳ್ ಬಂಧನದಿಂದಾಗಿ ದೃಢಪಟ್ಟಿತು. ಇದರ ಜತೆಗೆ ಜಿಲ್ಲೆಯಲ್ಲಿ ಆಗಾಗ ಕೋಮು ಗಲಭೆಗಳು ಸಹ ನಡೆಯುತ್ತಿದೆ. ಈ ಎಲ್ಲಾ ಕಾರಣಗಳು ಪ್ರವಾಸಿಗರ ಮೇಲೆ ದುಷ್ಪರಿಣಾಮ ಬೀರುತ್ತಿವೆ.
2012ರ ಡಿಸೆಂಬರ್ ತಿಂಗಳಲ್ಲಿ ಚಿಕ್ಕಮಗಳೂರು ನಗರಕ್ಕೆ 4,506 ಮಂದಿ ದೇಶಿಯ ಪ್ರವಾಸಿಗರು ಆಗಮಿಸಿದ್ದರು. ಆದರೆ, 2013ರ ಡಿಸೆಂಬರ್ ತಿಂಗಳಲ್ಲಿ ಇಲ್ಲಿಗೆ ಬಂದ ದೇಶಿಯ ಪ್ರವಾಸಿಗರ ಸಂಖ್ಯೆ 2,344 ಮಾತ್ರ, ಅಂದರೆ ಸುಮಾರು 2 ಸಾವಿರದಷ್ಟು ಸಂಖ್ಯೆ ಕಡಿಮೆಯಾಗಿದೆ.
ಡಿಸೆಂಬರ್ ಕೊನೆಯ ವಾರದಲ್ಲಿ ರಜೆ ಇರುವುದರಿಂದ ಬಹಳಷ್ಟು ಮಂದಿ ಪ್ರವಾಸ ಕೈಗೊಳ್ಳುವುದು ಸಹಜ. ಡಿಸೆಂಬರ್ 24 ರಂದು ಚಿಕ್ಕಮಗಳೂರು ನಗರದಲ್ಲಿ ದರ್ಗಾವನ್ನು ಅಪವಿತ್ರಗೊಳಿಸಿದ್ದರಿಂದ ಗುಂಪು ಘರ್ಷಣೆ ನಡೆದು 36 ಗಂಟೆಗಳ ಕಾಲ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು. ಆ ಸಂದರ್ಭದಲ್ಲಿ ಪ್ರವಾಸಿಗರಿಗೆ ಇಲ್ಲಿಗೆ ಬರುವ ತುಂಬಾ ತೊಂದರೆಯಾಗಿತ್ತು. ಇದೇ ಕಾರಣದಿಂದಾಗಿ ಬಹಳಷ್ಟು ಪ್ರವಾಸಿಗರು ಕೆಲವು ಹೋಂ ಸ್ಟೇಗಳಲ್ಲಿ ಮುಂಗಡವಾಗಿ ಬುಕಿಂಗ್ ಮಾಡಿರುವುದನ್ನು ಕೊನೆ ಕ್ಷಣದಲ್ಲಿ ಇಲ್ಲಿಗೆ ಬರಲು ಆಗುವುದಿಲ್ಲ ಎಂಬ ಸಬೂಬು ಹೇಳಿದರು.
ಅಂದು ನಡೆದ ಘರ್ಷಣೆ ಚಿಕ್ಕಮಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದರೂ ಕೂಡ ಜಿಲ್ಲಾ ಕೇಂದ್ರಕ್ಕೆ ಬಂದು, ಇಲ್ಲಿಂದ ಬೇರೆ ಸ್ಥಳಗಳಿಗೆ ಹೋಗಬೇಕಾದ ಪ್ರವಾಸಿಗರು ತಟಸ್ಥರಾಗಿದ್ದರ ಪರಿಣಾಮ ನಿರೀಕ್ಷಿತ ಮಟ್ಟದಲ್ಲಿ ಸಂಖ್ಯೆ ಹೆಚ್ಚಳವಾಗಿರುವುದಿಲ್ಲ.
ಪ್ರವಾಸಿಗರ ಇಳಿಮುಖ: 2012 ರಲ್ಲಿ ಶೃಂಗೇರಿ ಭೇಟಿ ನೀಡಿದ್ದ ದೇಶಿಯ ಪ್ರವಾಸಿಗರ ಸಂಖ್ಯೆ 47 ಲಕ್ಷ ಇತ್ತು. ಆದರೆ, 2013ರಲ್ಲಿ ಇಲ್ಲಿಗೆ ಬಂದ ಪ್ರವಾಸಿಗರ ಸಂಖ್ಯೆ 40 ಲಕ್ಷ, ಹೊರನಾಡಿಗೆ ಹಿಂದಿನ ವರ್ಷದಲ್ಲಿ 27 ಲಕ್ಷ ಪ್ರವಾಸಿಗರು ಬಂದಿದ್ದರಿಂದ ಕಳೆದ ವರ್ಷ 24 ಲಕ್ಷ ಮಂದಿ ಬಂದಿದ್ದಾರೆ. ಬಾಳೆಹೊನ್ನೂರಿನಲ್ಲಿ 2 ಲಕ್ಷ ಸಂಖ್ಯೆ ಕಡಿಮೆಯಾಗಿದೆ. ಚಿಕ್ಕಮಗಳೂರು ನಗರದಲ್ಲಿ 36 ಸಾವಿರದಿಂದ 29 ಸಾವಿರಕ್ಕೆ ಇಳಿದಿದೆ.
ಆದರೆ, ವಿದೇಶಿ ಪ್ರವಾಸಿಗರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. 2011ರಲ್ಲಿ ಚಿಕ್ಕಮಗಳೂರು ಜಿಲ್ಲೆಗೆ 2,212 ಮಂದಿ ವಿದೇಶಿ ಪ್ರವಾಸಿಗರು ಆಗಮಿಸಿದ್ದರು. 2012ರಲ್ಲಿ 2,846, 2013ರಲ್ಲಿ 2,911 ಮಂದಿ ವಿದೇಶಿ ಪ್ರವಾಸಿಗರು ಬಂದಿದ್ದಾರೆ.
ಒಟ್ಟಾರೆ ಕಳೆದ ವರ್ಷ ನಿರಂತರವಾಗಿ ಸುರಿದ ಮಳೆ ಹಾಗೂ ಡಿಸೆಂಬರ್ ತಿಂಗಳ ಕೊನೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಸಂಭವಿಸಿದ ಗುಂಪು ಘರ್ಷಣೆ ಪ್ರವಾಸಿಗರ ಸಂಖ್ಯೆ ಇಳಿಮುಖಕ್ಕೆ ಕಾರಣವಾಗಿದೆ.
- ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.