ಚಿಕ್ಕಮಗಳೂರು

ಹಿರೇಬೈಲು ಸ್ವಯಂ ಘೋಷಿತ ಬಂದ್

Published On :

ಕ.ಪ್ರ.ವಾರ್ತೆ, ಮೂಡಿಗೆರೆ, ಜ.13
ಹಿರೇಬೈಲು-ಕರಡಿಗುಡ್ಡ ರಸ್ತೆ ಕೂಡಲೇ ಡಾಂಬರೀಕರಣ ಮಾಡಬೇಕು. ಹಿರೇಬೈಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ನೇಮಕ ಮಾಡಬೇಕೆಂದು ಸಿಪಿಐ, ಅಖಿಲ ಭಾರತ ಯುವಜನ ಫೆಡರೇಷನ್, ಆಟೋ ಚಾಲಕ ಮಾಲೀಕರು ವರ್ತಕರು, ಸಾರ್ವಜನಿಕರು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹಿರೇಬೈಲಿನಲ್ಲಿ ಸ್ವಯಂ ಘೋಷಿತ ಬಂದ್ ಹಾಗೂ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ಹಿರೇಬೈಲು-ಕರಡಿಗುಡ್ಡ ಹಾಗೂ ಕಳಸ- ಹೊರನಾಡು ರಸ್ತೆ ಡಾಂಬರೀಕರಣಕ್ಕಾಗಿ 5 ಕೋಟಿ 1 ವರ್ಷದಿಂದ ಹಿಂದೇ ಮಂಜೂರಾಗಿತ್ತು. ಆದರೆ, ಅಧಿಕಾರಿಗಳ ಬೇಜಾವಾಬ್ದಾರಿ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಪ್ರಾರಂಭವಾಗದೆ ಉಳಿದಿದೆ. ಸಾರ್ವಜನಿಕರು ಓಡಾಡಲು ಅನಾನುಕೂಲವಾಗಿರುವ ರಸ್ತೆಯಾಗಿದ್ದು, ತಾಲೂಕಿನ ಯಾವ ಮೂಲೆಗೆ ಹೋದರೂ ಅತ್ಯಂತ ಕೆಟ್ಟ ರಸ್ತೆಗಳು ಕಾಣಸಿಗುತ್ತವೆ. ಇದು ಇಲ್ಲಿಯ ಜನ ಪ್ರತಿನಿಧಿಗಳ ದೌರ್ಬಲ್ಯವನ್ನು ತೋರಿಸುತ್ತದೆ ಎಂದರು.
ಅಧಿಕಾರಿಗಳ ನಿರ್ಲಕ್ಷ್ಯ:  ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಕಳೆದ 8 ತಿಂಗಳ ಹಿಂದೆ ಸಿಪಿಐ ಪಕ್ಷ ವೈದ್ಯಾಧಿಕಾರಿಗಳ ನೇಮಕಕ್ಕಾಗಿ ಪ್ರತಿಭಟನೆ ನಡೆಸಿತ್ತು. ಆಗ ವೈದ್ಯರನ್ನು ನೇಮಿಸುವ ಭರವಸೆಯನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಭರವಸೆ ನೀಡಿದ್ದರು. ಆದರೆ, ಈ ಭರವಸೆ ಇನ್ನೂ ಈಡೇರದೇ ಹಾಗೇ ಉಳಿದಿದೆ. ಜನ ಸ್ನೇಹಿ ಅಧಿಕಾರಿಗಳು ತಾಲೂಕಿನಲ್ಲಿ ಇಲ್ಲ. ಆದ್ದರಿಂದ ಇನ್ನು ಕಾಯುವ ಸಹನೆ ನಮ್ಮಲ್ಲಿಲ್ಲ. ಆ ಕಾರಣಕ್ಕಾಗಿ ಪ್ರತಿಭಟನೆ ಹಾದಿ ತುಳಿದಿದ್ದೇವೆ. ಪ್ರತಿಭಟನೆ ಮಾಡದೆ ಇದ್ದಲ್ಲಿ ಯಾವುದೇ ಕೆಲಸ ಕೂಡ ಮೂಡಿಗೆರೆ ತಾಲೂಕಿನಲ್ಲಿ ಆಗುತ್ತಿಲ್ಲ ಎಂದು ಸಿಪಿಐ ತಾಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ ಹೇಳಿದರು.
21ರಿಂದ ಕಾಮಗಾರಿ:  ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಹಾಗೂ ಕಳಸ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿದಾಗ ಪ್ರತಿಭಟನಾಕಾರರು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಂತರ ಅಧಿಕಾರಿಗಳು ಜ.21ನೇ ತಾರೀಕಿನಿಂದ ಹೊರನಾಡಿನಿಂದ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡುತ್ತೇವೆ ಎಂದು ತಿಳಿಸಿದರು. ಆಗ ಪ್ರತಿಭಟನಾಕಾರರು ಹಿರೇಬೈಲಿನಿಂದಲೇ ಕೆಲಸ ಪ್ರಾರಂಭ ಮಾಡಬೇಕು ಎಂದು ಪಟ್ಟು ಹಿಡಿದರು. ಒತ್ತಡಕ್ಕೆ ಮಣಿದ ಅಧಿಕಾರಿಗಳು 21ರಂದು ಹಿರೆಬೈಲಿನಿಂದ ಕೆಲಸ ಪ್ರಾರಂಭ ಮಾಡುವುದಾಗಿ ಭರವಸೆ ನೀಡಿದರು.
ಅಸಮರ್ಪಕ ಸೇವೆ:  ಕಳಸ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಮಾನಸ ಮಾತನಾಡಿ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಅನಾರೋಗ್ಯ ನಿಮಿತ್ತ ತಮ್ಮನ್ನು ಇಲ್ಲಿಗೆ ಕಳಿಸಿದ್ದಾರೆ. ತಾಲೂಕಿನಾದ್ಯಂತ ವೈದ್ಯರ ಸಮಸ್ಯೆ ಇದ್ದು 26 ವೈದ್ಯರ ಅಗತ್ಯವಿದೆ. ಆದರೆ, ಈಗ ಪ್ರಸ್ತುತ 8 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಇಲ್ಲಿ ವೈದ್ಯರನ್ನು ನೇಮಿಸಲು ಸಾಧ್ಯವಿಲ್ಲ. ಆದ್ದರಿಂದ ವಾರಕ್ಕೆ 2 ದಿನ ಡಾ. ಸಂದೀಪ್ ಹಾಗೂ ಡಾ. ನವೀನ್ ಅವರು ಈಗಾಗಲೇ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ಅವರು ಇಲ್ಲಿ ಸರಿಯಾಗಿ ಕಾರ್ಯನಿರ್ವ್ವಹಿಸುತ್ತಿಲ್ಲ ಎಂದು ದೂರಿದರು.
ಸಿಪಿಐ ಮುಖಂಡ ಲಕ್ಷ್ಮಣಾಚಾರ್ ಮಾತನಾಡಿ, ಅಧಿಕಾರಿಗಳು ಕೊಟ್ಟ ಮಾತಿಗೆ ಈ ಪ್ರತಿಭಟನೆಯನ್ನು ಹಿಂದೆ ಪಡೆಯುತ್ತಿದ್ದೇವೆ. ಒಂದು ವೇಳೆ 21ರಂದು ಕೆಲಸ ಪ್ರಾರಂಭ ಮಾಡದೇ ಇದ್ದ ಪಕ್ಷದಲ್ಲಿ ರಸ್ತೆಗೆ ಗೋಡೆ ಕಟ್ಟಿ ಬಂದ್ ಮಾಡುವ ಎಚ್ಚರಿಕೆ ನೀಡಿದರು.
ಹಿರೇಬೈಲಿನಲ್ಲಿ ಬೆಳಗ್ಗೆಯಿಂದಲೇ ಸ್ವಯಂ ಘೋಷಿತ ಬಂದ್ ಮಾಡಿದ್ದರು. ಬ್ಯಾಂಕ್, ಅಂಗಡಿ ಮುಂಗಟ್ಟುಗಳು, ಹೊಟೇಲ್ಗಳು ಬಂದ್ ಆಗಿತ್ತು. ಪ್ರತಿಭಟನಾಕಾರರು ರಸ್ತೆ ತಡೆ, ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭ ರಮೇಶ್ ಸುಂಕಸಾಲೆ, ರವಿ, ಕಿರಣ ಶೆಟ್ಟಿ, ಸುರೇಶ್ ಭಂಡಾರಿ, ಉಮೆಶ್,ಅಲೆಕ್ಸ್, ರವಿ, ರಘರಾಮ ಶೆಟ್ಟಿ, ಅಣ್ಣಪ್ಪ. ವಜೀರ್ ಹಾಗೂ ವಿವಿಧ ಪಕ್ಷ, ಸಂಘ ಸಂಸ್ಥೆಗಳ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.