ಚಿಕ್ಕಮಗಳೂರು

2.66 ಕೋಟಿ ಅನುದಾನ ಕೋರಿ ಪ್ರಸ್ತಾವನೆ

Published On :

ಕ.ಪ್ರ.ವಾರ್ತೆ, ಕಡೂರು, ಜ.21
ತಾಲೂಕಿನಲ್ಲಿ 160 ಗ್ರಾಮಗಳ ನೀರಿನ ಅಭಾವ ನೀಗಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ 2.66 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ವೈಎಸ್ವಿ ದತ್ತ ಹೇಳಿದರು.
ಇಲ್ಲಿನ ಕಡೂರು ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬರ ಹಿನ್ನೆಲೆಯಲ್ಲಿ ನಡೆದ ಟಾಸ್ಕ್ಫೋರ್ಸ್ ಸಭೆಯಲ್ಲಿ ಪಿಡಿಒಗಳು ಹಾಗೂ ಎಂಜಿನಿಯರ್ ಮತ್ತಿತರ ಅಧಿಕಾರಿಗಳೊಂದಿಗೆ ಸಮಸ್ಯೆಗಳ ಪರಿಹಾರ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಆರಂಭದಲ್ಲಿ ಜಿ.ಪ. ಅಧಿಕಾರಿ ಪ್ರಭಾಕರರಾವ್ ಮಾಹಿತಿ ನೀಡಿ, 59 ಗ್ರಾಮ ಪಂಚಾಯ್ತಿ ಪೈಕಿ 160 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಕ್ರಿಯಾಶೀಲ ಯೋಜನೆ ರೂಪಿಸಲಾಗಿದೆ. 6 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇತ್ತ ಬೀರೂರು ಪುರಸಭೆಯಲ್ಲಿ ಟ್ಯಾಂಕರ್ ಮೂಲಕ ನೀರು ನೀಡುತ್ತಿದೆ.  22 ಹೊಸ ಕೊಳವೆಬಾವಿ ಅವಶ್ಯಕತೆ ಇದೆ. ಕಡೂರಿನಲ್ಲಿ 5 ಕೊಳವೆಬಾವಿಗಳ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಆಗ ತಹಸೀಲ್ದಾರ್ ತಿಮ್ಮಾಭೋವಿ ಅವರು, ಟ್ಯಾಂಕರ್ ಮೂಲಕ ನೀರು ಸರಹಬರಾಜಿಗೆ ಹಣ ನೀಡಲು ಅವಕಾಶವಿಲ್ಲ ಎಂದಾಗ, ಮುಖ್ಯಾಧಿಕಾರಿ ಬೀರೂರು ಪುರಸಭೆಯಲ್ಲಿ ಪುರಸಭಾ ನಿಧಿಯಿಂದ ಅವಕಾಶ ಮಾಡಿಕೊಳ್ಳಲಾಗುತ್ತಿದೆ ಎಂದು ಉತ್ತರಿಸಿದರು. ಕಡೂರಿನಲ್ಲೂ ಇದೇ ಪದ್ಧತಿ ಅಳವಡಿಸಿಕೊಳ್ಳುವಂತೆ ದತ್ತ ಸೂಚಿಸಿ, ಶಿಘ್ರದಲ್ಲೇ ಭದ್ರಾ ನದಿಯಿಂದ ನೀರು ಬರುವುದರಿಂದ ಸಾಕಷ್ಟು ನೀರಿನ ಸಮಸ್ಯೆ ನೀಗಲಿದೆ ಎಂದರು.
ಗ್ರಾಮ ಪಂಚಾಯ್ತಿಗಳ ಪಿಡಿಒಗಳು ನೀಡಿದ ಮಾಹಿತಿಯಂತೆ ತಾಲೂಕಿನ ಕೆ.ಬಿದರೆ, ರಂಗಾಪುರ, ಹುಲ್ಲೇಹಳ್ಳಿ,ದೋಗೀಹಳ್ಳಿ, ಕೆ.ದಾಸರಹಳ್ಳಿ, ಚಟ್ಟನಹಳ್ಳಿ, ಡಿ.ಹೊಸಳ್ಳಿ, ರಂಗನಾಥಪುರ, ಮಂಜುನಾಥಪುರ, ಹರುವನಹಳ್ಳಿ, ಬಿಸಲೆರೆ, ಎಮ್ಮೇದೊಡ್ಡಿ, ಕಸಬಾ ಹೋಬಳಿಯ ಮಲ್ಲಪ್ಪನಹಳ್ಳಿ ದೇವರಕಾರೇಹಳ್ಳಿ, ಸಂತೆಕೆರೆ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಇರುವುದರಿಂದ ಹೊಸ ಕೊಳವೆಬಾವಿ ಕೊರಸಬೇಕಿದೆ. ಹಾಗೂ ಯಳ್ಳಬಂಳಸೆ, ಕಲ್ಕೆರೆ ಮತ್ತಿತರ ಕಡೆ ನೀರಿದ್ದರೂ ಕೂಡ ಮೆಸ್ಕಾಂನವರ ಅಸಹಕಾರದಿಂದ ಕೆಲವೆಡೆ ನೀರಿದ್ದರೂ ಸಹ ಜನರಿಗೆ ನೀರು ನೀಡಲಾಗುತ್ತಿಲ್ಲ ಎಂದರು.
ಆಗ ಗರಂ ಆದ ದತ್ತ ಅವರು, ಈ ಬಗ್ಗೆ ಮೆಸ್ಕಾಂನವರು ಸರಿಯಾಗಿ ಕ್ರಮ ಕೈಗೊಂಡು ಅಧಿಕಾರಿಗಳೊಂದಿಗೆ ಪರಸ್ಪರ ಸೌಹಾರ್ದದಿಂದ ಜನರಿಗೆ ನೀರಿಗೆ ತೊಂದರೆ ಆಗದಂತೆ ಸಹಕರಿಸಬೇಕು. ಹೊಸ ಕೊಳವೆಬಾವಿಗಳಿಗೆ ಸರ್ಕಾರದಿಂದ ಅನುದಾನ ತರುತ್ತೇನೆ. ಅದರೆ ಗ್ರಾಪಂ ಮತ್ತು ಜಿ.ಪಂ ಎಂಜಿನಿಯರಿಂಗ್ ನೀರಿನ ತೀವ್ರತೆ ಇರುವ ಕಡೆ ಹೊಸ ಕೊಳವೆಬಾವಿ ಕೊರೆಸಿ ನೀರು ನೀಡಬೇಕು. ಇದಕ್ಕೆ ಮೆಸ್ಕಾಂ ಇಲಾಖೆ ಅಧಿಕಾರಿಗಳು ಸಹಕರಿಸಬೇಕು. ತಾವು ಚುನಾವಣೆಗೆ ನನ್ನ ತಮ್ಮ
ವೈಯಕ್ತಿಕ ಹಿತದೃಷ್ಟಿಯಿಂದ ಕೊರೆಸಿರುವ ಕೊಳವೆಬಾವಿಗಳಿಗೆ ಬಿಲ್ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಗುತ್ತಿಗೆದಾರರಿಗೆ ಬಿಲ್ ನೀಡಿದ ಪ್ರಕರಣ ಕಂಡುಬಂದಲ್ಲಿ ಕಠಿಣ ಕ್ರರ್ಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಇನ್ನು ಜಾನುವಾರುಗಳಿಗೆ ಮೇವಿನ ಬಗ್ಗೆ ಪಶು ವೈದ್ಯಕೀಯ ನಿರ್ದೇಶಕ ಲಿಂಗರಾಜು ಮಾಹಿತಿ ನೀಡಿ, 6 ತಿಂಗಳಿಗೆ ಆಗುವಷ್ಟು ಮೇವಿನ ದಾಸ್ತಾನು ಇದೆ. 160 ಟನ್ ಮೇವು ಇಲಾಖೆಯಲ್ಲಿದೆ. 1875 ಲಕ್ಷ ಟನ್ ಮೇವು ರೈತರ ಬಳಿಯಿದೆ ಎಂದು ಮಾಹಿತಿ ನೀಡಿದರು.
ನಂತರ ಮಾತನಾಡಿದ ದತ್ತ, ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಿ ಬರಲಿರುವ ಬರವನ್ನು ಸಮರ್ಪಕವಾಗಿ ಎದುರಿಸಲು ಸಜ್ಜಾಗಬೇಕು. ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿರುವುದರಿಂದ ಸಾಕಷ್ಚು ಸವಲತ್ತು ಬರಲಿವೆ.
ಕಡೂರು ಕ್ಷೇತ್ರದಲ್ಲಿ 83 ಗ್ರಾಮ ಚಿಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 42 ಗ್ರಾಮಗಳು ನೀರಿನ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಎರಡೂ ವಿಧಾನಸಭಾ ಕ್ಷೇತ್ರ ಸೇರಿದಂತೆ ಕುಡಿವ ನೀರಿಗಾಗಿ ಒಟ್ಟು 2.66 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ಷೇತ್ರದ 40 ಗ್ರಾ.ಪಂ. ಕಡೂರು ಕ್ಷೇತ್ರದ 960 ಬಸವ ಯೋಜನೆಯ ಫಳಾನುಭವಿಗಳ ಅಂತಿಮ ಪಟ್ಟಿಯನ್ನು 24ರಂದು ತಾ.ಪಂ. ಸಲ್ಲಿಸಲಾಗುವುದು ಎಂದು ದತ್ತ ಹೇಳಿದರು.
ಸಭೆಯಲ್ಲಿ ತಹಸೀಲ್ದಾರ್ ತಿಮ್ಮಾಭೋವಿ, ತಾಪಂ ಇಒ ಮೂಕಪ್ಪಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.