ಚಿಕ್ಕಮಗಳೂರು

ಮಿನಿ ವಿಧಾನಸೌಧ ಕೆಲಸ ಸರಿಯಿಲ್ಲ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.31
ಇಲ್ಲಿನ ಹಳೇ ತಾಲೂಕು ಕಚೇರಿ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧ ಕಟ್ಟಡದ ಕಾಮಗಾರಿ ವ್ಯವಸ್ಥಿತವಾಗಿ ನಡೆಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ಅಸಮಾಧಾನ ಹೊರಹಾಕಿದ್ದಾರೆ.
ಶುಕ್ರವಾರ ಸಂಜೆ ಮಿನಿ ವಿಧಾನಸೌಧ ಕಟ್ಟಡ ಪರಿಶೀಲನೆ ನಡೆಸಿದ ಅವರು ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಮಾದರಿ ನೋಡಿದರೆ ವ್ಯವಸ್ಥಿತವಾಗಿ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದರು.
ಕಟ್ಟಡದ ಕಾಮಗಾರಿ ನಡೆಯುವಾಗ ಸಂಬಂಧಪಟ್ಟ ಅಧಿಕಾರಿಗಳು ಆಗಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಟ್ಟಡ ಒಮ್ಮೆ ನಿರ್ಮಾಣವಾಗುವುದು. ಕಾಮಗಾರಿ ವೀಕ್ಷಿಸಿ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಟ್ಟಡದ ಪ್ರವೇಶ ದ್ವಾರದ ಬಳಿ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ತಹಸೀಲ್ದಾರ್ ಅವರ ಕೊಠಡಿ, ಕಟ್ಟಡದ ಪ್ರವೇಶ ದ್ವಾರದಲ್ಲಿರಬೇಕು. ಆದರೆ, ಈ ಕೊಠಡಿಯನ್ನು ಹಿಂಭಾಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಕಂದಾಯ ಶಾಖೆ, ಚುನಾವಣಾ ಹಾಗೂ ಆಹಾರ ಶಾಖೆಗಳ ಕೊಠಡಿಗಳು ವ್ಯವಸ್ಥಿತವಾಗಿರಬೇಕು. ಸಿಬ್ಬಂದಿ ಒಂದೇ ಕಡೆಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯಾಗಬೇಕು. ಆದರೆ, ಇದೀಗ ನಿರ್ಮಾಣಗೊಂಡಿರುವ ಕಟ್ಟಡದಲ್ಲಿ ಈ ಮಾದರಿಯನ್ನು ಅನುಸರಿಸಿದಂತೆ ಕಂಡು ಬರುತ್ತಿಲ್ಲ ಎಂದರು.
ಪ್ರಸ್ತಾವನೆ: ಈ ಕಟ್ಟಡದ ನಿರ್ಮಾಣಕ್ಕೆ ಸರ್ಕಾರ ಎರಡೂವರೆ ಕೋಟಿ ರುಪಾಯಿ ಬಿಡುಗಡೆ ಮಾಡಿದ್ದು, ಈವರೆಗೆ ಕಟ್ಟಡದ ಮೊದಲ ಅಂತಸ್ತಿನ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಹಣವನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗುವುದು. ಮೇಲಿನ ಅಂತಸ್ತು ನಿರ್ಮಾಣ ಮಾಡಬೇಕಾದರೆ ಕ್ರಮಬದ್ಧತೆ ಅನುಸರಿಸಬೇಕು. ಈ ಕಟ್ಟಡ ರಾಜ್ಯಕ್ಕೆ ಮಾದರಿಯಾಗಿರುವಂತೆ ನೋಡಿಕೊಳ್ಳಬೇಕು.
ಹಾಲಿ ಕಟ್ಟಡದ ಕ್ರಮಬದ್ಧತೆ ನೋಡಿದರೆ ಸರಿ ಕಂಡು ಬರುತ್ತಿಲ್ಲ. ಈ ಕಟ್ಟಡದ ನಿರ್ಮಾಣದ ಸ್ಥಿತಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಇಲ್ಲಿಗೆ ಬರುವ ಜಿಲ್ಲಾಧಿಕಾರಿಗಳು ಹಾಲಿ ಇರುವ ಅಧಿಕಾರಿಗಳ ಬಗ್ಗೆ ಮಾತನಾಡಲು ಅವಕಾಶ ಮಾಡಿಕೊಡದಂತೆ ವ್ಯವಸ್ಥಿತವಾಗಿ ಕಟ್ಟಡ ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಶಿವೇಗೌಡ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.