ಚಿಕ್ಕಮಗಳೂರು

ಸಾಧನೆಗೆ ಮುಂದಾಲೋಚನೆ ಅವಶ್ಯ

Published On :

ಚಿಕ್ಕಮಗಳೂರು: ಬುದ್ಧಿವಂತಿಕೆ ಮತ್ತು ಮುಂದಾಲೋಚನೆ ಇದ್ದಲ್ಲಿ ಸಾಧನೆ ಮಾಡಲು ವಿಫುಲ ಅವಕಾಶಗಳಿವೆ ಎಂದು ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ಬರಾಯ ಹೇಳಿದರು.
ಚಿಕ್ಕಮಗಳೂರು ಕ್ಲಬ್‌ನಲ್ಲಿ ಎಂಸಿ ಇನ್ವೆಸ್ಟ್‌ಮೆಂಟ್ ಆಯೋಜಿಸಿದ್ದ ಹೂಡಿಕೆದಾರರ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆಲ್ಲ ಸಾವಿರಾರು ಎಕರೆ ಜಮೀನು ಹೊಂದಿದ್ದವರನ್ನು ಶ್ರೀಮಂತರು ಎಂದು ಕರೆಯಲಾಗುತ್ತಿತ್ತು. ಆದರೆ, ಇಂದು ಜ್ಞಾನ, ಬುದ್ಧಿವಂತಿಕೆ ಹೊಂದಿದವರನ್ನು ಶ್ರೀಮಂತರು ಎಂದು ಕರೆಯಲಾಗುತ್ತಿದೆ. ಹೊಸ, ಹೊಸ  ಆವಿಷ್ಕಾರಗಳು ದಿನದಿಂದ ದಿನಕ್ಕೆ ವ್ಯಾಪಕವಾಗಿ ನಡೆಯುತ್ತಿವೆ. ಬುದ್ಧಿವಂತಿಕೆ, ಜ್ಞಾನಕ್ಕೆ ಜಗತ್ತಿನಾದ್ಯಂತ ಹೆಚ್ಚಿನ ಮೌಲ್ಯ ಇದೆ ಎಂದರು.
ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತರು ಇದ್ದಾರೆ. ಆದರೆ, ಅವರು ಯಾವುದೇ ಕಷ್ಟ, ಗಂಡಾಂತರ, ಅಪಾಯಗಳನ್ನು ಎದುರಿಸಲು ಸಿದ್ಧರಿಲ್ಲ. ಅದರಿಂದಾಗಿ ತಮ್ಮ ಬುದ್ಧಿವಂತಿಕೆ, ಜ್ಞಾನದಿಂದ ಜಗತ್ತಿನ ಪ್ರಸ್ತುತ ಸ್ಥಿತಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಬುದ್ಧಿವಂತಿಕೆ, ಮುಂದಾಲೋನೆಯ ವ್ಯವಹಾರಕ್ಕೆ ತಾಂತ್ರಿಕತೆ ದೊಡ್ಡ ಪ್ರಮಾಣದಲ್ಲಿ ಸಹಕಾರಿಯಾಗುತ್ತದೆ. ಅದಕ್ಕೆ ಎಲ್ಲ ಹೂಡಿಕೆದಾರರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಆನ್‌ಲೈನ್ ವ್ಯವಹಾರದಲ್ಲಿ ದೊಡ್ಡ ಕ್ರಾಂತಿ:  ಆನ್‌ಲೈನ್ ವ್ಯವಹಾರದಲ್ಲಿ ಇಂದು ದೊಡ್ಡ ಕ್ರಾಂತಿಯಾಗಿದೆ. ತಾವಿದ್ದಲ್ಲಿಯೇ ಕುಳಿತು ವ್ಯವಹಾರ ನಡೆಸಬಹುದಾಗಿದೆ. ಇದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭವನ್ನು ಗಳಿಸಬಹುದಾಗಿದೆ. ಆದರೆ, ಬುದ್ಧಿವಂತಿಕೆ ಮತ್ತು ಮುಂದಾಲೋಚನೆ ಇರಬೇಕು. ಹಣಕಾಸು ಬಗ್ಗೆ ದೂರದೃಷ್ಟಿ ಇದ್ದಲ್ಲಿ ನಿರ್ವಹಣೆ ಸುಲಭವಾಗುತ್ತದೆ ಎಂದ ಅವರು, ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸಲು, ಅಗತ್ಯ ಮಾಹಿತಿಗಳನ್ನು ನೀಡಲು ಈ ಸಮಾವೇಶ ಸಹಕಾರಿಯಾಗಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಎಂಸಿ ಇನ್ವೆಸ್ಟ್‌ಮೆಂಟ್ ಮುಖ್ಯಸ್ಥ ಸುಜಿತ್ ಬಿಳಿಯಪ್ಪಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಇಂಥಾ ಮತ್ತೊಂದು ಸಮಾವೇಶ ನಡೆಸಿ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.
ಎನ್‌ಸಿಡಿ ಇಎಕ್ಸ್ ವಿಜಯ್ ಗೋಪಿನಾಥನ್, ದೆಹಲಿಯಿಂದ ಆಗಮಿಸಿದ್ದ ತರುಣ್ ಕಟೋಜ್, ಏಂಜಲ್ ಕಮಾಡಿಟಿಸ್‌ನ ದಕ್ಷಿಣ ಭಾರತದ ಮಾರುಕಟ್ಟೆ ಅಧಿಕಾರಿ ವೆಂಕಟಾಚಲಪತಿ, ಫಾರ್ವರ್ಡ್ ಮಾರ್ಕೆಟ್ಸ್ ಕಮಿಷನ್ ನ ಮಾರುಕಟ್ಟೆ ಅಧಿಕಾರಿ ಷೇರು ಮಾರುಕಟ್ಟೆ ಮತ್ತು ಇಂದಿನ ಪರಿಸ್ಥಿತಿ ಕುರಿತು ಉಪನ್ಯಾಸ ನೀಡಿದರು. ಜೊತೆಗೆ ಹೂಡಿಕೆದಾರರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ರೇಖಾ ಪ್ರೇಮಕುಮಾರ್ ನಿರೂಪಿಸಿದರು.
ನಗರ ಮತ್ತು ಜಿಲ್ಲೆಯ ವಿವಿಧ ಕಡೆಗಳಿಂದ ಹೂಡಿಕೆದಾರರ ದಂಡು ಹರಿದು ಬಂದಿತ್ತು. ಎನ್‌ಸಿಡಿ ಇಎಕ್ಸ್, ಏಂಜಲ್ ಕಮಾಡಿಟಿಸ್, ಫಾರ್ವರ್ಡ್ ಮಾರ್ಕೆಟ್ಸ್ ಕಮಿಷನ್ ಸಂಸ್ಥೆಗಳು ಸಹಪ್ರಾಯೋಜಕತ್ವ ವಹಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.