ಕುದುರೆಮುಖದಲ್ಲಿ ಪರಿಸರ ಪ್ರವಾಸೋದ್ಯಮ ತುದಿಗಾಲಲ್ಲಿ ನಿಂತಿರುವ ಕೆಐಓಸಿಎಲ್
ಆರ್.ತಾರಾನಾಥ್
ಚಿಕ್ಕಮಗಳೂರು: ಕುದುರೆಮುಖದಲ್ಲಿ ಗಣಿಗಾರಿಕೆ ನಿಂತು 9 ವರ್ಷ ಕಳೆದರೂ ಸಹ ಇಲ್ಲಿನ ನೆಲದ ಸಂಬಂಧವನ್ನು ಕಳೆದುಕೊಳ್ಳಲು ಕುದುರೆಮುಖ ಅದಿರು ಸಂಸ್ಥೆ ಸಿದ್ಧವಿಲ್ಲ.
ಇಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬೇಕು. ಇದಕ್ಕಾಗಿ ಕುದುರೆಮುಖ ಸಂಸ್ಥೆಯಿಂದ ಹಿಂದಕ್ಕೆ ಪಡೆದಿರುವ 2332.16 ಎಕರೆ ಕಂದಾಯ ಭೂಮಿಯನ್ನು ತಮ್ಮ ಸಂಸ್ಥೆಗೆ 30 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ವಾಪಸ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಕುದುರೆಮುಖದಲ್ಲಿ ಅದಿರು ಗಣಿಗಾರಿಕೆ ನಡೆಸಲು ಕುದುರೆಮುಖ ಅದಿರು ಸಂಸ್ಥೆ 1969ರಲ್ಲಿ ಅರಣ್ಯ, ಕಂದಾಯ ಭೂಮಿ ಸೇರಿದಂತೆ 4605.02 ಎಕರೆ ಭೂಮಿಯನ್ನು 30 ವರ್ಷದ ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿತ್ತು. 30 ವರ್ಷ ಕಾಲಾವಧಿ ಮುಗಿದ ಬಳಿಕ ಮತ್ತೆ ಪ್ರತಿ 5 ವರ್ಷಕ್ಕೊಮ್ಮೆ ಈ ಭೂಮಿಯನ್ನು ತನ್ನ ಅಧೀನದಲ್ಲಿಯೇ ಇರುವಂತೆ ಸರ್ಕಾರದಿಂದ ಗುತ್ತಿಗೆಯನ್ನು ಮುಂದುವರಿಸಿಕೊಂಡು ಬಂದಿತ್ತು.
ಪಶ್ಚಿಮಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿರುವ ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸುತ್ತಿರುವುದರಿಂದ ನದಿ ಮೂಲಗಳಿಗೆ ಧಕ್ಕೆಯಾಗುತ್ತಿದೆ. ಇಲ್ಲಿನ ಪರಿಸರ ಹಾಳಾಗುತ್ತಿದೆ ಎಂಬ ಅರ್ಜಿಯ ಮೇರೆಗೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಅನ್ವಯ 2005 ಡಿ.31ರಂದು ಗಣಿಗಾರಿಕೆ ಸ್ಥಗಿತಗೊಂಡಿತು.
ಗಣಿಗಾರಿಕೆ ನಿಂತ ಮೇಲೆ ಅರಣ್ಯ ಇಲಾಖೆ ತನ್ನ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿತು. ಕಂದಾಯ ಇಲಾಖೆ ತನ್ನ 2332.16 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ಇಲ್ಲಿನ ಅದಿರು ಉತ್ಪಾದನಾ ಘಟಕವನ್ನು ಮುಂದುವರಿಸಲು ಕಂಪನಿ ಬೇರೆ ಕಡೆಗಳಿಂದ ಅದಿರು ತರುವ ಹಲವು ವರ್ಷಗಳ ಕಾಲ ನಡೆಸಿದ ಪ್ರಯತ್ನ ವಿಫಲವಾಯಿತು. ಇದರಿಂದಾಗಿ ಕಂಪನಿ ಇಲ್ಲಿನ ಉತ್ಪಾದನೆ ಘಟಕದ ಯಂತ್ರಗಳನ್ನು ಚೆನ್ನೈ ಮೂಲದ ಅಣ್ಣಾಂ ಸ್ಟೀಲ್ ಸಂಸ್ಥೆಗೆ ಮಾರಾಟ ಮಾಡಿತು.
ತನ್ನ ಅಧೀನದಲ್ಲಿ ಇರುವ ಭೂಮಿ ಹಾಗೂ ಕಟ್ಟಡಗಳನ್ನು ಬಳಕೆ ಮಾಡಿಕೊಳ್ಳಲು ಕುದುರೆಮುಖದಲ್ಲಿ ಪರಿಸರ ಪ್ರವಾಸೋದ್ಯಮದ ಬಗ್ಗೆ ಕಂಪನಿ ಆಸಕ್ತಿ ತೋರಿದ್ದು, ಇದಕ್ಕಾಗಿ ತನ್ನಿಂದ ವಾಪಸ್ ಪಡೆದುಕೊಂಡಿರುವ ಕಂದಾಯ ಭೂಮಿಯನ್ನು ವಾಪಸ್ ನೀಡುವಂತೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಮಲಯ್ ಚಟರ್ಜಿ ಅವರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.
ಈ ಪ್ರಸ್ತಾವನೆ ಸರ್ಕಾರದ ಕೈಗೆ ಸೇರುತ್ತಿದ್ದಂತೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸದ್ಯ ಈ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ.
ಜಾಗ ಬೇಕು, ಜನರು ಬೇಡ: ಕುದುರೆಮುಖ ಅದಿರು ಸಂಸ್ಥೆಗೆ ಇಲ್ಲಿನ ಕಂದಾಯ ಭೂಮಿ ಬೇಕು. ಆದರೆ, ಜನರು ಬೇಡವಾಗಿದ್ದಾರೆ. ಗಣಿಗಾರಿಕೆ ನಿಂತು 9 ವರ್ಷ ಕಳೆದರೂ ಜನರು ಊರು ಬಿಟ್ಟಿಲ್ಲ. ಇಲ್ಲಿನ ಜನರ ಹಿತರಕ್ಷಣೆ ಬಗ್ಗೆ ಕಂಪನಿಗೆ ಕಾಳಜಿ ಇಲ್ಲದಂತಾಗಿದೆ. ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭ ತಾನೇ ಕೇಂದ್ರೀಯ ವಿದ್ಯಾಲಯ ಸಂಘಟನ್ನಿಂದ ಮಂಜೂರು ಮಾಡಿಸಿಕೊಂಡು ಬಂದಿರುವ ಶಾಲೆಯನ್ನು ಆರ್ಥಿಕ ಕಾರಣವನ್ನು ನೀಡಿ ಮುಚ್ಚುವ ತೀರ್ಮಾನಕ್ಕೆ ಬಂದು, ಈ ಪ್ರಯತ್ನದಲ್ಲಿ ಯಶಸ್ವಿಯಾಗಿದೆ.
ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಇಂದಿಗೂ ಸಹ ಅತಂತ್ರದಲ್ಲಿದ್ದಾರೆ. ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಿದೆ. ಮಕ್ಕಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಿ ಶಾಲೆಯನ್ನು ನಡೆಸಿಕೊಂಡು ಬರುತ್ತಿದೆ. ಇಲ್ಲಿನ ಜನರ ಬಗ್ಗೆ ಕಾಳಜಿ ಇಲ್ಲದ ಕುದುರೆಮುಖ ಅದಿರು ಸಂಸ್ಥೆ ಇಲ್ಲಿನ ನೆಲದ ಮೇಲೆ ಕಣ್ಣಿಟ್ಟಿದೆ.
ಕರ್ನಾಟಕ ರಾಜ್ಯ ಶಿಕ್ಷಣ ಕಾಯ್ದೆಯ ಪ್ರಕಾರ ಕೇಂದ್ರೀಯ ವಿದ್ಯಾಲಯವನ್ನು ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಇಲ್ಲ. ಶಾಲೆ ಮುಂದುವರಿಕೆಗೆ ಸರ್ಕಾರ ಮಾಡಿದ ಮನವಿಗೆ ಕಂಪನಿ ಸ್ಪಂದಿಸಿಲ್ಲ. ಕುದುರೆಮುಖ ಅದಿರು ಕಂಪನಿಗೆ ಪರಿಸರ ಪ್ರವಾಸೋದ್ಯಮಕ್ಕೆ ಕಂದಾಯ ಭೂಮಿ ಕೇಳುವ ಯಾವುದೇ ನೈತಿಕತೆ ಇಲ್ಲ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಇರುವ ಕುದುರೆಮುಖದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದ್ದೆಯಾದರೆ, ಪ್ರವಾಸಕ್ಕಾಗಿ ದೇಶ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲಿದ್ದಾರೆ. ಇದರಿಂದಾಗಿ ಇಲ್ಲಿನ ಪರಿಸರ ಮತ್ತಷ್ಟು ಹಾಳಾಗಲಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಗಣಿಗಾರಿಕೆ ಸ್ಥಗಿತಗೊಂಡಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಮತ್ತಷ್ಟು ಹಾಳಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

