ಚಿಕ್ಕಮಗಳೂರು

ಕಾಡಿನಿಂದ ಪಟ್ಟಣ ಪ್ರವೇಶಿಸಿದ್ದ ಜಿಂಕೆಗೆ ಹೃದಯಾಘಾತ, ಸಾವು

Published On :

ಬಾಳೆಹೊನ್ನೂರು: ಸಮೀಪದ ಬೈರೇಗುಡ್ಡ ಬಳಿ ಕಾಡಿನಿಂದ ಸ್ಥಳೀಯ ತೋಟಕ್ಕೆ ಬಂದ ಜಿಂಕೆ ನಂತರ ಪಟ್ಟಣದೊಳಗೆ ಪ್ರವೇಶಿಸಿ ಪ್ರಾಣ ಬಿಟ್ಟ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಬೈರೇಗುಡ್ಡದ ತೋಟವೊಂದರಲ್ಲಿ ಮೇವನ್ನು ಅರಸಿ ಬಂದ 3 ವರ್ಷದ ಜಿಂಕೆ ಸಮೀಪದ ಇದ್ದ ಗದ್ದೆಯೊಂದರಲ್ಲಿ ಇದ್ದುದನ್ನು ಕಂಡ ನಾಯಿಗಳು ಅಟ್ಟಿಸಿಕೊಂಡು ಬಂದಾಗ ಜಿಂಕೆ ಪಟ್ಟಣದ ಮುಖ್ಯರಸ್ತೆಯ ಬಳಿ ಪ್ರವೇಶಿಸಿತು. ಬಳಿಕ ಕೆಳಗಿನ ಪೇಟೆಯ ರೋಟರಿ ವೃತ್ತದ ಮೂಲಕ ಚರ್ಚ್ ರಸ್ತೆ ಸಂಪರ್ಕಿಸುವ ಬೈಪಾಸ್ ರಸ್ತೆಯಲ್ಲಿ ಬಂದು ನಿರ್ಮಲಾ ಕಾನ್ವೆಂಟ್ ಸಮೀಪ ಸುಸ್ತಾಗಿ ಬಿದ್ದಿತು. ಆ ವೇಳೆಗೆ ಸಾರ್ವಜನಿಕರು ಅದನ್ನು ಹಿಡಿದು ಸ್ಥಳೀಯ ಪಶುವೈದ್ಯ ಆಸ್ಪತ್ರೆಗೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿದರು.
ಬೈರೇಗುಡ್ಡ ಸಮೀಪ ನಾಯಿಗಳು ಅಟ್ಟಿಸಿಕೊಂಡು ಬಂದಾಗ ತೋಟದ ಬೇಲಿ ಹಾರುವಾಗ ಜಿಂಕೆಯ ಬೆನ್ನು, ಹೊಟ್ಟೆಯ ಭಾಗಕ್ಕೆ ಗಾಯಗಳಾಗಿತ್ತು ಹಾಗೂ ಕಾಲಿನ ಒಂದು ಗೊರಸು ಕಿತ್ತು ಹೋಗಿತ್ತು. ಪಶುವೈದ್ಯ ಆಸ್ಪತ್ರೆಯ ಸಿಬ್ಬಂದಿ ಕೆ.ಆರ್. ವಿಠಲ್ ಕುಮಾರ್ ಆರೈಕೆ ಮಾಡಿದರು. ಬಳಿಕ ಅರಣ್ಯಾಧಿಕಾರಿ ಮಾರ್ಗದರ್ಶನ ಪಡೆದು ಮತ್ತೆ ಜಿಂಕೆಯನ್ನು ಅರಣ್ಯಕ್ಕೆ ಬಿಡುವ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದರು. ಆದರೆ, ಪಟ್ಟಣದೊಳಕ್ಕೆ ಪ್ರವೇಶಿಸಿ ಸಾಕಷ್ಟು ಗಾಬರಿಗೊಂಡಿದ್ದ ಜಿಂಕೆ ಚಿಕಿತ್ಸೆ ಪಡೆದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿತ್ತು.
ಪಟ್ಟಣದ ಪಶುವೈದ್ಯ ಆಸ್ಪತ್ರೆ ವೈದ್ಯ ಡಾ. ಧರ್ಮಪ್ಪ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಎಲೆಕಲ್ಲು ಸಮೀಪದ ಅರಣ್ಯದಲ್ಲಿ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ರಂಗಸ್ವಾಮಿ ನೇತೃತ್ವದಲ್ಲಿ ಜಿಂಕೆಯ ಅಂತ್ಯ ಸಂಸ್ಕಾರ ಮಾಡಲಾಯಿತು. ಅರಣ್ಯಾಧಿಕಾರಿ ರಜಿನಿ, ಅರಣ್ಯ ಇಲಾಖೆ ಸಿಬ್ಬಂದಿ ನಾರಾಯಣ, ಜಯಪ್ರಕಾಶ್, ಭೀಮಪ್ಪನಾಯ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.