ಮಲೆನಾಡಿನ ಶಾಲಾ- ಕಾಲೇಜಿಗೆ ರಜೆ
ಚಿಕ್ಕಮಗಳೂರು: ಬಿಡುವು ಕೊಟ್ಟಿದ್ದ ಮಳೆ ಜಿಲ್ಲೆಯಲ್ಲಿ ಬುಧವಾರ ಮತ್ತೆ ಚುರುಕುಗೊಂಡಿದೆ. ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶೃಂಗೇರಿ ಹಾಗೂ ಕೊಪ್ಪ ತಾಲೂಕುಗಳಲ್ಲಿ ಗುರುವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಲೆನಾಡಿನ ಎನ್.ಆರ್. ಪುರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿನ ಶಾಲಾ ಮತ್ತು ಕಾಲೇಜುಗಳಿಗೆ ರಜೆ ನೀಡಲು ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯೋಪಾಧ್ಯಾಯರ ವಿವೇಚನೆಗೆ ಬಿಡಲಾಗಿದೆ ಎಂದು ಎನ್.ಆರ್. ಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಜುಲೈ ತಿಂಗಳ ಮೊದಲ ವಾರದಲ್ಲಿ ಆರಂಭಗೊಂಡಿದ್ದ ಮಳೆ ಸುಮಾರು 20 ದಿನಗಳ ಕಾಲ ಮಲೆನಾಡಿನಲ್ಲಿ ಬಿಡುವಿಲ್ಲದೆ ಸುರಿಯಿತು. ನಂತರದ ದಿನಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿತ್ತಾದರೂ ಆಗಾಗ ಬರುತ್ತಿದ್ದ ತುಂತುರು ಹನಿ ನಿಂತಿರಲಿಲ್ಲ. ಚಿಕ್ಕಮಗಳೂರು, ತರೀಕೆರೆ, ಕಡೂರು ತಾಲೂಕುಗಳು ಸೇರಿದಂತೆ ಮಲೆನಾಡಿನ ತಾಲೂಕುಗಳಲ್ಲೂ ಕಳೆದ ನಾಲ್ಕೈದು ದಿನಗಳಿಂದ ಬಿಸಿಲಿತ್ತು. ಆದರೆ, ಬುಧವಾರ ಮಧ್ಯಾಹ್ನ ದಿಢೀರ್ ಆರಂಭಗೊಂಡ ಮಳೆ ನಿರಂತರವಾಗಿ ಸುರಿಯುತ್ತಿತ್ತು.
ಕಿರಿಕಿರಿ: ಮೋಡ ಕವಿದ ವಾತಾವರಣದ ನಡುವೆ ಬಿಡುವಿಲ್ಲದೆ ಸುರಿದ ಮಳೆ ಜನರಿಗೆ ಕಿರಿಕಿರಿ ಎನಿಸುತ್ತಿದ್ದು, ನಿರಂತರ ಮಳೆಗೆ ರೋಗಬಾಧೆಗೆ ತುತ್ತಾಗಿರುವ ಬೆಳೆಗಳ ಮೇಲೆ ಮತ್ತೆ ಆರಂಭಗೊಂಡಿರುವ ಮಳೆಯಿಂದ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಮಲೆನಾಡಿನಲ್ಲಿ ಮಳೆ ಬೀಳುತ್ತಿರುವುದರಿಂದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಹಳ್ಳಗಳು ತುಂಬಿ ಹರಿಯುತ್ತಿವೆ. ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರು ನೀಡುತ್ತಿರುವ ಹಿರೇಕೊಳಲೆ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ.
ನರಸಿಂಹರಾಜಪುರ
ಎರಡು ದಿನಗಳಿಂದ ಕ್ಷೀಣಿಸಿದ್ದ ಮಳೆಯು ಬುಧವಾರ ಮಧ್ಯಾಹ್ನದ ನಂತರ ತನ್ನ ಆರ್ಭಟ ತೋರಿಸಿತು. ಸಂಜೆಯವರೆಗೂ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ಮಳೆ, ಗಾಳಿಯ ರಭಸಕ್ಕೆ ಜನರು ಮನೆಯಿಂದ ಹೊರಗೆ ಬರದಂತೆ ಮಾಡಿತ್ತು. ಹಳ್ಳಗಳು ಉಕ್ಕೇರಿ ಹರಿದವು. ರಸ್ತೆಗಳಲ್ಲಿ ನೀರು ಹೋಗಲು ಚರಂಡಿ ಸಾಕಾಗದೆ ಅಲ್ಲಲ್ಲಿ ರಸ್ತೆಯ ಮೇಲೆ ನೀರು ನಿಂತಿತ್ತು. ಮಳೆಯಿಂದ ಥಂಡಿ ವಾತಾವರಣ ಉಂಟಾಗಿದೆ.
ಮೂಡಿಗೆರೆ
ತಾಲೂಕಿನಾದ್ಯಂತ ಕುಂಭದ್ರೋಣ ಮಳೆ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಭತ್ತದ ಗದ್ದೆಗಳು ಸಂಪೂರ್ಣ ನೀರಿನಿಂದ ಆವೃತಗೊಂಡಿದೆ. ಹೇಮಾವತಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹಲವು ಮನೆಗಳು ಕುಸಿದಿದ್ದು, ಮರಗಳು ಧರೆಗುರುಳುತ್ತಿರುವ ಕಾರಣ ಸಂಚಾರ ಅಸ್ತವ್ಯಸ್ತಗೊಂಡಿದೆ.
ತಾಲೂಕಿನ ಬಾಳೂರು ಹೋಬಳಿಯ ಮದುಗುಂಡಿ ಎಂಬಲ್ಲಿ ಅನ್ನಪೂರ್ಣ ಎಂಬವರ ಮನೆ ಸಂಪೂರ್ಣ ಕುಸಿದಿದ್ದು, ಲಕ್ಷಾಂತರ ರು. ನಷ್ಟವಾಗಿದೆ. ಬಿದಿರುತಳದಲ್ಲಿ ಸತೀಶ್ ಎಂಬವರ ಮನೆ ಭಾಗಶಃ ಕುಸಿದಿದೆ.
ಘಟನಾ ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಎಂ. ಗಂಗಾಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶೃಂಗೇರಿ
ತಾಲೂಕಿನಾದ್ಯಂತ ಮಂಗಳವಾರ ರಾತ್ರಿಯಿಂದ ಮಳೆಯ ಆರ್ಭಟ ಮತ್ತೆ ಮುಂದುವರಿದಿದೆ.
ಕಳೆದೆರೆಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಬುಧವಾರ ಮಧ್ಯಾಹ್ನದಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿತ್ತು.
ತುಂಗಾ ನದಿಯಲ್ಲಿ ಇಳಿಮುಖವಾಗಿದ್ದ ನೀರಿನ ಪ್ರಮಾಣ ಮತ್ತೆ ಏರತೊಡಗಿದೆ. ಕೆರೆ, ಹಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಅಡಕೆ ತೋಟಗಳಿಗೆ ಔಷಧ ಸಿಂಪಡಣೆ ಮಾಡಲು ಮಳೆಯಿಂದ ಅಡ್ಡಿಯಾಗುತ್ತಿದೆ.
ಬತ್ತದ ನಾಟಿ ಕಾರ್ಯ ಭರದಿಂದ ಸಾಗಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಬುಧವಾರ ಸಂಜೆಯವರೆಗೂ ಮಳೆಯ ಆರ್ಭಟ ಮುಂದುವರಿದಿತ್ತು.
ಮಳೆ ಮಾಹಿತಿ
ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ ಬಿದ್ದಿರುವ ಮಳೆಯ ವಿವರ ಈ ಕೆಳಕಂಡಂತೆ ಇದೆ.
ಕೆ.ಆರ್. ಪೇಟೆ- 2.1 ಮಿಮೀ, ಅತ್ತಿಗುಂಡಿ- 3.3, ಸಂಗಮೇಶ್ವರ ಪೇಟೆ- 1.5, ಬ್ಯಾರವಳ್ಳಿ- 9.3. ಕೊಪ್ಪ- 10, ಹರಿಹರಪುರ- 12.4, ಜಯಪುರ- 13.2, ಕಮ್ಮರಡಿ- 8.9, ಬಸರೀಕಟ್ಟೆ- 55.3, ಮೂಡಿಗೆರೆ- 23.7, ಕೊಟ್ಟಿಗೆಹಾರ- 100, ಜಾವಳ್ಳಿ- 6, ಗೋಣಿಬೀಡು- 21.2, ಕಳಸ- 34, ನರಸಿಂಹರಾಜಪುರ- 6.4, ಬಾಳೆಹೊನ್ನೂರು- 7.2, ಮೇಗರಮಕ್ಕಿ- 15, ಕಿಗ್ಗಾ- 41, ಕೆರೆಕಟ್ಟೆ- 37.4, ಶೃಂಗೇರಿ- 23.8, ಲಕ್ಕವಳ್ಳಿಯಲ್ಲಿ 4.2 ಮಿಮೀ ಮಳೆಯಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

