ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗರಂ
ಕನ್ನಡಪ್ರಭ ವಾರ್ತೆ, ಕಡೂರು, ಜೂ.2
ಲೋಕಸಭಾ ಚುನಾವಣೆಯಿಂದಾಗಿ 2 ತಿಂಗಳು ಮುಂದೂಡಲಾಗಿದ್ದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿ.ಪಂ. ಸಹಾಯಕ ಎಂಜಿನಿಯರುಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಾರ್ಯವೈಖರಿ ಸರಿ ಇಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ತಾಪಂ ಸಾಮಾನ್ಯ ಸಭೆಗೆ ಗೈರು ಹಾಜರಾಗುವುದರ ಜೊತೆಗೆ ಸೂಕ್ತ ಮಾಹಿತಿ ನೀಡಲು ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಜನಪ್ರತಿನಿಧಿಗಳ ಸದಸ್ಯತ್ವಕ್ಕೆ ಬೆಲೆ ಇಲ್ಲವೇ ಎಂದು ಹಲವು ಸದಸ್ಯರು ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡರು. ಮಕ್ಕಳ ಕಲ್ಯಾಣ ಅಧಿಕಾರಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದು ಅವರ ಪರವಾಗಿ ಮಾಹಿತಿ ನೀಡಲು ಸಹಾಯಕರೊಬ್ಬರು ಮುಂದಾದ ವೇಳೆ ಸದಸ್ಯರು, ಸಿಡಿಪಿಒ ಅವರೇ ಮಾಹಿತಿ ಕೊಡಲು ಬರಲಿ ಎಂದು ಆಗ್ರಹಿಸಿದರು.
ಇಒ ಕಾರ್ಯವೈಖರಿ ಸರಿ ಇಲ್ಲ: ತಂಗಲಿ ತಾ.ಪಂ. ಸದಸ್ಯ ಆರ್.ಶಿವಕುಮಾರ್ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆ ಹೆಚ್ಚುತ್ತಿದೆ. ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸದೆ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಪೈಪ್ ಮತ್ತು ವಾಲ್ವ್ಗಳನ್ನು ಮಾರಿಕೊಳ್ಳಲಾಗುತ್ತಿದೆ. ಈ ಕುರಿತು ಹಲವು ಬಾರಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರಿದರೂ ಯಾವ ಕ್ರಮ ವಹಿಸುತ್ತಿಲ್ಲ. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಾರ್ಯವೈಖರಿ ಸಹ ಸರಿ ಇಲ್ಲ ಎಂದು ದೂರಿದರು.
ಹಿರೇನಲ್ಲೂರು ಸದಸ್ಯ ಪ್ರಭುಕುಮಾರ್ ಮತ್ತು ನಿಂಗಪ್ಪ ಗ್ರಾ.ಪಂ.ಗಳಲ್ಲಿ ಬೋರ್ಗಳನ್ನು ಕೊರೆಯುವ ವೇಳೆ ನಮಗೆ ಮಾಹಿತಿ ಇರುವುದಿಲ್ಲ. ನಮ್ಮೂರಲ್ಲಿ ಬೋರ್ ಕೊರೆದರೂ ನಮಗೆ ಗೊತ್ತೇ ಆಗುವುದಿಲ್ಲ. ಒಂದು ಕೊಳವೆಬಾವಿ ಕೊರೆಯಲು ಎಷ್ಟು ಖರ್ಚಾಗುತ್ತಿದೆ ಎಂಬ ವಿವರ ಪಡೆಯಲು ಪಿಡಿಒಗಳು, ಜಿ.ಪಂ. ಎಂಜಿನಿಯರ್ ಮತ್ತು ತಾ.ಪಂ. ಸದಸ್ಯರ ಸಭೆಯನ್ನು ತುರ್ತಾಗಿ ಕರೆಯುವಂತೆ ಆಗ್ರಹಿಸಿದಾಗ, ಜೂ.7 ರಿಂದ 8ನೇ ತಾರೀಖಿನೊಳಗೆ ಕೇಂದ್ರ ತಂಡ ಸಮೀಕ್ಷೆಗೆ ಬರುತ್ತಿದೆ. ಮರುದಿನ 9 ರಂದು ಸಭೆ ಕರೆಯವುದಾಗಿ ಅಧ್ಯಕ್ಷರ ಸಲಹೆ ಮೇರೆಗೆ ಇ.ಒ. ಮೂಕಪ್ಪಗೌಡ ತಿಳಿಸಿದರು.
ಎಮ್ಮೆದೊಡ್ಡಿ ಭಾಗದ ಸದಸ್ಯ ಶಶಿಕುಮಾರ್, ರಸಗೊಬ್ಬರ ಮಾರಾಟಗಾರರು ನಿಗದಿತ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಬಿಲ್ ಕೊಡುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದೀರಿ? ಎಂದಾಗ ಲಿಖಿತ ದೂರು ಕೊಟ್ಟರೆ ಕ್ರಮ ವಹಿಸುವುದಾಗಿ ಕೃಷಿ ಸಹಾಯಕ ನಿರ್ದೇಶಕ ಶಿವಣ್ಣ ತಿಳಿಸಿದರು.
ಮಾಹಿತಿ ಶಿಬಿರ: ಬೀರೂರು ಮೆಸ್ಕಾಂ ವಿಭಾಗದಲ್ಲಿ 30 ಟಿ.ಸಿ. ಹಾಳಾಗಿವೆ. 18 ಟಿಸಿ ಬದಲಾಯಿಸಿಕೊಟ್ಟಿದ್ದು ಅಳವಡಿಕೆ ನಡೆದಿದೆ. ಸಿಬ್ಬಂದಿ ಕೊರತೆ ನಡುವೆಯೂ ಹಾಳಾದ ಕಂಬಗಳ ಬದಲಾವಣೆ, ಕುಡಿಯುವ ನೀರು ಸಮಸ್ಯೆ ಬಗೆಹರಿಸುವಲ್ಲಿ ಕ್ರಮ ವಹಿಸಿರುವುದಾಗಿ ಎಇಇ ಚಂದ್ರಶೇಖರ್ ತಿಳಿಸಿದರು. ಆಗ, ಹಿರೇನಲ್ಲೂರು ಗ್ರಾ.ಪ. ಕಚೇರಿ ಪಕ್ಕದಲ್ಲಿರುವ ಟಿ.ಸಿ. ಬದಲಾಯಿಸದಿದ್ದಲ್ಲಿ ಅಪಘಾತ ತಪ್ಪಿದ್ದಲ್ಲ ಎಂದು ಸದಸ್ಯರು ಎಚ್ಚರಿಸಿದರು.
ಆಕ್ರೋಶ: 8474 ಮೇವಿನ ಬೀಜದ ಕಿಟ್ಗಳನ್ನು 38 ಪಶುವೈದ್ಯಕೀಯ ಕೇಂದ್ರಗಳಿಗೆ ವಿತರಿಸಿದ್ದು, ಅಲ್ಲಿಂದ ರೈತರಿಗೆ ಬೀಜ ವಿತರಣೆ ಆಗಬೇಕು ಎಂದಾಗ, ಪ್ರಭುಕುಮಾರ್ ಮತ್ತು ನಿಂಗಪ್ಪ ಇಲಾಖೆಯ ಯೋಜನೆಗಳ ಮಾಹಿತಿ ನೀಡಲು ಅಧಿಕಾರಿಗಳು ಏಕೆ ಹಿಂಜರಿಯುವಿರಿ? ಕನಿಷ್ಠ ಇಒ ಅವರಿಗಾದರೂ ಮಾಹಿತಿ ಕೊಟ್ಟರೆ ಅವರಿಂದ ನಾವು ಮಾಹಿತಿ ಪಡೆಯಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ, ಸಮಾಜ ಕಲ್ಯಾಣ, ಆರೋಗ್ಯ, ಶಿಕ್ಷಣ, ಅಕ್ಷರ ದಾಸೋಹ, ರೇಷ್ಮೆ, ಗ್ರಾಮೀಣ ಕೈಗಾರಿಕೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಾ.ಪಂ. ಅನುದಾನಕ್ಕೆ ಕ್ರಿಯಾಯೋಜನೆ ಮಂಡಿಸಿ ಅನುಮೋದನೆ ಪಡೆದರು.
ತಾ.ಪಂ. ಅಧ್ಯಕ್ಷ ಕೆ.ಎಂ. ಬಸವರಾಜಪ್ಪ ಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೋಭಾ ವೆಂಕಟೇಶ್, ವೈ.ಕೆ. ಬಸಪ್ಪ, ಇ.ಒ. ಮೂಕಪ್ಪಗೌಡ, ಓಂಕಾರಪ್ಪ, ರತ್ನ, ಸುನಿತಾ ಚಿದಾನಂದ, ಯಶೋದಾ ತಿಪ್ಪೇಶ್, ನೀಲಕಂಠಪ್ಪ, ಗೀತಾ ಪ್ರಭಾಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

